
ಮತ್ತೆ ಒಂದಾದ ಶ್ರೀನಗರ ಕಿಟ್ಟಿ–ಮೇಘನಾ
ಶ್ರೀನಗರ ಕಿಟ್ಟಿ ಹಾಗೂ ಮೇಘನಾ ರಾಜ್ ಅಭಿನಯದ ‘ಅಮರ್ಥ’ ಚಿತ್ರ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಪಂಚರಂಗಿ ಫಿಲಂಸ್ ಬ್ಯಾನರ್ನಲ್ಲಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಗುರು ಹೆಗ್ಡೆ ನಿರ್ಮಿಸಿರುವ ಈ ಚಿತ್ರಕ್ಕೆ ಗುರು ಹೆಗ್ಡೆ ಮತ್ತು ವಿನಯ್ ಪ್ರೀತಮ್ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ.
ಬಿಡುಗಡೆ ದಿನಾಂಕ ಘೋಷಣೆ ಕಾರ್ಯಕ್ರಮದಲ್ಲಿ ಚಿತ್ರದ ಮೋಷನ್ ಪೋಸ್ಟರ್ ಅನಾವರಣಗೊಂಡಿತು. ಈ ವೇಳೆ ಮಾತನಾಡಿದ ಗುರು ಹೆಗ್ಡೆ, ಎರಡು ವರ್ಷಗಳ ಹಿಂದೆ ಆರಂಭವಾದ ಚಿತ್ರ ಈಗ ಬಿಡುಗಡೆಯ ಹಂತ ತಲುಪಿದ್ದು, ಯು/ಎ ಪ್ರಮಾಣಪತ್ರ ಪಡೆದಿದೆ ಎಂದು ತಿಳಿಸಿದರು. ‘ಅಮರ್ಥ’ ಎಂಬುದು ಮಾನವನನ್ನು ಮೀರಿದ ಶಕ್ತಿಯ ಸಂಕೇತವಾಗಿದ್ದು, ಅದನ್ನೇ ಕಥೆಯ ಕೇಂದ್ರವಾಗಿಸಿಕೊಂಡಿದ್ದೇವೆ ಎಂದರು.
ನಟ ಶ್ರೀನಗರ ಕಿಟ್ಟಿ, ಇದು ಮೇಘನಾ ರಾಜ್ ಜೊತೆಗಿನ ತಮ್ಮ ಮೂರನೇ ಚಿತ್ರವಾಗಿದ್ದು, ಬಾಲ್ಯದಿಂದ ಆರಂಭವಾಗುವ ಭಾವನಾತ್ಮಕ ಜೀವನಯಾನವನ್ನು ಹೇಳುವ ಕಥೆಯಾಗಿದೆ ಎಂದರು. ಮೇಘನಾ ರಾಜ್, ಸ್ನೇಹ, ಸಂಬಂಧಗಳು ಹಾಗೂ ಜೀವನದ ಏರುಪೇರುಗಳ ಸುತ್ತ ಸಾಗುವ ಕಥೆಯಲ್ಲಿ ‘ಲಕ್ಷ್ಮೀ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಹೇಳಿದರು.
ಚಿತ್ರದಲ್ಲಿ ಕೃತಿ ಶೆಟ್ಟಿ, ಉಷಾ ಭಂಡಾರಿ, ಮಂಜು ಭಾಷಿಣಿ, ಗುರು ಹೆಗ್ಡೆ, ತಮ್ಮಣ್ಣ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಗುರುಪ್ರಶಾಂತ್ ರೈ ಛಾಯಾಗ್ರಹಣ, ಪಂಚಮ್ ಜೀವ ಸಂಗೀತ ಹಾಗೂ ಶ್ರೀಧರ್ ವಿ. ಸಂಭ್ರಮ್, ಬಲರಾಮ್ ಮತ್ತು ರಾಕೇಶ್ ಆಚಾರ್ ಹಿನ್ನೆಲೆ ಸಂಗೀತ ನೀಡಿದ್ದಾರೆ.































