
ತಿರುವನಂತಪುರಂ, ಸೆ.೨೧: ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ಮಣ್ಣು ಕುಸಿತ, ಭೂಕುಸಿತ ಹಾಗೂ ಹಠಾತ್ ಪ್ರವಾಹದ ಘಟನೆಗಳು ಸಂಭವಿಸಿದ್ದು, ಕನಿಷ್ಠ ೯ ಮಂದಿ ಮೃತಪಟ್ಟಿದ್ದಾರೆ. ಇಬ್ಬರು ನಾಪತ್ತೆಯಾಗಿದ್ದಾರೆ. ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಪರಿಸ್ಥಿತಿಯನ್ನು ಪ್ರತಿ ಗಂಟೆಗೊಮ್ಮೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇಡುಕ್ಕಿ, ಕೊಟ್ಟಾಯಂ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ಮಳೆಯ ಪರಿಣಾಮ ಹೆಚ್ಚು ಕಂಡುಬಂದಿದೆ. ಜನರ ಸುರಕ್ಷತೆ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ.ಮಲಪ್ಪುರಂ ಜಿಲ್ಲೆಯ ನಿಲಂಬೂರ್-ಅಮರಂಬಲಂ ಪ್ರದೇಶದ ಕೊಟ್ಟಪುಳಾ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿ ೯ ಮಂದಿ ಕೊಚ್ಚಿ ಹೋಗಿದ್ದಾರೆ. ವಂಡೂರ್‌ನಿಂದ ಬಂದಿದ್ದ ಈ ತಂಡ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ವೇಳೆ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿ ಪ್ರವಾಹದ ರಭಸಕ್ಕೆ ಸಿಲುಕಿದೆ.
ಸ್ಥಳೀಯರೊಬ್ಬರು ಒಬ್ಬರನ್ನು ರಕ್ಷಿಸಿದ್ದಾರೆ. ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಇಬ್ಬರ ಮೃತದೇಹಗಳನ್ನು ಪತ್ತೆಹಚ್ಚಿದ್ದಾರೆ. ಇನ್ನಿಬ್ಬರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ವಿಶೇಷ ವಿಪತ್ತು ನಿರ್ವಹಣಾ ಪಡೆಯ ತಂಡವನ್ನು ತಕ್ಷಣವೇ ಸ್ಥಳಕ್ಕೆ ಕಳುಹಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.
ಕೊಟ್ಟಾಯಂನಲ್ಲಿ ಭೂಕುಸಿತಕ್ಕೆ ಮಹಿಳೆ ಬಲಿ
ಕೊಟ್ಟಾಯಂ ಜಿಲ್ಲೆಯ ಟೀಕಾಯ್ ಸಮೀಪದ ವೇಲಾಥುಸ್ಸೆರಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ತಮಿಳುನಾಡಿನ ೩೫ ವರ್ಷದ ಸಂಗೀತಾ ಅರುಲ್ ಲಾಲ್ ಮೃತಪಟ್ಟಿದ್ದಾರೆ. ಚೆನ್ನೈನ ಜವಾಹರ್ ನಗರದ ನಿವಾಸಿಯಾಗಿದ್ದ ಅವರು ಸ್ನೇಹಿತೆಯೊಂದಿಗೆ ವಾಗಮನ್‌ನಿಂದ ಹಿಂದಿರುಗುತ್ತಿದ್ದ ವೇಳೆ ಘಟನೆ ನಡೆದಿದೆ.ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಸಂಗೀತಾ ಅವರ ಮೇಲೆ ರಸ್ತೆಗೆ ಕುಸಿದು ಬಂದ ಮಣ್ಣು ಬಿದ್ದಿದೆ. ಅವರ ಸ್ನೇಹಿತೆ ಅಪಾಯದಿಂದ ಪಾರಾದರೂ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಡುಕ್ಕಿ ಜಿಲ್ಲೆಯ ಕೊಟ್ಟಕಂಬೂರ್‌ನಲ್ಲಿ ಮಳೆಯಿಂದ ರಕ್ಷಿಸಿಕೊಳ್ಳಲು ಶೆಡ್‌ನಲ್ಲಿ ಆಶ್ರಯ ಪಡೆದಿದ್ದ ಮೂವರು ಭೂಕುಸಿತಕ್ಕೆ ಸಿಲುಕಿದ್ದಾರೆ. ಮಧ್ಯಾಹ್ನ ಸುಮಾರು ೩.೩೦ರ ವೇಳೆಗೆ ಬೆಟ್ಟದ ಮೇಲ್ಭಾಗದಿಂದ ಭಾರಿ ಪ್ರಮಾಣದ ಮಣ್ಣು ಕುಸಿದು ಶೆಡ್ ಮೇಲೆ ಬಿದ್ದಿದೆ.ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಕೇರಳದ ಹಲವು ಭಾಗಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಮಳೆಯ ಮುನ್ಸೂಚನೆ ನೀಡಿದೆ. ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳಿಗೆ ನೀಡಲಾಗಿದ್ದ ಮಳೆ ಮುನ್ಸೂಚನೆಯನ್ನು ಆರೆಂಜ್ ಅಲರ್ಟ್‌ಗೆ ಹೆಚ್ಚಿಸಲಾಗಿದೆ.
ಮುಖ್ಯಮಂತ್ರಿ ಸತೀಶನ್ ಅವರ ಸೂಚನೆಯಂತೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತೆ ವಿಗ್ನೇಶ್ವರಿ ಐಎಎಸ್ ಅವರು ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ. ಹವಾಮಾನ ಪರಿಸ್ಥಿತಿ ಕುರಿತು ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳ ಜನರಿಗೆ ಎಸ್‌ಎಂಎಸ್ ಎಚ್ಚರಿಕೆಗಳನ್ನು ಕಳುಹಿಸಲಾಗಿದೆ.ಅಪಾಯದ ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

































