
ಬೆಂಗಳೂರು,ಆ.೨೮- ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆದಿರುವ ನೇಮಕಾತಿ ಹಗರಣ ಸಂಬಂಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಶಿವಶಂಕರಪ್ಪ ಸಾಹುಕಾರ್‌ಗೆ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನ ನೀಡಿದ್ದು ಯಾರು? ಖಾರವಾಗಿ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಶಿವಶಂಕರಪ್ಪ ಸಾಹುಕಾರ್ ಹಣ ಕೊಟ್ಟು ಅಧ್ಯಕ್ಷರಾಗಿದ್ದಾರೆ ಎಂಬ ಮಾತು ನಿಜವೇ? ಶಿವಶಂಕರಪ್ಪ ಮನೆಯಲ್ಲಿ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಫೋಟೋ ಇರುವುದು ಸತ್ಯವೇ? ಈ ಎಲ್ಲಾ ವಿಚಾರಗಳನ್ನು ಕುಮಾರಸ್ವಾಮಿ ಸ್ನೇಹಿತರೇ ಹೇಳುತ್ತಿದ್ದಾರೆ, ಇದಕ್ಕೆ ಸ್ವತಃ ಕುಮಾರಸ್ವಾಮಿ ಏನು ಉತ್ತರ ನೀಡುತ್ತಾರೆ?” ಎಂದು ಪ್ರಶ್ನಿಸಿದರು.
ಐಎಎಸ್ ಅಧಿಕಾರಿ ನಾಪತ್ತೆಯಾಗಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು,ಸಂಬಂಧಪಟ್ಟ ಐಎಎಸ್ ಅಧಿಕಾರಿ ಎಲ್ಲಿದ್ದಾರೆ ಎಂಬುದು ನನಗೆ ಸ್ಪಷ್ಟವಾಗಿ ತಿಳಿದಿದೆ. ಆ ಅಧಿಕಾರಿ ಲಿಖಿತವಾಗಿ ರಜೆ ಅರ್ಜಿ ನೀಡಿ ತೆರಳಿದ್ದಾರೆ. ಅವರನ್ನು ವಶಕ್ಕೆ ಪಡೆದಿದ್ದೇವೆಯೇ ಅಥವಾ ಅವರು ಓಡಿ ಹೋಗಿದ್ದಾರೆಯೇ ಎಂಬ ಸಾಮಾನ್ಯ ಮಾಹಿತಿ ನಮಗೆ ತಿಳಿಯುತ್ತದೆ. ಮಾಹಿತಿ ಕೊರತೆಯಿಂದಲೋ ಅಥವಾ ಸಾಮಾನ್ಯ ಪ್ರಜ್ಞೆಯ ಅಭಾವದಿಂದಲೋ ಕುಮಾರಸ್ವಾಮಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಧಿಕಾರಿ ಬಂದ ಮೇಲೆ ವಿಚಾರಣೆ ನಡೆಸೋಣ, ಈ ಬಗ್ಗೆ ಕುಮಾರಸ್ವಾಮಿಯವರಿಗಾಗಲಿ ಅಥವಾ ಬಿಜೆಪಿಯವರಿಗಾಗಲಿ ಸ್ಪಷ್ಟನೆ ನೀಡುವ ಅಗತ್ಯ ನಮಗಿಲ್ಲ ಎಂದರು.
ಪರಪ್ಪನ ಅಗ್ರಹಾರ ಜೈಲಿನ ಬಗ್ಗೆ ಮಾತನಾಡುವ ಕುಮಾರಸ್ವಾಮಿ,ಜೈಲಿನಲ್ಲಿರುವ ತಮ್ಮ ಕುಟುಂಬಸ್ಥರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ.ಹಾಸನದ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣದ ಕುರಿತು ಅವರು ಮಾತನಾಡಿಲ್ಲ. ಜೈಲಿನಲ್ಲಿರುವ ವ್ಯಕ್ತಿಯೊಬ್ಬರ ಬಳಿ ಮೊಬೈಲ್ ಪತ್ತೆಯಾಗಿರುವ ವಿಚಾರದ ಬಗ್ಗೆಯೂ ಅವರು ಮಾತನಾಡಿಲ್ಲ ಎಂದು ಆರೋಪಿಸಿದರು.
ನಾಗೇಂದ್ರ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ ಖರ್ಗೆ,ಮುಖ್ಯಮಂತ್ರಿ ಈಗಾಗಲೇ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ.ಪಕ್ಷದಲ್ಲಿರುವ ಎಲ್ಲರೂ ಪಕ್ಷದ ಸಿಪಾಯಿಗಳು. ಅಗತ್ಯ ಬಂದಾಗ ಯಾರು ಬೇಕಾದರೂ ತ್ಯಾಗ ಮಾಡಬೇಕಾಗುತ್ತದೆ. ಹೈಕಮಾಂಡ್ ಏನು ಹೇಳುತ್ತದೆ ಎಂಬುದೇ ಅಂತಿಮ ನಿರ್ಧಾರವಾಗಲಿದೆ. ಈ ನಿಯಮ ಮುಖ್ಯಮಂತ್ರಿ, ಶಾಸಕರು ಹಾಗೂ ಜಿಲ್ಲಾಧ್ಯಕ್ಷರು ಸೇರಿದಂತೆ ಪಕ್ಷದಲ್ಲಿರುವ ಎಲ್ಲರಿಗೂ ಅನ್ವಯಿಸುತ್ತದೆ ಎಂದು ಪ್ರಿಯಾಂಕ ಖರ್ಗೆ ಸ್ಪಷ್ಟಪಡಿಸಿದರು.
ಪ್ರಿಯಾಂಕ ಖರ್ಗೆ ವಿರುದ್ಧ ಮಾತನಾಡಿದರೆ ಜೆಡಿಎಸ್ ಮತ್ತು ಬಿಜೆಪಿಗೆ ಮಾಧ್ಯಮಗಳಲ್ಲಿ ದಿನವೂ ಪ್ರಚಾರ ಹಾಗೂ ಅಂಕ ಸಿಗುತ್ತದೆ, ಅದಕ್ಕಾಗಿಯೇ ಅವರು ತಮ್ಮ ವಿರುದ್ಧ ನಿರಂತರವಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ನನ್ನ ನಾಲಿಗೆ ಬಗ್ಗೆ ಮಾತನಾಡಲು ಜೆಡಿಎಸ್‌ನವರು ಯಾರು? ಎಂದು ಪ್ರಶ್ನಿಸಿದ ಅವರು, ಇಷ್ಟು ದಿನ ಬಿಜೆಪಿಗೆ ಪ್ರಿಯಾಂಕ ಖರ್ಗೆ ಬೇಕಾಗಿದ್ದರು. ಈಗ ಜೆಡಿಎಸ್‌ನವರಿಗೂ ತಮ್ಮ ಹೆಸರು ಬೇಕಾಗಿದೆ.ಅಧಿಕಾರಕ್ಕಾಗಿ ತತ್ವ ಹಾಗೂ ಸಿದ್ಧಾಂತಗಳನ್ನು ಬಿಟ್ಟು ಹೋಗುವವರಿಂದ ತಾವು ಕಲಿಯುವುದು ಏನೂ ಇಲ್ಲ. ಬಿಜೆಪಿ ಹಾಗೂ ಜೆಡಿಎಸ್‌ನಿಂದ ಕಲಿಯಬೇಕಾದ ಅಗತ್ಯವೂ ಇಲ್ಲ ಎಂದು ಹೇಳಿದರು.
ಆರ್‌ಎಸ್‌ಎಸ್ ಕುರಿತು ಕುಮಾರಸ್ವಾಮಿ ಹಿಂದೆ ಬರೆದಿದ್ದ ಲೇಖನವನ್ನು ಉಲ್ಲೇಖಿಸಿದ ಖರ್ಗೆ, ಆರ್‌ಎಸ್‌ಎಸ್ ಅನ್ನು ಟೀಕಿಸಿದ್ದವರು ಅಧಿಕಾರ ಸಿಕ್ಕ ಬಳಿಕ ತಮ್ಮ ನಿಲುವು ಬದಲಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಪ್ರಿಯಾಂಕ ಖರ್ಗೆಯನ್ನು ಬೈಯುವುದು ಈಗ ಹೊಸ ಫ್ಯಾಷನ್ ಆಗಿದೆ. ನನ್ನನ್ನು ಬೈದರೆ ಕೇಶವ ಕೃಪಾದಲ್ಲಿ ಅಂಕಪಟ್ಟಿಯಲ್ಲಿ ನಂಬರ್ ಹೆಚ್ಚಾಗುತ್ತಾ ಹೋಗುತ್ತದೆ” ಎಂದು ವ್ಯಂಗ್ಯವಾಡಿದರು.
ಬಿಜೆಪಿಯವರು ಬಾಡಿಗೆ ಭಾಷಣಕಾರರನ್ನು ಇಟ್ಟುಕೊಂಡು ತಮ್ಮ ವಿರುದ್ಧ ಮಾತನಾಡಿಸುತ್ತಿದ್ದಾರೆ. ಈ ಹಿಂದೆ ಬಿಜೆಪಿಗೆ ಸೀಮಿತವಾಗಿದ್ದ ಟೀಕೆ ಇದೀಗ ಜೆಡಿಎಸ್‌ಗೂ ತಲುಪಿದೆ ಎಂದು ಹೇಳಿದರು.
ನೇಪಾಳದಲ್ಲಿನ ಪರಿಸ್ಥಿತಿ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ ಅಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಲಭ್ಯವಾಗುತ್ತಿರುವ ಮಾಹಿತಿಯೇ ಸರ್ಕಾರಕ್ಕೂ ಲಭ್ಯವಾಗುತ್ತಿದೆ. ಸರ್ಕಾರದ ವತಿಯಿಂದ ನಿರಂತರವಾಗಿ ಸಂಪರ್ಕ ಸಾಧಿಸುವ ಪ್ರಯತ್ನ ನಡೆಯುತ್ತಿದ್ದು, ನೇಪಾಳದಲ್ಲಿರುವ ಪ್ರವಾಸಿಗರನ್ನೂ ಸಂಪರ್ಕಿಸಲಾಗುತ್ತಿದೆ. ಪ್ರವಾಸಿಗರಿಗೆ ತಮ್ಮ ಬಳಿ ಹೆಚ್ಚಿನ ಮಾಹಿತಿ ಇದ್ದರೆ ಸರ್ಕಾರದ ಗಮನಕ್ಕೆ ತರುವಂತೆ ಮನವಿ ಮಾಡಲಾಗಿದೆ. ಈ ಸಂಬಂಧ ಕೇಂದ್ರ ವಿದೇಶಾಂಗ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದೇವೆ. ನೇಪಾಳಕ್ಕೆ ತೆರಳಬೇಕಿದ್ದ ಬಹುತೇಕ ಪ್ರವಾಸಿಗರು ತಮ್ಮ ಪ್ರವಾಸವನ್ನು ಸ್ಥಗಿತಗೊಳಿಸಿದ್ದಾರೆ ಎಂದು ಹೇಳಿದರು.
ಮಂಡ್ಯ ಜೈಲಿನಲ್ಲಿ ರೇಟ್‌ಕಾರ್ಡ್ ಫಿಕ್ಸ್ ಮಾಡಲಾಗಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ ಖರ್ಗೆ, ಈ ವಿಚಾರದಲ್ಲಿ ಈಗಾಗಲೇ ಅಲೋಕ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ ಎಂದರು.
ಜೈಲಿನಲ್ಲಿ ಕಂಡುಬಂದಿರುವ ಚೀಟಿ ಅನಧಿಕೃತವಾಗಿ ಹಾಕಿರುವುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಪ್ರತಿಯೊಂದು ವಿಚಾರಕ್ಕೂ ಸರ್ಕಾರ ಪ್ರತಿಕ್ರಿಯಿಸುತ್ತಾ ಹೋಗುವುದು ಸರಿಯಲ್ಲ. ಚೀಟಿಯನ್ನು ಯಾರು ಬರೆದಿದ್ದಾರೆ, ಅದು ಹೇಗೆ ಹೊರಬಂದಿದೆ ಎಂಬುದು ತನಿಖೆಯಿಂದ ತಿಳಿದುಬರಬೇಕು ಎಂದು ಹೇಳಿದರು.
ಈ ಫೋಟೋ ಹೇಗೆ ಹೊರಬಂತು, ಮೊಬೈಲ್ ಜೈಲಿನೊಳಗೆ ಹೇಗೆ ಬಂತು ಎಂಬುದೂ ಪರಿಶೀಲನೆಯಾಗಬೇಕಿದೆ. ಒಂದು ತಿಂಗಳಲ್ಲಿ ಪರಪ್ಪನ ಅಗ್ರಹಾರ, ಬೆಳಗಾವಿ ಹಾಗೂ ಮಂಡ್ಯ ಜೈಲು ಸೇರಿದಂತೆ ಮೂರು ಕಾರಾಗೃಹಗಳ ಮೇಲೆ ಸರ್ಪ್ರೈಸ್ ದಾಳಿ ನಡೆಸಲಾಗಿದೆ. ಮುಂದೆಯೂ ಇಂತಹ ದಾಳಿಗಳು ಮುಂದುವರಿಯಲಿವೆ ಎಂದರು.
ನಾಗೇಂದ್ರ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ ಖರ್ಗೆ, ಮುಖ್ಯಮಂತ್ರಿ ಈಗಾಗಲೇ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಪಕ್ಷದಲ್ಲಿರುವ ಎಲ್ಲರೂ ಪಕ್ಷದ ಸಿಪಾಯಿಗಳು. ಅಗತ್ಯ ಬಂದಾಗ ಯಾರು ಬೇಕಾದರೂ ತ್ಯಾಗ ಮಾಡಬೇಕಾಗುತ್ತದೆ. ಹೈಕಮಾಂಡ್ ಏನು ಹೇಳುತ್ತದೆ ಎಂಬುದೇ ಅಂತಿಮ ನಿರ್ಧಾರವಾಗಲಿದೆ. ಈ ನಿಯಮ ಮುಖ್ಯಮಂತ್ರಿ, ಶಾಸಕರು ಹಾಗೂ ಜಿಲ್ಲಾಧ್ಯಕ್ಷರು ಸೇರಿದಂತೆ ಪಕ್ಷದಲ್ಲಿರುವ ಎಲ್ಲರಿಗೂ ಅನ್ವಯಿಸುತ್ತದೆ ಎಂದು ಪ್ರಿಯಾಂಕ ಖರ್ಗೆ ಸ್ಪಷ್ಟಪಡಿಸಿದರು.


































