Home Lead News ಹಿರಿಯ ನಟ ಅನಂತ್ ನಾಗ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ

ಹಿರಿಯ ನಟ ಅನಂತ್ ನಾಗ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ

ಅಹಮದಾಬಾದ್,ಸೆ.22-ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವ ಎನಿಸಿರುವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಗುಜರಾತ್ ನ ಕೆವಾಡಿಯಾದಲ್ಲಿಂದು ನಡೆದ 72 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ಅನಂತ್ ನಾಗ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿದರು.


ಚಿತ್ರರಂಗದಲ್ಲಿ ಐದೂವರೆ ದಶಕಗಳ ಕಾಲ ಗಣನೀಯ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಅನಂತ್ ನಾಗ್ ಅವರಿಗೆ ಫಾಲ್ಕೆ ಪ್ರಶಸ್ತಿ ಲಭಿಸಿದೆ.


1948ರ ಸೆ. 4ರಂದು ಅನಂತ್ ನಾಗ್ ಅವರು ಉತ್ತರ ಕನ್ನಡದ ಶಿರಳ್ಳಿ ಎಂಬಲ್ಲಿ ಜನಿಸಿದರು. 1973ರ ‘ಸಂಕಲ್ಪ’ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದ ಅನಂತ್ ನಾಗ್, ಆನಂತರದಲ್ಲಿ ಶ್ಯಾಮ್ ಬೆನಗಲ್ ಅವರ ಅಂಕುರ್, ಬಯಲುದಾರಿ, ನಾ ನಿನ್ನ ಬಿಡಲಾರೆ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದರು. ತಮ್ಮ ಆರಂಭಿಕ ಚಿತ್ರ ಜೀವನದಲ್ಲಿ ದೊಡ್ಡ ಯಶಸ್ಸು ಗಳಿಸಿದರು.


250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅನಂತ್‌ ನಾಗ್‌, ಯಾವುದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ಅಭಿನಯಿಸಬಲ್ಲ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


ಸುಮಂತ್ ಭಟ್ ಮಿಥ್ಯ ಚಿತ್ರಕ್ಕೆ ರಜತ ಕಮಲ ಪ್ರಶಸ್ತಿ ಸ್ವೀಕರಿಸಿದರು. ಇಂಬು ತುಳು ಸಿನಿಮಾ ತಂಡಕ್ಕೂ ಪ್ರಶಸ್ತಿ ಪ್ರದಾನ ಮಾಡಲಾಯಿತು. ತಮಿಳು ನಟ ಧನುಷ್‌ ಕ್ಯಾಪ್ಟನ್ ಮಿಲ್ಲರ್ ಸಿನೆಮಾ ಹಾಗೂ ರಾಯನ್ ಸಿನೆಮಾ ನಿರ್ದೇಶನಕ್ಕೆ ರಜತ ಕಮಲ ಸ್ವೀಕರಿಸಿದರು.


ಆರ್ಟಿಕಲ್ 370 ಸಿನಿಮಾಗೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ, ಯಾಮಿ ಗೌತಮ್ ಅವರಿಗೆ ಅತ್ಯುತ್ತಮ ನಟಿ ಹಾಗೂ ಬ್ರಹ್ಮಯುಗಂ ಚಿತ್ರದ ನಟನೆಗಾಗಿ ಮಮ್ಮುಟ್ಟಿ ಮತ್ತು ಚಂದು ಚಾಂಪಿಯನ್ ಚಿತ್ರದ ನಟನೆಗಾಗಿ ಕಾರ್ತಿಕ್ ಆರ್ಯನ್ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅಮರನ್ ಚಿತ್ರದ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.