
ಆಳಂದ: ಶರಣ ನೂಲಿಯ ಚಂದಯ್ಯನವರ ಕಾಯಕ, ದಾಸೋಹ ಹಾಗೂ ಸಮಾನತೆಯ ತತ್ವಾದರ್ಶಗಳು ಇಂದಿನ ಸಮಾಜಕ್ಕೆ ದಿಕ್ಸೂಚಿಯಾಗಿದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಶಿಕ್ಷಣ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಬೇಕು ಎಂದು ಕೊರಮ ಸಮಾಜದ ಮುಖಂಡ ಲೋಕೇಶ ಜಾಧವ ಹೇಳಿದರು.
ಪಟ್ಟಣದ ಸುಲ್ತಾನಪೂರ ಬಡಾವಣೆಯ ಶ್ರೀ ಹಳ್ಳದ ಯಲ್ಲಮ್ಮಾದೇವಿ ದೇವಸ್ಥಾನದಲ್ಲಿ ತಾಲೂಕು ಕೊರಮ ಸಮಾಜದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಬಸವಾದಿ ಶರಣರ ಸಮಕಾಲೀನ ಶರಣ ನೂಲಿಯ ಚಂದಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.ಬಡಾವಣೆ ಮುಖಂಡ ತುಳಸೀರಾಮ ಎಂ. ನರೋಟೆ ಮಾತನಾಡಿ, ಶರಣ ನೂಲಿಯ ಚಂದಯ್ಯನವರ ಹೆಸರಿನಲ್ಲಿ ಸಮುದಾಯ ಭವನ ನಿರ್ಮಿಸಲು ಉದ್ಯಮಿ ಚನ್ನಬಸವ ಕೆ. ಪಾಟೀಲರು ಬೆಲೆಬಾಳುವ ನಿವೇಶನ ನೀಡುವ ಭರವಸೆ ನೀಡಿದ್ದಾರೆ. ನಿವೇಶನದ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ ಭವನ ನಿರ್ಮಾಣದ ಮುಂದಿನ ಕಾರ್ಯ ಕೈಗೊಳ್ಳಬೇಕು ಎಂದರು.
ಹಳ್ಳದ ಯಲ್ಲಮ್ಮಾದೇವಿ ದೇವಸ್ಥಾನದ ಆವರಣದ ಸಮೀಪವೇ ಸಮುದಾಯ ಭವನ ನಿರ್ಮಾಣವಾದರೆ ಸಮಾಜದ ಸಭೆ, ಸಮಾರಂಭ ಹಾಗೂ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗಲಿದೆ. ಸಮಾಜಮುಖಿ ಕಾರ್ಯಗಳಿಗೆ ಸದಾ ಸಹಕಾರ ನೀಡುತ್ತಿರುವ ಚನ್ನಬಸವ ಪಾಟೀಲರು ನೀಡಲಿರುವ ನಿವೇಶನವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಭವನ ನಿರ್ಮಿಸಿಕೊಳ್ಳಬೇಕು ಎಂದು ಹೇಳಿದರು.
ಪುರಸಭೆ ಮಾಜಿ ಸದಸ್ಯ ಸುನೀಲ ಹಿರೋಳಿಕರ್ ಮಾತನಾಡಿ, ಶರಣ ನೂಲಿಯ ಚಂದಯ್ಯನವರು ಜಾತಿ, ಮತ, ಪಂಥದ ಎಲ್ಲೆಗಳನ್ನು ಮೀರಿ ಸಮಾನತೆ ಹಾಗೂ ಜಾತ್ಯತೀತ ಸಮಾಜದ ಆಶಯವನ್ನು ಪ್ರತಿಪಾದಿಸಿದ ಬಸವಾದಿ ಶರಣರ ಸಮಕಾಲೀನರಾಗಿದ್ದರು. ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಕಾಯಕ ಮತ್ತು ದಾಸೋಹದ ಮೂಲಕ ಮಾದರಿ ಜೀವನ ನಡೆಸಿದ ಅವರು, ವಚನಗಳ ಮೂಲಕ ಸಮಾಜಕ್ಕೆ ಅಮೂಲ್ಯ ಸಂದೇಶ ನೀಡಿದ್ದಾರೆ ಎಂದರು.
ಶರಣ ನೂಲಿಯ ಚಂದಯ್ಯನವರ ವಚನಗಳು ಹಾಗೂ ತತ್ವಾದರ್ಶಗಳನ್ನು ಯುವಜನತೆ ಅಧ್ಯಯನ ಮಾಡಬೇಕು. ಶಿಕ್ಷಣಕ್ಕೆ ಆದ್ಯತೆ ನೀಡುವುದರ ಜೊತೆಗೆ ಆರ್ಥಿಕವಾಗಿ ಸಬಲರಾಗಿ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಲು ಸಮಾಜ ಮುಂದಾಗಬೇಕು ಎಂದು ಹೇಳಿದರು.
ಕೊರಮ ಸಮಾಜದ ತಾಲೂಕು ಅಧ್ಯಕ್ಷ ತಿಪ್ಪಣ್ಣಾ ಜಾಧವ, ಉಪಾಧ್ಯಕ್ಷ ಪ್ರಭಾಕರ ಮಾನೆ ಮಾತನಾಡಿದರು. ಸುರೇಶ ಜಾಧವ, ಅಶೋಕ ಮಾನೆ, ಪ್ರಭುಲಿಂಗ ಮಾನೆ, ರಮೇಶ ಜಾಧವ, ಪಿಂಟು ಜಾಧವ, ರೇವಣಪ್ಪ ಮಾನೆ, ಅನೀಲ ಮಾನೆ, ಭಾಗೇಶ ಜಾಧವ, ಪ್ರಶಾಂತ ಜಾಧವ ಸೇರಿದಂತೆ ಸಮಾಜದ ಹಿರಿಯರು, ಯುವಕರು ಹಾಗೂ ಮುಖಂಡರು ಪಾಲ್ಗೊಂಡಿದ್ದರು.
ಆರAಭದಲ್ಲಿ ಶರಣ ನೂಲಿಯ ಚಂದಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಅರ್ಪಿಸಲಾಯಿತು. ಬಳಿಕ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ತಾಲೂಕು ಆಡಳಿತದಿಂದಲೂ ಜಯಂತಿ ಆಚರಣೆ
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ಆಡಳಿತದ ವತಿಯಿಂದ ಶರಣ ನೂಲಿಯ ಚಂದಯ್ಯನವರ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಏಕಕಾಲದಲ್ಲಿ ಆಚರಿಸಲಾಯಿತು. ತಹಸೀಲ್ದಾರ್ ಅಣ್ಣಾರಾವ್ ಪಾಟೀಲ ಅವರು ಇಬ್ಬರು ಮಹನೀಯರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಗೌರವ ಅರ್ಪಿಸಿದರು. ಈ ಸಂದರ್ಭದಲ್ಲಿ ಈಡಿಗ ಹಾಗೂ ಕೊರಮ ಸಮಾಜದ ಮುಖಂಡರು, ಸಮಾಜ ಬಾಂಧವರು ಹಾಗೂ ತಾಲೂಕು ಆಡಳಿತದ ಸಿಬ್ಬಂದಿ ಉಪಸ್ಥಿತರಿದ್ದರು.
































