
ಆಳಂದ: ರೈತರ ಆತ್ಮಹತ್ಯೆಗೆ ಕಾರಣವಾಗುತ್ತಿರುವ ಸಾಲಬಾಧೆ, ಬೆಳೆ ನಷ್ಟ ಹಾಗೂ ಆರ್ಥಿಕ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಅಖಿಲ ಭಾರತ ಕಿಸಾನ್ ಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ ಹಾಗೂ ಜಿಲ್ಲಾ ಅಧ್ಯಕ್ಷ ಭೀಮಾಶಂಕರ ಮಾಡಿಯಾಳ್ ಜಂಟಿಯಾಗಿ ಒತ್ತಾಯಿಸಿದರು.
ತಾಲೂಕಿನ ಆಲೂರ ಬಿ ಹಾಗೂ ಕಣಮಸ್ ಗ್ರಾಮಗಳಿಗೆ ಅಖಿಲ ಭಾರತ ಕಿಸಾನ್ ಸಭಾ ಮುಖಂಡರು ಭೇಟಿ ನೀಡಿ, ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಅವರು ಮಾತನಾಡಿ, ರೈತರ ಆತ್ಮಹತ್ಯೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ನೀಡಲಾಗುತ್ತಿರುವ ಪರಿಹಾರ ಮೊತ್ತವನ್ನು ಕನಿಷ್ಠ ೧೦ ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಸುಮಾರು ೨೦ ವರ್ಷಗಳ ಹಿಂದೆ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಕುಟುಂಬಗಳಿಗೆ ೫ ಲಕ್ಷ ಪರಿಹಾರ ನಿಗದಿಪಡಿಸಲಾಗಿತ್ತು. ಅಂದಿನ ಬೆಲೆಗಳು ಹಾಗೂ ಇಂದಿನ ಜೀವನ ನಿರ್ವಹಣೆಯ ವೆಚ್ಚದಲ್ಲಿ ಭಾರಿ ವ್ಯತ್ಯಾಸವಾಗಿದೆ. ಹೀಗಾಗಿ ಹಳೆಯ ಮಾನದಂಡ ಇಂದಿನ ಪರಿಸ್ಥಿತಿಗೆ ಅನ್ವಯಿಸುವುದಿಲ್ಲ. ಸರ್ಕಾರ ಕೂಡಲೇ ನಿಯಮ ತಿದ್ದುಪಡಿ ಮಾಡಿ ಪರಿಹಾರ ಮೊತ್ತವನ್ನು ೧೦ ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ರೈತರ ಆತ್ಮಹತ್ಯೆಗಳನ್ನು ತಡೆಯಲು ಸರ್ಕಾರ ಕೇವಲ ಪರಿಹಾರ ನೀಡುವುದಕ್ಕೆ ಸೀಮಿತವಾಗದೆ, ರೈತರ ಸಂಕಷ್ಟದ ಮೂಲ ಕಾರಣಗಳನ್ನು ಗುರುತಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಸಾಲದ ಒತ್ತಡದಲ್ಲಿರುವ ರೈತರಿಗೆ ಆರ್ಥಿಕ ನೆರವು, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯ ಬೆಂಬಲ ನೀಡಬೇಕು ಎಂದು ಆಗ್ರಹಿಸಿದರು.
ಮಳೆ ಕೊರತೆ ಹಾಗೂ ಕೃಷಿ ಚಟುವಟಿಕೆಗಳ ಮೇಲೆ ಉಂಟಾಗಿರುವ ಪ್ರತಿಕೂಲ ಪರಿಣಾಮದಿಂದ ಕಲಬುರಗಿ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಸರ್ಕಾರ ತಕ್ಷಣ ಜಿಲ್ಲೆಯ ಪರಿಸ್ಥಿತಿಯನ್ನು ಪರಿಶೀಲಿಸಿ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸುವುದರ ಜತೆಗೆ ಗ್ರಾಮೀಣ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲು ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚಿನ ಕೆಲಸಗಳನ್ನು ಒದಗಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.
ರೈತರ ಹೊಲಗಳಲ್ಲಿ ಅಗತ್ಯ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಕ್ರಮ ಕೈಗೊಳ್ಳಬೇಕು. ಮುಂಬರುವ ಹಿಂಗಾರು ಹಂಗಾಮಿನ ಬಿತ್ತನೆಗೆ ರೈತರಿಗೆ ಉಚಿತವಾಗಿ ಗುಣಮಟ್ಟದ ಬೀಜ ಹಾಗೂ ಗೊಬ್ಬರ ಪೂರೈಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು.
ರೈತರ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ತಕ್ಷಣ ಸ್ಪಂದಿಸಿ, ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ಹೆಚ್ಚುವರಿ ಪರಿಹಾರ, ಸಾಲದ ಒತ್ತಡದಿಂದ ರೈತರನ್ನು ಹೊರತರುವ ಕ್ರಮ ಹಾಗೂ ಬರಪೀಡಿತ ಪ್ರದೇಶಗಳಿಗೆ ವಿಶೇಷ ನೆರವು ನೀಡುವ ಮೂಲಕ ಕೃಷಿಕರ ಬದುಕಿಗೆ ಭದ್ರತೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಸಾಜೀದ್ ಅಹಮದ್, ಕಿಸಾನಸಭಾ ತಾಲೂಕು ಅಧ್ಯಕ್ಷ ಧರ್ಮಣ್ಣ ಪೂಜಾರಿ, ಕಲ್ಯಾಣಿ ತುಕ್ಕಣೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
































