
ಬೆಂಗಳೂರು, ಸೆ. ೨೧- ರೈತರ ರಕ್ಷಣೆ ನಮ್ಮ ಬದ್ಧತೆ, ರೈತರ ರಕ್ಷಣೆ ವಿಚಾರದಲ್ಲಿ ನಾನು ರಾಜಕಾರಣವನ್ನು ಬದಿಗಿಟ್ಟು ಒಗ್ಗೂಡಿ ಎಲ್ಲರೂ ರೈತರ ರಕ್ಷಣೆ ಮಾಡೋಣ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಧಾನಸಭೆಯಲ್ಲಿಂದು ಹೇಳಿದರು.
ಪಶ್ಚಿಮಘಟ್ಟ ಭಾಗದ ಜನರ ಬದುಕಿಗೆ ಮಾರಕ ಎನಿಸಿರುವ ಡಾ. ಕಸ್ತೂರಿ ರಂಗನ್ ವರದಿ ಬಗ್ಗೆ ವಿಧಾನಸಭೆಯಲ್ಲಿಂದು ಮಹತ್ವದ ಚರ್ಚೆ ನಡೆದಿದ್ದು, ಪ್ರಾಸ್ತಾವಿಕವಾಗಿ ಚರ್ಚೆಯ ಆರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಕಸ್ತೂರಿ ರಂಗನ್ ವರದಿಯ ಜಾರಿಯಿಂದ ಪಶ್ಚಿಮಘಟ್ಟದ ಜನರ ಬದುಕಿಗೆ ತೊಂದರೆಯಾಗುತ್ತದೆ ಎಂಬ ಆತಂಕ ವ್ಯಕ್ತವಾಗಿದೆ. ರೈತರ ಆತಂಕವನ್ನು ದೂರ ಮಾಡಿ ಅವರ ರಕ್ಷಣೆ ಮಾಡುವ ಬದ್ಧತೆ, ಆಶಯದೊಂದಿಗೆ ಈ ವಿಶೇಷ ಅಧಿವೇಶನವನ್ನು ಕರೆದಿದ್ದೇನೆ. ರೈತರ ರಕ್ಷಣೆ ನಮ್ಮ ಬದ್ಧತೆ ಎಂದರು.
ಪಶ್ಚಿಮಘಟ್ಟಕ್ಕೆ ಸಂಬಂಧಿಸಿದಂತೆ ಕಸ್ತೂರಿ ರಂಗನ್ ವರದಿಯ ೧೦ ಜಿಲ್ಲೆಗಳ ಬದುಕಿಗೆ ಮಾರಕ, ಭಯದ ವಾತಾವರಣ ಆ ಭಾಗದಲ್ಲಿದ್ದು, ರೈತರ ಭಯ ಆತಂಕವನ್ನು ದೂರ ಮಾಡಲು ಏನು ಮಾಡಬೇಕು, ಯಾವ ರೀತಿಯ ತೀರ್ಮಾನಗಳನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕು ಎಂಬ ಬಗ್ಗೆ ಜನಪ್ರತಿನಿಧಿಗಳ ಅಭಿಪ್ರಾಯ ಪಡೆಯಲು ಈ ಅಧಿವೇಶನ ನಡೆಸಲಾಗುತ್ತಿದೆ. ಈ ಅಧಿವೇಶನದಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ಜನರ ಬದುಕನ್ನು ರಕ್ಷಿಸಲು ಏನೆಲ್ಲಾ ಮಾಡಬೇಕೋ ಅದನ್ನು ನಾವು ನೀವು ಒಟ್ಟಾಗಿ ಮಾಡೋಣ. ರಾಜಕೀಯ ಬದಿಗಿಟ್ಟು ರೈತರ ರಕ್ಷಣೆ ಮಾಡೋಣ ಎಂದರು
ಕಸ್ತೂರಿ ರಂಗನ್ ವರದಿಯ ಭಯ ನಿವಾರಣೆಗೆ ಯಾವ ರೀತಿ ಕ್ರಮ ಕೈಗೊಳ್ಳಬೇಕು, ಏನು ಪರಿಹಾರ ಎಲ್ಲವನ್ನು ಚರ್ಚೆ ಮಾಡೋಣ. ಜನರ ಭಾವನೆ ಮೇಲೆ ನಾವುಗಳೆಲ್ಲಾ ತೀರ್ಮಾನ ಮಾಡಬೇಕಿದೆ ಎಂದು ಹೇಳಿದರು.
ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ವರದಿಯನ್ನು ತಿರಸ್ಕರಿಸಬೇಕು. ವರದಿ ಅಧ್ಯಯನಕ್ಕೆ ಉನ್ನತ ಮಟ್ಟದ ಸಮಿತಿ ರಚಿಸಬೇಕೋ, ಭೌತಿಕ ಸಮಿತಿ ರಚಿಸಬೇಕೋ, ಕೇರಳ ಮಾದರಿ ರಚಿಸಬೇಕೋ. ವಿಧಾನಸಭೆಯಲ್ಲಿ ವರದಿ ಜಾರಿ ವಿರೋಧಿಸಿ ನಿರ್ಣಯ ಕೈಗೊಳ್ಳಬೋಕೋ, ಕೇಂದ್ರ ಸರ್ಕಾರಕ್ಕೆ ಸರ್ವಪಕ್ಷಗಳ ನಿಯೋಗ ಕರೆದೊಯ್ಯಬೇಕು ಹೀಗೆ ಹತ್ತು ಹಲವು ಸಲಹೆಗಳು ಬಂದಿವೆ. ಸರ್ಕಾರವೇ ಈ ಬಗ್ಗೆ ತೀರ್ಮಾನ ಮಾಡುವುದು ಬೇಡ. ವಿಧಾನಸಭೆಯಲ್ಲಿ ಈ ಬಗ್ಗೆ ತೀರ್ಮಾನ ಮಾಡೋಣ ಎಂಬ ಆಶಯದೊಂದಿಗೆ ಅಧಿವೇಶನ ಕರೆದಿದ್ದೇನೆ. ರೈತರ ಬದುಕನ್ನು ರಕ್ಷಿಸಲು ಏನು ಮಾಡಬೇಕು ಎಂಬ ಸಲಹೆಗಳನ್ನು ಜನಪ್ರತಿನಿಧಿಗಳು ನೀಡಿದರೆ ಅದನ್ನು ಸರ್ಕಾರ ಸ್ವೀಕಾರ ಮಾಡುತ್ತದೆ ಎಂದರು.
ಈ ಹಿಂದೆ ಅಧಿವೇಶನ ನಡೆದಿತ್ತಾದರೂ ಪ್ರತಿಪಕ್ಷಗಳ ರಾಜಕೀಯ ಉದ್ದೇಶದಿಂದ ಏನನ್ನೂ ಚರ್ಚೆ ಮಾಡಲು ಆಗಲಿಲ್ಲ. ಜನರ ಭಾವನೆ ಬದುಕು ಮುಖ್ಯ. ಈಗಾಗಲೇ ರಾಜ್ಯದಲ್ಲಿ ಬರ ಇದೆ. ೧೨೩ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದೇವೆ. ಹಾಗಾಗಿ ಈ ಎಲ್ಲ ವಿಚಾರಗಳ ಬಗ್ಗೆ ಚರ್ಚಿಸಲು ಅಧಿವೇಶನ ಕರೆದಿದ್ದೇವೆ. ನಾನು ಬರಪೀಡಿತ ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ಅಲ್ಲಿನ ಪರಿಸ್ಥಿತಿಯನ್ನು ಕಣ್ಣಾರೆ ನೋಡಿದ್ದೇನೆ. ಶಾಸಕರುಗಳ ಜತೆಯೂ ಸಭೆಗಳನ್ನು ನಡೆಸಿ ಚರ್ಚಿಸಿದ್ದೇನೆ ಎಂದರು
ರೈತರಿಗೆ ತೊಂದರೆಯಾದರೆ ಅವರ ನೋವಿಗೆ ನಾವು ಸ್ಪಂದಿಸಬೇಕು. ಈ ಹಿಂದಿನ ಅಧಿವೇಶನದಲ್ಲಿ ಪ್ರತಿಪಕ್ಷಗಳು ರಾಜಕೀಯವಾಗಿ ಸಚಿವರೊಬ್ಬರ ರಾಜೀನಾಮೆಗೆ ಆಗ್ರಹಿಸಿ ಹೋರಾಟ ಮಾಡಿದ್ದರಿಂದ ಯಾವ ವಿಚಾರವೂ ಚರ್ಚೆಯಾಗಲಿಲ್ಲ. ನಿರಪರಾಧಿ ಸಚಿವರೊಬ್ಬರು ರಾಜೀನಾಮೆ ನೀಡಿದಂತಾಯಿತು ಎಂದು ಹೇಳಿದರು.
ನಾನು ಪಶ್ಚಿಮಘಟ್ಟದ ಪ್ರದೇಶದಲ್ಲೂ ಕಳೆದ ೩-೪ ದಿನಗಳಲ್ಲಿ ನಾನು ಪ್ರವಾಸ ಕೈಗೊಂಡು ಕಸ್ತೂರಿ ರಂಗನ್ ವರದಿ ಅಲ್ಲಿನ ರೈತರ ದುಃಖ ದುಮ್ಮಾನಗಳನ್ನು ಕೇಳಿ ಬಂದಿದ್ದೇನೆ. ಈ ವಿಚಾರದಲ್ಲಿ ಸರ್ಕಾರ ನಡೆ ನಿಲುವು ಏನಿರಬೇಕು ಎಂಬ ಬಗ್ಗೆ ಈ ಸದನದಲ್ಲೇ ಮಾಡೋಣ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

































