
ಬೆಂಗಳೂರು,ಸೆ.೨೨-ನಗರದ ಹೊರವಲಯದ ಆನೇಕಲ್ ನಲ್ಲಿ ಅಕ್ರಮವಾಗಿ ಗನ್ ಡೀಲಿಂಗ್ ನಡೆಸುತ್ತಿದ್ದ ೬ ಮಂದಿ ರೌಡಿಗಳು ಸೇರಿ ಏಳು ಮಂದಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಮನೋಜ್ ಅಲಿಯಾಸ್ ಜಾಕಿ, ರಿಜ್ವಾನ್ ಪಾಷ ಅಲಿಯಾಸ್ ಕುಳ್ಳ ರಿಜ್ವಾನ್, ನಂಜಪ್ಪ ಅಲಿಯಾಸ್ ಡೆಡ್ಲಿ ನಂಜ, ವೆಂಕಟರಾಜು ಅಲಿಯಾಸ್ ತುಕಡಿ, ಗೋಪಿ ಅಲಿಯಾಸ್ ಸುಣವಾರ ಗೋಪಿ,ಪ್ರದೀಪ್ ರಮೇಶ್,ಹಾಗೂ ಶಿವರಾಜ್ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಲ್ಲಿ ಆರು ಮಂದಿ ರೌಡಿ ಶೀಟರ್‌ಗಳಾಗಿದ್ದು, ಅವರಿಂದ ಐದು ಕಂಟ್ರಿ ಮೇಡ್ ಪಿಸ್ತೂಲ್ ಹಾಗೂ ೧೦ ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆನೇಕಲ್ ಠಾಣಾ ಇನ್ಸ್‌ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡವು ಕಳೆದ ತಿಂಗಳ ೧೪ರಂದು ಆನೇಕಲ್ ಸಮೀಪದ ಹಾಲ್ಲೇನಹಳ್ಳಿ ರೈಲ್ವೆ ಬಳಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಬ್ಯಾಗ್ ಹಿಡಿದು ಅನುಮಾನಾಸ್ಪದವಾಗಿ ನಿಂತಿದ್ದ ಕೆಲವರನ್ನು ತಡೆದು ವಿಚಾರಣೆ ನಡೆಸಿದ್ದರು.
ಬ್ಯಾಗ್ ಪರಿಶೀಲಿಸಿದಾಗ ಮೂರು ಕಂಟ್ರಿ ಮೇಡ್ ಪಿಸ್ತೂಲ್ ಹಾಗೂ ೧೦ ಗುಂಡುಗಳು ಪತ್ತೆಯಾಗಿದ್ದವು.ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಅಕ್ರಮ ಗನ್ ಮಾರಾಟ ಜಾಲದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಳಿಕ ತನಿಖೆ ವಿಸ್ತರಿಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆರೋಪಿಗಳನ್ನು ಬಂಧಿಸಿದ್ದಾರೆ.
ಮಧ್ಯಪ್ರದೇಶದಿಂದ ಸಾಗಾಣೆ:
ತನಿಖೆ ವೇಳೆ ಮಧ್ಯಪ್ರದೇಶದ ಬೇಡ ಘಾಟ್ ಗ್ರಾಮದ ದಾವೂದ್ ಎಂಬಾತ ಈ ಅಕ್ರಮ ದಂಧೆಯ ಪ್ರಮುಖ ಕಿಂಗ್‌ಪಿನ್ ಎನ್ನಲಾಗಿದೆ. ದಾವೂದ್, ಪ್ರದೀಪ್ ರಮೇಶ್ ಮೂಲಕ ರೈಲಿನಲ್ಲಿ ಆನೇಕಲ್‌ಗೆ ಗನ್‌ಗಳನ್ನು ಕಳುಹಿಸಿದ್ದ ಎಂಬ ಮಾಹಿತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆನೇಕಲ್‌ಗೆ ಗನ್‌ಗಳನ್ನು ತಂದಿದ್ದ ಪ್ರದೀಪ್ ರಮೇಶ್ ಅವುಗಳನ್ನು ಡೆಲಿವರಿ ಮಾಡಲು ಕಾಯುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ತಿಳಿದುಬಂದಿದೆ.
ರೌಡಿಗಳಿಗೆ ಮಾರಾಟ:
ತನಿಖೆ ಮುಂದುವರಿಸಿದಾಗ ಎರಡು ಕಂಟ್ರಿ ಮೇಡ್ ಪಿಸ್ತೂಲ್‌ಗಳನ್ನು ಮಾರಾಟ ಮಾಡಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.
ಕೆ.ಜಿ.ಹಳ್ಳಿ ನಿವಾಸಿ ರೌಡಿ ಶೀಟರ್ ಕುಳ್ಳ ರಿಜ್ವಾನ್ ಹಾಗೂ ಮತ್ತೊಬ್ಬ ರೌಡಿ ಶೀಟರ್ ಮನೋಜ್ ಅಲಿಯಾಸ್ ಜಾಕಿಗೆ ತಲಾ ಒಂದೊಂದು ಪಿಸ್ತೂಲ್ ಮಾರಾಟ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಬಳಿಕ ಆರೋಪಿಗಳ ಬಳಿಯಿದ್ದ ಆ ಎರಡು ಪಿಸ್ತೂಲ್‌ಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಕ್ರಮ ಗನ್ ದಂಧೆಯ ಹಿಂದೆ ಪ್ರಭಾವಿ ರಾಜಕಾರಣಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ಸಂಪರ್ಕವಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗನ್ ಸಾಗಾಣೆದಾರರ ಜೊತೆ ಸಂಪರ್ಕ ಹೊಂದಿರುವ ಹಲವು ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.
























