Home ಜಿಲ್ಲೆ ಬೆಂಗಳೂರು ಆಡಳಿತ -ವಿಪಕ್ಷಗಳ ವಾಕ್ಸಮರ

ಆಡಳಿತ -ವಿಪಕ್ಷಗಳ ವಾಕ್ಸಮರ

ಬೆಂಗಳೂರು, ಸೆ. ೨೧- ಕಸ್ತೂರಿ ರಂಗನ್ ವರದಿ ಹಾಗೂ ಬರದ ಬಗ್ಗೆ ಚರ್ಚೆ ನಡೆಸಲು ಇಂದಿನಿಂದ ಆರಂಭವಾಗಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಮೊದಲ ದಿನವೇ ಆಡಳಿತ ಮತ್ತು ವಿಪಕ್ಷಗಳ ನಡುವೆ ಭಾರೀ ವಾಕ್ಸಮರ ನಡೆಯಿತು.


ಈ ಅಧಿವೇಶನವನ್ನು ವಿಶೇಷ ಅಧಿವೇಶನ ಎಂದು ಕರೆದಿರುವುದು ನಿಯಮಾವಳಿಗೆ ವಿರುದ್ಧ, ಇದು ಮುಂದುವರೆದ ಅಧಿವೇಶನವೇ, ಇಲ್ಲವೇ ವಿಶೇಷ ಎಂಬುದನ್ನು ಸ್ಪಷ್ಟಪಡಿಸಿ. ವಿಶೇಷ ಅಧಿವೇಶನ ಕರೆಯಲು ನಿಯಮಾವಳಿಯಲ್ಲಿ ಅವಕಾಶ ಇಲ್ಲ. ವಿಶೇಷ ಚರ್ಚೆಗೆ ನಮ್ಮ ತಕರಾರಿಲ್ಲ. ಯಾವ ನಿಯಮದಡಿ ಚರ್ಚೆ ಮಾಡಬೇಕು ಎಂಬುದನ್ನು ಸ್ಪಷ್ಟಪಡಿಸಿ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದು ಮಾತಿನ ಚಕಮಕಿಗೆ ಕಾರಣವಾಗಿ ಸದನದಲ್ಲಿ ಸ್ವಲ್ಪಮಟ್ಟಿನ ಕಾವೇರಿದ ಚರ್ಚೆಗೆ ಎಡೆ ಮಾಡಿಕೊಟ್ಟಿತು.


ಪ್ರತಿಪಕ್ಷ ನಾಯಕರ ಮಾತಿಗೆ ನಿಯಮಾವಳಿಗಳನ್ನು ಉಲ್ಲೇಖಿಸಿ ಉತ್ತರ ನೀಡಿದ ಕೃಷ್ಣ ಬೈರೇಗೌಡ ಅವರು, ನಮಗೆ ಪ್ರತಿಷ್ಠೆ ಇಲ್ಲ. ವಿಶೇಷ ಅಧಿವೇಶನ ಎಂಬುದು ನನ್ನಿಂದಾದ ತಪ್ಪಾಗಿದೆ. ಆ ತಪ್ಪನ್ನು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿ, ಈ ಕುರಿತ ಕಾವೇರಿದ ಚರ್ಚೆಗೆ ತೆರೆ ಎಳೆದರು.


ಇದಕ್ಕೂ ಮೊದಲು ನಿಲುವಳಿ ಸೂಚನೆ ಮಂಡನೆ ವಿಚಾರದಲ್ಲೂ ಪ್ರತಿಪಕ್ಷ ನಾಯಕ ಆರ್. ಅಶೋಕ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಕೃಷ್ಣ ಬೈರೇಗೌಡರ ನಡುವೆ ವಾಗ್ವಾದವೇ ನಡೆಯಿತು.


ಇಂದು ಸದನ ಆರಂಭವಾಗಿ ಸಂತಾಪ, ಕಾಗದ ಪತ್ರಗಳ ಮಂಡನೆ ಮುಗಿದ ನಂತರ ಪ್ರತಿಪಕ್ಷ ನಾಯಕರಾದ ಆರ್. ಅಶೋಕ್ ಅವರು ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ನಿಲುವಳಿ ಸೂಚನೆ ಪ್ರಸ್ತಾಪಕ್ಕೆ ಮುಂದಾದಾಗ ಸಚಿವರಾದ ಕೃಷ್ಣ ಬೈರೇಗೌಡ ಅವರು ಎದ್ದುನಿಂತು ನಿಲುವಳಿ ಸೂಚನೆ ಅವಶ್ಯ ಇಲ್ಲ. ಅದೇ ವಿಚಾರದ ಬಗ್ಗೆ ಸದನದಲ್ಲಿ ವಿಶೇಷ ಚರ್ಚೆ ಇದೆ. ನಿಲುವಳಿ ಕೈಗೆತ್ತಿಕೊಳ್ಳಲು ಬರಲ್ಲ ಎಂದು ಹೇಳಿದರು.


ಆದರೆ ಅದನ್ನು ಒಪ್ಪದ ಪ್ರತಿಪಕ್ಷ ನಾಯಕರು ನಿಲುವಳಿ ಪ್ರಸ್ತಾವಕ್ಕೆ ಅವಕಾಶ ಕೊಡಬೇಕು. ನಂತರ ಅದು ಬರುತ್ತದೋ, ಇಲ್ಲವೋ ಎಂಬುದನ್ನು ಸಭಾಧ್ಯಕ್ಷರು ತೀರ್ಮಾನ ಮಾಡಬೇಕು. ಅದು ಬಿಟ್ಟು ಅವಕಾಶವೇ ಕೊಡುವುದಿಲ್ಲ ಎನ್ನುವುದು ಸರಿಯಲ್ಲ ಎಂದು ಹೇಳಿದರು.


ಈ ಹಂತದಲ್ಲಿ ಬಿಜೆಪಿಯ ಸುನೀಲ್‌ಕುಮಾರ್, ಡಾ. ಸಿ.ಅಶ್ವತ್ಥ್‌ನಾರಾಯಣ, ಅರವಿಂದ ಬೆಲ್ಲದ ಇವರೆಲ್ಲಾ ಪ್ರತಿಪಕ್ಷ ನಾಯಕರ ಬೆಂಬಲಕ್ಕೆ ನಿಂತು, ಮೊದಲು ಮಾತನಾಡಲು ಅವಕಾಶ ಕೊಡಿ, ನಂತರ ತೀರ್ಮಾನ ಮಾಡಿ. ನಿಲುವಳಿ ಸೂಚನೆಯಡಿ ಮಾತನಾಡಲು ಅವಕಾಶ ಕೊಡದೇ ತೀರ್ಮಾನ ಮಾಡುವುದು ಸರಿಯಲ್ಲ ಎಂದು ಹೇಳಿದರು.


ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸದನದಲ್ಲಿ ಸ್ವಲ್ಪಮಟ್ಟಿಗೆ ಗದ್ದಲದ ವಾತಾವರಣ ರೂಪುಗೊಂಡಿತು.


ನಂತರ ಮಾತು ಮುಂದುವರೆಸಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ವಿಶೇಷ ಅಧಿವೇಶನ ಇಲ್ಲವೇ ಮುಂದುವರೆದ ಅಧಿವೇಶನ ಎಂಬದುನ್ನು ಸ್ಪಷ್ಟಪಡಿಸಿ. ನಾನು ನನ್ನ ನಿಲುವಳಿ ಸೂಚನಾ ಪ್ರಸ್ತಾವವನ್ನು ವಾಪಸ್ ಪಡೆಯಲು ಸಿದ್ಧ. ಇದರಲ್ಲಿ ನನಗೆ ಯಾವುದೇ ಪ್ರತಿಷ್ಠೆ ಇಲ್ಲ. ಕಸ್ತೂರಿ ರಂಗನ್ ವರದಿಯ ಬಗ್ಗೆ ಒಂದು ದಿನ ಅಲ್ಲ, ಮೂರು ದಿನ ಮಾತನಾಡಲು ನಾವು ಸಿದ್ದರಿದ್ದೇವೆ. ಆದರೆ ಸರ್ಕಾರವೇ ಒಂದು ದಿನಕ್ಕೆ ಚರ್ಚೆಯನ್ನು ಸೀಮಿತಗೊಳಿಸಿದೆ ಎಂದು ಹೇಳಿದರು.


ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿ ಮಾತನಾಡಿದ ಸಚಿವ ಕೃಷ್ಣಬೈರೇಗೌಡ ಅವರು, ವಿಶೇಷ ಅಧಿವೇಶನ, ಮುಂದುವರೆದ ಅಧಿವೇಶನ ಎಲ್ಲವೂ ಸರಿ. ಇದು ಮುಂದುವರೆದ ಅಧಿವೇಶನ ಎಂದು ಹೇಳಿದಾಗ, ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ತಾವು ನಿಲುವಳಿ ಸೂಚನೆ ಪ್ರಸ್ತಾವವನ್ನು ವಾಪಸ್ ಪಡೆದಿರುವುದಾಗಿ ಹೇಳಿ, ಕಸ್ತೂರಿ ರಂಗನ್ ವರದಿಯ ವಿಶೇಷ ಚರ್ಚೆಗೆ ಅನುವು ಮಾಡಿಕೊಟ್ಟರು.