
ಕೆಪಿಎಸ್‌ಸಿ ಅಕ್ರಮ
ಬೆಂಗಳೂರು.,ಆ. ೨೮: ಕೆಪಿಎಸ್ ಸಿ ಯಿಂದ ಈ ಹಿಂದೆ ನಡೆದಿದ್ದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳ ನೇಮಕಾತಿಗಳಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದು,ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಪ್ರಿಯಾಂಕ್ ಖರ್ಗೆಯವರು ಗ್ರಾಮೀಣಾಭಿವೃದ್ಧಿ ಇಂಜಿನಿಯರ್ ಗಳ ನೇಮಕಾತಿ ಅಕ್ರಮಗಳ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ೨೦೨೨ರಲ್ಲಿ ನೋಟಿಫಿಕೇಶನ್ ಆಗಿದ್ದ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್ ಹುದ್ದೆಗಳ ಆಯ್ಕೆ ಪಟ್ಟಿಯಲ್ಲಿ ಅಕ್ರಮ ನಡೆದಿದೆ. ಪ್ರಾವಿಷನಲ್ ಲಿಸ್ಟ್‌ನಲ್ಲಿದ್ದ ೧, ೩, ೪, ೬, ೭, ೮, ೯ ಸೀರಿಯಲ್ ನಂಬರ್‌ನ ಅಭ್ಯರ್ಥಿಗಳು ಪರೀಕ್ಷೆಯಲ್ಲೇ ಪಾಸಾಗಿರಲಿಲ್ಲ ಎಂದು ಆರೋಪಿಸಿದರು
ಒಎಮ್‌ಆರ್ ಶೀಟ್‌ಗಳನ್ನು ತಿದ್ದಿರುವುದು ಸಿಐಡಿ ತನಿಖೆಯಿಂದ ಸ್ಪಷ್ಟವಾಗಿದೆ. ಸಿಸಿಟಿವಿ ಫೂಟೇಜ್ ಇಲ್ಲದಿದ್ದರೂ ಹಾಗೂ ಸಬ್ ಕಮಿಟಿ ತನಿಖೆಗೆ ಸಹಕಾರ ಸಿಗದಿದ್ದರೂ ತರಾತುರಿಯಲ್ಲಿ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ. ಕೋರ್ಟ್ ಆದೇಶ ಹಾಗೂ ನಿಯಮಗಳನ್ನು ಗಾಳಿಗೆ ತೂರಿ, ಅಧ್ಯಕ್ಷರ ಸಹಿಯೂ ಇಲ್ಲದೆ ಅಕ್ರಮವಾಗಿ ೨೪ ಜನ ಎಡಬ್ಲು ಇ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿ, ಕಳೆದ ಒಂದು ವರ್ಷದಿಂದ ಸಂಬಳ ನೀಡಲಾಗುತ್ತಿದೆ ಎಂದು ದೂರಿದರು.
ಕೆಪಿಎಸ್‌ಸಿ ಮೂಲಕ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮವಾಗಿರುವುದು ಗೊತ್ತಿದ್ದರೂ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ ಅವರು ಏಕೆ ನೇಮಕಾತಿ ಆದೇಶ ಕೊಟ್ಟರು, ಅವರ ಜವಾಬ್ದಾರಿ ಎಂದು ವಾಗ್ದಾಳಿ ನಡೆಸಿ, ಗೃಹ ಸಚಿವರ ಹೇಳಿಕೆಗಳು ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರ ಇಲಾಖೆಯ ಕಾರ್ಯವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಅವರು, ತಕ್ಷಣವೇ ಪ್ರಿಯಾಂಕ್ ಖರ್ಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
‘ನಿತ್ಯ ಆಡು ಮುಟ್ಟುವ ಸೊಪ್ಪಿಲ್ಲ’ ಎಂಬಂತೆ ಪ್ರಿಯಾಂಕ್ ಖರ್ಗೆ ಮಾತನಾಡಿದ ವಿಚಾರವಿಲ್ಲ. ನಿಮ್ಮ ನಾಲಿಗೆಗೆ ಗೌರವ ಕೊಡವುದಾದರೆ ಪಾರದರ್ಶಕ ಆಡಳಿತಕ್ಕೆ ಬದ್ಧವಾದರೆ, ತಕ್ಷಣವೇ ರಾಜೀನಾಮೆ ನೀಡಿ ಗ್ರಾಮೀಭಣಾಭಿವೃದ್ದಿ ಇಲಾಖೆಯ ಇಂಜಿನಿಯರ್ ನೇಮಕಾತಿ ಪ್ರಕಾರಣವನ್ನು ಸಿಬಿಐ ತನಿಖೆಗೆ ವಹಿಸಿ ಎಂದು ಒತ್ತಾಯಿಸಿದರು.
ಪಶುವೈದ್ಯಕೀಯ ಅಧಿಕಾರಿ ನೇಮಕಾತಿಗೆ ೮೦ ಲಕ್ಷ ರೂ. ಬೇಡಿಕೆ ಇಟ್ಟ ಆರೋಪ ಎದುರಿಸುತ್ತಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿಚಾರದಲ್ಲಿ ಗೃಹ ಸಚಿವರು ಹಾದಿ ತಪ್ಪಿಸುತ್ತಿದ್ದಾರೆ.”ಜ್ಞಾನೇಂದ್ರ ಕುಮಾರ್ ತಂದೆಗೆ ಹುಷಾರಿಲ್ಲ ಎಂದು ಊರಿಗೆ ಹೋಗಿದ್ದಾರೆ, ೨-೩ ದಿನದಲ್ಲಿ ಬರ್ತಾರೆ” ಎಂದು ಆಗಸ್ಟ್ ೨೩ರಂದು ಹೇಳಿದ್ದ ಗೃಹ ಸಚಿವರು, ಆಗಸ್ಟ್ ೨೫ಕ್ಕೆ “ಅವ ಎಲ್ಲಿದ್ದಾನೆ ಗೊತ್ತಿಲ್ಲ” ಎಂದು ಉಲ್ಟಾ ಹೊಡೆದಿದ್ದಾರೆ. ಸುಳಿವೇ ಇಲ್ಲದ ಮೇಲೆ ಗೃಹ ಇಲಾಖೆ ಏಕೆ ನಡೆಸುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಕಳೆದ ೩ ವರ್ಷಗಳಿಂದ ೭೫ ಸಾವಿರ ಹುದ್ದೆ ಭರ್ತಿ ಮಾಡುತ್ತೇವೆ ಎಂದು ಯುವಕರಿಗೆ ಮೋಸ ಮಾಡಲಾಗುತ್ತಿದೆ. ಕೋಟಿ ಕೋಟಿ ಹಣ ನೀಡಿ ಲಂಚ ಕೊಟ್ಟು ಬರುವವರಿಂದ ವ್ಯವಸ್ಥೆ ಹಾಳಾಗುತ್ತಿದೆ. ಯುವಕರು ಮತ್ತು ‘ಝೆನ್ ಜಿ’ ಪೀಳಿಗೆಯ ನಿರುದ್ಯೋಗಿಗಳು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ರಸ್ತೆಗಿಳಿದು ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಪಟ್ಟು
“ಪಾರದರ್ಶಕತೆ ಬಗ್ಗೆ ಮಾತನಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರ ಇಲಾಖೆಯಲ್ಲೇ ಕಿಕ್‌ಬ್ಯಾಕ್ ವ್ಯವಹಾರ ನಡೆದಿದೆ. ದೆಹಲಿಯಲ್ಲಿ ೩೬೦ ಡಿಗ್ರಿ ತನಿಖೆ ಮಾತನಾಡುವ ನಾಯಕರು ಇಲ್ಲಿ ಅಕ್ರಮವಾಗಿ ನೇಮಕಾತಿ ಆದೇಶ ನೀಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಮೊದಲು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರಲಿ,” ಎಂದು ಕುಮಾರಸ್ವಾಮಿ ಒತ್ತಾಯಿಸಿದರು.


































