Home ಮುಖಪುಟ ಸುದ್ದಿ ೨೮ ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ

೨೮ ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ

ಬೆಂಗಳೂರು,ಸೆ.೨೨-ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ, ಕೋಟ್ಯಂತರ ರೂ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರತ್ಯೇಕ ಪ್ರಕರಣಗಳಲ್ಲಿ ಆರು ಮಂದಿ ಪ್ರಯಾಣಿಕರನ್ನು ಬಂಧಿಸಿ ೨೮ ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ ಮಾಡಲಾಗಿದೆ.


ವಿಯೆಟ್ನಾಂ ಹಾಗೂ ಬ್ಯಾಂಕಾಕ್‌ನಿಂದ ಪ್ರಯಾಣಿಕರ ಲಗೇಜ್ ಬ್ಯಾಗ್‌ಗಳಲ್ಲಿ ಅಡಗಿಸಿ ತರಲಾಗುತ್ತಿದ್ದ ಒಟ್ಟು ೮೦.೧೧ ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಜಪ್ತಿಯಾಗಿರುವ ಗಾಂಜಾದ ಅಂದಾಜು ಮಾರುಕಟ್ಟೆ ಮೌಲ್ಯ ೨೮ ಕೋಟಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಈ ಸಂಬಂಧ ಬ್ಯಾಂಕಾಕ್‌ನಿಂದ ಆಗಮಿಸಿದ್ದ ಪ್ರಯಾಣಿಕರು ಸೇರಿದಂತೆ ಪ್ರತ್ಯೇಕ ನಾಲ್ಕು ಪ್ರಕರಣಗಳಲ್ಲಿ ಐವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.


೧.೭೫ ಕೋಟಿ ಮೌಲ್ಯದ ಚಿನ್ನ ವಶ:


ಮತ್ತೊಂದು ಕಾರ್ಯಾಚರಣೆಯಲ್ಲಿ ಅಬುಧಾಬಿ ಹಾಗೂ ಕೌಲಾಲಂಪುರದಿಂದ ಕೆಐಎಗೆ ಆಗಮಿಸಿದ್ದ ಪ್ರಯಾಣಿಕರಿಂದ ೧.೨ ಕೆಜಿ ಅಕ್ರಮ ಚಿನ್ನಾಭರಣವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇದರ ಮೌಲ್ಯ ಸುಮಾರು ೧.೭೫ ಕೋಟಿ ಎಂದು ಅಂದಾಜಿಸಲಾಗಿದೆ.


ದಾಖಲೆಗಳಿಲ್ಲದೆ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕರನ್ನು ಬಂಧಿಸಲಾಗಿದ್ದು, ಕಸ್ಟಮ್ಸ್ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.