Home ಜಿಲ್ಲೆ ತುಮಕೂರು ತಾ.ಪಂ. ಇಓ ಮನೆ ದೋಚಿದ್ದ ಕಳ್ಳನ ಬಂಧನ

ತಾ.ಪಂ. ಇಓ ಮನೆ ದೋಚಿದ್ದ ಕಳ್ಳನ ಬಂಧನ

ತುಮಕೂರು, ಜು. ೧೬- ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಮನೆ ದೋಚಿದ್ದ ಉತ್ತರ ಪ್ರದೇಶದ ಕುಖ್ಯಾತ ಖದೀಮನನ್ನು ಎರಡೂವರೆ ವರ್ಷದ ಬಳಿಕ ಇಲ್ಲಿನ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ನಟೋರಿಯಸ್ ಕಳ್ಳ ಫಹೀಮ್ ಅಲಿಯಾಸ್ ಎಟಿಎಂ ಹೀಮ್ ಇಸ್ಲಾಮುದ್ದೀನ್ (೩೮) ಎಂಬಾತನೇ ಬಂಧಿತ ಆರೋಪಿ.


ಈತನನ್ನು ಪ್ರಯಾಗ್ ರಾಜ್ ಜೈಲಿನಿಂದ ಬಾಡಿವಾರೆಂಟ್ ಮೇಲೆ ಕರೆ ತಂದು ಡಿಸೆಂಬರ್ ೩೦, ೨೦೨೩ರಲ್ಲಿ ನಗರದ ಗೋಕುಲ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಿದ್ದ ತಾ.ಪಂ. ಇಒ ಎನ್. ಮಂಜುನಾಥ್ ಎಂಬುವರ ಮನೆ ಬೀಗ ಒಡೆದು ೪೦೧ ಗ್ರಾಂ ತೂಕದ ೫೫ ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಮನೆ ಬೀಗ ಹಾಕಿಕೊಂಡು ಕೆಲಸದ ನಿಮಿತ್ತ ಮಂಜುನಾಥ್ ತೆರಳಿದ್ದಾಗ ಈ ಕಳ್ಳತನ ನಡೆದಿತ್ತು. ಈ ಸಂದರ್ಭದಲ್ಲಿ ಮಗಳ ಮದುವೆ ಕಾರ್ಯವಿತ್ತು. ಜಯನಗರ ಠಾಣೆಯಲ್ಲಿ ಮನೆಗಳ್ಳತನ ಪ್ರಕರಣ ದಾಖಲಾಗಿತ್ತು.
ಉತ್ತರ ಪ್ರದೇಶದ ಮುರದಾಬಾದ್ ಜಿಲ್ಲೆಯ ಉಮರಿ ಕಲಾಗ್ರಾಮದ ಆರೋಪಿ ಫಹೀಮ್ ಬಳಿಯಿಂದ ೧೫೦ ಗ್ರಾಂ ೨೨೦ ಮಿ.ಲಿ. ತೂಕದ ಚಿನ್ನದ ಗಟ್ಟಿ, ೫೦ ಗ್ರಾಂ ೧೩೦ ಮಿಲಿ ತೂಕದ ಚಿನ್ನದ ಕೈ ಕಡಗ ಹಾಗೂ ೨೦೦ ಗ್ರಾಂ ೭೭೦ ಮಿಲಿ ತೂಕದ ಬಿಸ್ಕತ್ ಆಕಾರದ ಚಿನ್ನದ ಗಟ್ಟಿ ಸೇರಿ ಒಟ್ಟು ೪೦೧ ಗ್ರಾಂ ೧೨ ಮಿಲಿ ತೂಕದ ಅಂದಾಜು ೫೫ ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.


೬೬ ಪ್ರಕರಣಗಳಲ್ಲಿ ಭಾಗಿ
ನಟೋರಿಯಸ್ ಕ್ರಿಮಿನಲ್ ಫಹೀಮ್ ಸದ್ಯ ಪ್ರಯಾಗ್ ರಾಜ್ ಜೈಲಿನಲ್ಲಿದ್ದು, ಬೆಂಗಳೂರಿನ ನಂದಿನಿ ಲೇಔಟ್, ಬ್ಯಾಡರಹಳ್ಳಿ, ರಾಜಗೋಪಾಲನಗರ, ಕೊಡಿಗೇಹಳ್ಳಿ, ಬಣಸವಾಡಿ, ಅಮೃತಹಳ್ಳಿ, ಜ್ಞಾನಭಾರತಿ, ಹೆಣ್ಣೂರು, ಪೀಣ್ಯ, ಅನ್ನಪೂಣೇಶ್ವರಿ ನಗರ, ಆರ್‌ಎಂಡಿ ಯಾರ್ಡ್ ಪೊಲೀಸ್ ಠಾಣೆ ಸೇರಿ ವಿವಿಧ ಠಾಣೆಗಳಲ್ಲಿ ೨೯ ಪ್ರಕರಣಗಳು ಹಾಗೂ ಆಂಧ್ರ ಪ್ರದೇಶದಲ್ಲಿ ೧, ರಾಜಸ್ಥಾನ ೧, ಹರಿಯಾಣ ೧, ಉತ್ತರಾಖಂಡ ೨, ಉತ್ತರ ಪ್ರದೇಶ ೩೦, ಲಕ್ನೋದಲ್ಲಿ ೧ ಹಾಗೂ ಛತ್ತೀಸ್‌ಘಡದಲ್ಲಿ ೧ ಪ್ರಕರಣ ಸೇರಿದಂತೆ ಒಟ್ಟು ೬೬ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ ಎಂದು ಮಾಹಿತಿ ನೀಡಿದರು.


ಡಿವೈಎಸ್ಪಿ ಕೆ.ಆರ್. ಚಂದ್ರಶೇಖರ್ ನೇತೃತ್ವದಲ್ಲಿ ತಿಲಕ್‌ಪಾರ್ಕ್ ಸಿಪಿಐ, ಎನ್?.ಕೆ.ನದಾಫ್, ಜಯನಗರ ಠಾಣೆ ಪಿಎಸ್‌ಐ ಎನ್. ಮೋಹನ್ ರವರನ್ನೊಳಗೊಂಡ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಶ್ರಮಿಸಿದೆ ಎಂದು ಅವರು ತಿಳಿಸಿದರು.