Home ಸುದ್ದಿ ಅಂತರಾಷ್ಟ್ರೀಯ ಕಾಮನ್‌ವೆಲ್ತ್ ಗೇಮ್ಸ್: ಗ್ಲ್ಯಾಸ್ಗೋದಲ್ಲಿ ಭಾರತದ ಪದಕದ ಲೂಟಿ

ಕಾಮನ್‌ವೆಲ್ತ್ ಗೇಮ್ಸ್: ಗ್ಲ್ಯಾಸ್ಗೋದಲ್ಲಿ ಭಾರತದ ಪದಕದ ಲೂಟಿ

ಗ್ಲ್ಯಾಸ್ಗೋ.ಆ೧: ಕಾಮನ್‌ವೆಲ್ತ್ ಗೇಮ್ಸ್ ೨೦೨೬ರ ೯ನೇ ದಿನ ಭಾರತೀಯ ಕ್ರೀಡಾಪಟುಗಳು ಐತಿಹಾಸಿಕ ಪ್ರದರ್ಶನ ನೀಡಿದ್ದು, ಜುಡೋ ಹಾಗೂ ಅಥ್ಲೆಟಿಕ್ಸ್‌ನಲ್ಲಿ ಒಟ್ಟು ೬ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ ೨೩ಕ್ಕೆ (೫ ಚಿನ್ನ, ೧೨ ಬೆಳ್ಳಿ, ೬ ಕಾಂಸ್ಯ) ಏರಿಕೆಯಾಗಿದೆ.

ಕ್ರೀಡಾಕೂಟದ ಆರಂಭದಲ್ಲೇ ಜುಡೋ ಅಖಾಡದಲ್ಲಿ ಭಾರತ ಹೊಸ ಇತಿಹಾಸ ಬರೆದಿದೆ ಮಹಿಳೆಯರ ೪೮ ಕೆಜಿ ವಿಭಾಗದ ರೋಚಕ ಫೈನಲ್‌ನಲ್ಲಿ ಕೆನಡಾದ ಹೈಡಿ ಕ್ವಾಚ್ ಅವರನ್ನು ೨-೧ ಅಂತರದಿಂದ ಮಣಿಸಿದ ಅಸ್ಮಿತಾ ಡೇ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.
ಪುರುಷರ ೬೦ ಕೆಜಿ ವಿಭಾಗದಲ್ಲಿ ಆಸ್ಟ್ರೇಲಿಯಾದ ಜೋಶುವಾ ಕ್ಯಾಟ್ಸ್ ಅವರನ್ನು ೧೦-೦ ಅಂತರದಿಂದ ಭರ್ಜರಿಯಾಗಿ ಸೋಲಿಸಿದ ಹರ್ಷ್ ಸಿಂಗ್, ಕಾಮನ್‌ವೆಲ್ತ್ ಜುಡೋ ಇತಿಹಾಸದಲ್ಲೇ ಚಿನ್ನ ಗೆದ್ದ ಮೊದಲ ಭಾರತೀಯ ಪುರುಷ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮಹಿಳೆಯರ ೫೭ ಕೆಜಿ ವಿಭಾಗದಲ್ಲಿ ತೀವ್ರ ಪೈಪೋಟಿ ನೀಡಿದ ಯಾಮಿನಿ ಮೌರ್ಯ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಭಾರತಕ್ಕೆ ಎರಡು ಪದಕಗಳು ಒಲಿದವು. ನೀರಜ್ ಚೋಪ್ರಾ ೮೫.೮೩ ಮೀಟರ್ ಎಸೆದು ಬೆಳ್ಳಿ ಪದಕ ಗೆದ್ದರೆ, ಯಶ್‌ವೀರ್ ಸಿಂಗ್ ೮೫.೪೧ ಮೀಟರ್ ಎಸೆದು ಕಾಂಸ್ಯ ಪದಕ ಪಡೆದರು.

ಗಾಯದ ನಡುವೆಯೂ ಅದ್ಭುತ ಹೋರಾಟ ನಡೆಸಿದ ತೇಜಸ್ವಿನ್ ಶಂಕರ್ ೭,೯೭೬ ಅಂಕಗಳೊಂದಿಗೆ ಡೆಕಥ್ಲಾನ್‌ನಲ್ಲಿ ಕಾಂಸ್ಯ ಪದಕ ಗೆದ್ದು, ಈ ವಿಭಾಗದಲ್ಲಿ ಪದಕ ಪಡೆದ ಮೊದಲ ಭಾರತೀಯ ಎನಿಸಿಕೊಂಡರು.

ರಿಂಗ್‌ನಲ್ಲಿ ಪೂರ್ಣ ಪ್ರಾಬಲ್ಯ ಸಾಧಿಸಿದ ಭಾರತದ ಎಲ್ಲಾ ೧೦ ಸೆಮಿಫೈನಲಿಸ್ಟ್‌ಗಳು ಜಯಭೇರಿ ಬಾರಿಸಿ ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಭಾರತಕ್ಕೆ ಕನಿಷ್ಠ ೧೦ ಬೆಳ್ಳಿ ಅಥವಾ ಚಿನ್ನದ ಪದಕಗಳು ಖಚಿತವಾಗಿವೆ.

ಲವ್ಲಿನ್ ಬೊರ್ಗೊಹೈನ್, ಸಚಿನ್ ಸಿವಾಚ್, ಪ್ರೀತಿ ಪವಾರ್, ಸಾಕ್ಷಿ ಚೌಧರಿ, ನರೇಂದರ್ ಬರ್ವಾಲ್, ಜೈಸ್ಮಿನ್ ಲಂಬೋರಿಯಾ, ಅರುಂಧತಿ ಚೌಧರಿ, ಜಾದುಮಣಿ ಸಿಂಗ್, ಪ್ರಿಯಾ ಘಂಗಾಸ್ ಮತ್ತು ಅಂಕುಶ್ ಪಂಘಾಲ್.

ಪದಕ ಪಟ್ಟಿ
೧೦ನೇ ಸ್ಥಾನ (ವೇಲ್ಸ್ ದೇಶಕ್ಕಿಂತ ಕೇವಲ ೧ ಪದಕ ಹಿಂದೆ)
ಒಟ್ಟು ಪದಕಗಳು: ೨೩ (ಚಿನ್ನ: ೦೫ ಬೆಳ್ಳಿ: ೧೨ ಕಾಂಸ್ಯ ೦೬)