
೯೨ಲಕ್ಷ ಜಪ್ತಿ ಉಲ್ಲೇಖ
ಬೆಂಗಳೂರು,ಸೆ.೨೨-ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಅಕ್ರಮದ ತನಿಖೆ ನಡೆಸಿರುವ ಸಿಐಡಿ, ಹಣ ವರ್ಗಾವಣೆ ಹಾಗೂ ಹುದ್ದೆಗಳ ಮಾರಾಟದ ಆರೋಪಗಳಿಗೆ ಸಂಬಂಧಿಸಿದ ಹಲವು ಮಹತ್ವದ ಮಾಹಿತಿಗಳನ್ನು ಸರ್ಕಾರಕ್ಕೆ ಸಲ್ಲಿಸಿರುವ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ.
ಪಶುವೈದ್ಯಾಧಿಕಾರಿ ಹುದ್ದೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಒಟ್ಟು ೯೨ ಲಕ್ಷ ಹಣವನ್ನು ಜಪ್ತಿ ಮಾಡಿದೆ. ಭಾಲ್ಕಿಯ ಓಂ ಲಕ್ಷ್ಮೀ ಸೌಹಾರ್ದ ಸಹಕಾರಿ ಬ್ಯಾಂಕ್ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್ ಖಾತೆಗಳಿಗೆ ೯೨ ಲಕ್ಷ ಜಮೆಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಮಧ್ಯವರ್ತಿ ಕನ್ನಾಳೆ ಸೂಚನೆಯಂತೆ ಐವರು ಅಭ್ಯರ್ಥಿಗಳು ಹಣ ವರ್ಗಾಯಿಸಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸಿದ್ದಾರ್ಥ್ ೨೦ ಲಕ್ಷ, ವಿ. ಬಸವರಾಜ್ ೨೭ ಲಕ್ಷ, ಮಹೇಂದ್ರ ೨೫ ಲಕ್ಷ ಹಾಗೂ ನಿರಂಜನ್ ೧೪ ಲಕ್ಷವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರೆ, ಕಿರಣ್ ಗೌಡ ೧೦ ಲಕ್ಷ, ಸಲೀಂ ೩೦ ಲಕ್ಷ ಹಾಗೂ ಮೊಹಮದ್ ಸುಹೈಲ್ ೨೦ ಲಕ್ಷವನ್ನು ನಗದು ರೂಪದಲ್ಲಿ ನೀಡಿದ್ದರು ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
೬೦-೮೦ ಪ್ರಶ್ನೆಗಳ ಅಭ್ಯಾಸ:
ಅಭ್ಯರ್ಥಿಗಳು, ಮಧ್ಯವರ್ತಿಗಳು ಹಾಗೂ ಕನ್ನಾಳೆ ನಡುವೆ ವಾಟ್ಸಾಪ್ ಮೂಲಕ ಸಂವಹನ ನಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪರೀಕ್ಷೆಗೂ ಮುನ್ನ ಗ್ಯಾಂಗ್ ಅಭ್ಯರ್ಥಿಗಳಿಗೆ ಸುಮಾರು ೬೦ರಿಂದ ೮೦ ಪ್ರಶ್ನೆಗಳನ್ನು ನೀಡಿತ್ತು ಎನ್ನಲಾಗಿದೆ. ಐವರು ಅಭ್ಯರ್ಥಿಗಳಿಗೆ ಪ್ರಶ್ನೆಗಳಿಗೆ ಉತ್ತರಿಸುವ ಅಭ್ಯಾಸವನ್ನೂ ಮಾಡಿಸಲಾಗಿತ್ತು ಎಂದು ಸಿಐಡಿ ವರದಿ ಹೇಳಿದೆ.
ಕನ್ನಾಳೆ ಮಧ್ಯವರ್ತಿ ಪವನ್ ಮೂಲಕ ಅಭ್ಯರ್ಥಿಗಳನ್ನು ಸಂಪರ್ಕಿಸಿದ್ದ ಎನ್ನಲಾಗಿದೆ. ಸಿದ್ದಾರ್ಥ್, ರಾಜ್ ಮೊಹಮದ್, ಬಸವರಾಜ್, ಮಹೇಂದ್ರ ಹಾಗೂ ನಿರಂಜನ್ ಅವರೊಂದಿಗೆ ಸಂಪರ್ಕ ಹೊಂದಿದ್ದರೆ, ವಿನೋದ್, ಕಿರಣ್ ಗೌಡ ಹಾಗೂ ಚೈತ್ರಾ ನೇರವಾಗಿ ಸಂಪರ್ಕದಲ್ಲಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಒಟ್ಟು ೪೦ ಅಭ್ಯರ್ಥಿಗಳನ್ನು ವಿಚಾರಣೆ ನಡೆಸಿದೆ.
ವಜ್ರದ ಹಾರ ಜಪ್ತಿ:
ಅಕ್ರಮ ನೇಮಕಾತಿ ಪ್ರಕರಣದ ತನಿಖೆ ವೇಳೆ ಸುಮಾರು ೨೨ ಲಕ್ಷ ಮೌಲ್ಯದ ವಜ್ರದ ಹಾರವನ್ನೂ ಸಿಐಡಿ ಜಪ್ತಿ ಮಾಡಿದೆ. ಗ್ಯಾನೇಂದ್ರ ತನ್ನ ಸ್ನೇಹಿತೆಗಾಗಿ ಚಿನ್ನಾಭರಣ ಖರೀದಿಸಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಇನ್ನು ಮಧ್ಯವರ್ತಿ ಬಸವರಾಜ್‌ನಿಂದ ೫.೭೬ ಲಕ್ಷ ಹಣವನ್ನು ಸಿಐಡಿ ಜಪ್ತಿ ಮಾಡಿದೆ. ಕನ್ನಾಳೆ ಹಾಗೂ ಅವರ ಪತ್ನಿಯ ಬ್ಯಾಂಕ್ ಖಾತೆಗಳಲ್ಲಿದ್ದ ೭೧.೧೮ ಲಕ್ಷ ಹಣವನ್ನು ಫ್ರೀಜ್ ಮಾಡಲಾಗಿದೆ.
ಎಸ್‌ಐಟಿ ತನಿಖೆ ಆರಂಭ
ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಎಸ್‌ಐಟಿ ತನಿಖೆ ಆರಂಭವಾಗಿದೆ. ಇಂದು ಅಥವಾ ನಾಳೆ ತನಿಖಾ ತಂಡದ ಸಭೆ ನಡೆಯುವ ಸಾಧ್ಯತೆ ಇದ್ದು, ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದ ಕಡತಗಳು, ಸಿಐಡಿ ತನಿಖಾ ದಾಖಲೆಗಳು ಹಾಗೂ ಸಾಕ್ಷ್ಯಗಳನ್ನು ಎಸ್‌ಐಟಿ ಪರಿಶೀಲಿಸಲಿದೆ.
ಈ ಹಿಂದೆ ಸಿಐಡಿ ವಿಚಾರಣೆ ಎದುರಿಸಿರುವ ಅಭ್ಯರ್ಥಿಗಳು ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರಿಗೂ ಎಸ್‌ಐಟಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆ ಇದೆ. ಅಭ್ಯರ್ಥಿಗಳು, ಮಧ್ಯವರ್ತಿಗಳು, ಕೆಪಿಎಸ್‌ಸಿ ಸಿಬ್ಬಂದಿ ಹಾಗೂ ಕೆಪಿಎಸ್‌ಸಿ ಸದಸ್ಯರನ್ನೂ ಎಸ್‌ಐಟಿ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಎಸ್‌ಐಟಿಗೆ ಠಾಣಾ ಮಾನ್ಯತೆ:
ಕೆಪಿಎಸ್‌ಸಿ ನೇಮಕಾತಿ ಅಕ್ರಮದ ಕುರಿತು ಹೈಕೋರ್ಟ್ ಎಸ್‌ಐಟಿ ರಚಿಸಲು ಆದೇಶಿಸಿದ್ದು, ಎಸ್‌ಐಟಿಗೆ ಪೊಲೀಸ್ ಠಾಣೆಯ ಮಾನ್ಯತೆ ನೀಡುವ ಬಗ್ಗೆಯೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿಗೆ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಅವಕಾಶ ದೊರೆತಿದೆ.
ಎಸ್‌ಐಟಿಗೆ ಪೊಲೀಸ್ ಠಾಣೆಯ ಮಾನ್ಯತೆ ಇಲ್ಲ ಎಂಬ ವಿಚಾರ ಈ ಹಿಂದೆ ನ್ಯಾಯಾಲಯದಲ್ಲಿ ಚರ್ಚೆಯಾಗಿತ್ತು. ಇದೀಗ ಹೈಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಎಸ್‌ಐಟಿ ಹೊಸದಾಗಿ ತನಿಖಾ ಪ್ರಕ್ರಿಯೆ ಆರಂಭಿಸಲಿದೆ. ತನಿಖೆ ವೇಳೆ ಆರೋಪಿಗಳ ವಿಚಾರಣೆ ಅಗತ್ಯವೆಂದು ಕಂಡುಬಂದರೆ, ಅವರನ್ನು ಮತ್ತೆ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯೂ ಇದೆ.
























