
ಬೆಂಗಳೂರು,ಸೆ. ೨೨- ಆದಾಯಕ್ಕಿಂತಲೂ ನೂರಾರು ಪಟ್ಟು ಅಕ್ರಮ ಆಸ್ತಿ ಗಳಿಕೆ, ಭ್ರಷ್ಟಾಚಾರ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಏಕಕಾಲದಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ೮ ಮಂದಿ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿ ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿಪಾಸ್ತಿಗಳನ್ನು ಪತ್ತೆಹಚ್ಚಿದ್ದಾರೆ.
ಬಲೆಗೆ ಬಿದ್ದಿರುವ ೮ ಮಂದಿ ಭ್ರಷ್ಟ ಸರ್ಕಾರಿ ಅಧಿಕಾರಿಗಳ ಕಚೇರಿ ಮನೆ ಸಂಬಂಧಿಕರ ಮನೆಗಳ ಇಂದು ಮುಂಜಾನೆಯಿಂದಲೇ ಎಸ್ ಪಿಗಳ ನೇತೃತ್ವದಲ್ಲಿ ಏಕಕಾಲದಲ್ಲಿ ದಾಲಿ ನಡೆಸಿ ಅಪಾರ ಪ್ರಮಾಣದ ನಗದು ಚಿನ್ನಾಭರಣಗಳು,ಐಷಾರಾಮಿ ವಸ್ತುಗಳು,ಆಸ್ತಿಪಾಸ್ತಿಗಳ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ಕೈಗೊಂಡಿದ್ದಾರೆ.
ಬೆಂಗಳೂರು, ಬೀದರ್,ಮಂಡ್ಯ, ಚಿಕ್ಕಬಳ್ಳಾಪುರ,ಕೊಡಗು ಜಿಲ್ಲೆಗಳಲ್ಲಿ ದಾಳಿ ನಡೆಸಿರುವ ೮ ಮಂದಿ ಭ್ರಷ್ಟ ಅಧಿಕಾರಿಗಳ ಕಚೇರಿ ಮನೆಗಳ ಮೇಲಿನ ದಾಳಿಯೂ ಮುಂದುವರೆದಿದ್ದು,ಸಂಜೆ ವೇಳೆ ದಾಳಿಯಲ್ಲಿ ಪತ್ತೆಯಾಗಿರುವ ನಗದು ಚಿನ್ನಾಭರಣಗಳು, ಐಷಾರಾಮಿ ವಸ್ತುಗಳು, ವಿದೇಶಿ ಮದ್ಯಗಳು ಸೇರಿ ಅಪಾರ ಪ್ರಮಾಣದ ಆಸ್ತಿಪಾಸ್ತಿಗಳ ದಾಖಲೆ ಪತ್ರಗಳ ಒಟ್ಟಾರೆ ಮೌಲ್ಯ ಲಭ್ಯವಾಗಲಿದೆ.
ಲೋಕಾಯುಕ್ತ ಅಧಿಕಾರಿಗಳ ತಂಡಗಳು ವಿವಿಧ ಸ್ಥಳಗಳಲ್ಲಿ ದಾಖಲೆಗಳು, ಆಸ್ತಿ-ಪಾಸ್ತಿ ವಿವರಗಳು ಹಾಗೂ ಇತರೆ ಸಂಬಂಧಿತ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕೃಷಿ ಇಲಾಖೆಯ ನಿವೃತ್ತ ಆಡಳಿತಾಧಿಕಾರಿ ಮಾಣೀಕ್ ಶೆರಿಕಾರ್ ಅವರ ಬೀದರ್ ನಗರದ ಹಳ್ಳಿ ಕಾಲೋನಿ ನಿವಾಸ, ಹುಮ್ನಾಬಾದ್‌ನ ನಿವಾಸ ಮತ್ತು ಚಿಟಗುಪ್ಪ ತಾಲೂಕಿನ ಮುತ್ತಂಗಿಯ ಗ್ರಾಮದ ಬಳಿ ಇರುವ ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತ ಡಿವೈಎಸ್ಪಿ ಹನುಮಂತ ರೆಡ್ಡಿ ನೇತೃತ್ವದ ತಂಡ ದಾಳಿ ನಡೆಸಿದೆ.
ಮೂರು ಕಡೆಗಳಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳ ತಂಡ ತೀವ್ರ ತಪಾಸಣೆ ನಡೆಸಿದೆ.
ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ರಾಜೇಶ್ವರಿ ಅವರ ಕಚೇರಿ ಕಲಬುರಗಿ ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ರಾಜೇಶ್ವರಿ ಅವರ ನಿವಾಸ ಹಾಗೂ ಖಾದ್ರಿ ಚೌಕ್‌ನಲ್ಲಿರುವ ಮತ್ತೊಂದು ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇದರ ಜತೆಗೆ ಜೆಸ್ಕಾಂ ಕಚೇರಿಯ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳು ಹಾಗೂ ಆಸ್ತಿ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.

ಒಂದೇ ಸಮಯದಲ್ಲಿ ಎರಡು ಮನೆಗಳು ಹಾಗೂ ಕಚೇರಿ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ಆದಾಯದ ಮೂಲಗಳು, ಆಸ್ತಿ-ಪಾಸ್ತಿ, ಹಣಕಾಸು ವ್ಯವಹಾರಗಳು ಸೇರಿದಂತೆ ವಿವಿಧ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕಲಬುರಗಿಯಲ್ಲೂ ದಾಳಿ
ಜೆಸ್ಕಾಂ ಎಇಇ ರಾಜೇಶ್ವರಿ ಅವರ ಎರಡು ಮನೆ ಹಾಗೂ ಕಛೇರಿ ಮೇಲೆ ಇಂದು ಬೆಳಿಗ್ಗೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿ ನಡೆದಿದೆ.
ಕಲಬುರಗಿ ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಮನೆ,ಖಾದ್ರಿ ಚೌಕ್‌ನಲ್ಲಿಯ ಇನ್ನೊಂದು ಮನೆ ಹಾಗೂ ಕಲಬುರಗಿಯ ಅವರ ಜೆಸ್ಕಾಂ ಕಛೇರಿಯ ಮೇಲೂ ಲೋಕಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿದೆ.
ಬೆಳಿಗ್ಗೆ ವಾಕಿಂಗ್ ಹೋಗಿದ್ದ ಅಧಿಕಾರಿ ಮನೆಗೆ ಬರುವುದರೊಳಗೆ ಲೋಕಾಯುಕ್ತರು ದಾಳಿ ನಡೆಸಿ ಶಾಕ್ ನೀಡಿದ್ದಾರೆ.
ದಾಳಿ ನಡೆದ ಅಧಿಕಾರಿಗಳ ವಿವರ
- ದರ್ಶನ್ ಗೌಡ – ಪ್ರಥಮ ದರ್ಜೆ ಸಹಾಯಕ, ಜಿಲ್ಲಾಧಿಕಾರಿಗಳ ಕಚೇರಿ, ಚಿಕ್ಕಬಳ್ಳಾಪುರ.
- ರಂಗನಾಥ್ ಹೆಚ್.ಎಂ. – ನಿವೃತ್ತ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ), ಬಿಬಿಎಂಪಿ, ಬೆಂಗಳೂರು.
- ಶ್ರೀದೇವಿ – ಜಿಲ್ಲಾ ನೋಂದಣಾಧಿಕಾರಿ, ಬೆಂಗಳೂರು.
- ಹೆಚ್.ಆರ್. ರಮೇಶ್ – ಪೌರಾಯುಕ್ತರು, ನಗರಸಭೆ, ಮಡಿಕೇರಿ.
- ಕಿರಣ್ ಕುಮಾರ್ ಬೈಂದೂರ್ – ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ), ಹೆಸ್ಕಾಂ, ಹುಬ್ಬಳ್ಳಿ-ಧಾರವಾಡ.
- ರಾಜೇಶ್ವರಿ – ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ), ಜೆಸ್ಕಾಂ, ಕಲಬುರಗಿ.
- ಮಾಣಿಕ್ ರಾವ್ – ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಬೀದರ್.
- ಶಿವರಾಜು – ಹಾಸ್ಟೆಲ್ ಸೂಪರಿಂಟೆಂಡೆಂಟ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಂಡ್ಯ.























