Home ಮುಖಪುಟ ಸುದ್ದಿ ಗಜಪಡೆಗೆ ಅರಮನೆಯಲ್ಲಿ ಭವ್ಯ ಸ್ವಾಗತ

ಗಜಪಡೆಗೆ ಅರಮನೆಯಲ್ಲಿ ಭವ್ಯ ಸ್ವಾಗತ

ಮೈಸೂರು, ಆ. ೨೮- ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂಭ್ರಮ ಇಂದು ಮತ್ತಷ್ಟು ಹೆಚ್ಚಾಗಿದೆ. ಕಳೆದ ಎರಡು ದಿನಗಳಿಂದ ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಿದ್ದ ೯ ಗಜಪಡೆಗಳು ಇಂದು ಬಿಗಿ ಪೊಲೀಸ್ ಭದ್ರತೆಯಲ್ಲಿ ಅರಮನೆಯನ್ನು ಅದ್ದೂರಿಯಾಗಿ ಪ್ರವೇಶಿಸಿದವು.

ಮುಂಜಾನೆಯೇ ಮಾವುತರು ಆನೆಗಳಿಗೆ ತಣ್ಣೀರಿನ ಸ್ನಾನ ಮಾಡಿಸಿ, ಅಲಂಕರಿಸಿ ಪ್ರಯಾಣಕ್ಕೆ ಸಿದ್ಧಗೊಳಿಸಿದರು. ಬೆಳಗ್ಗೆ ೯ ಗಂಟೆಗೆ ಅರಣ್ಯ ಭವನದಿಂದ ಗಜಪಯಣ ಆರಂಭವಾಗುತ್ತಿದ್ದಂತೆ ಇಡೀ ರಸೆಯಲ್ಲ್ತಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ರಸ್ತೆಯುದ್ದಕ್ಕೂ ಕಾದು ನಿಂತ ಜನ:
ಅರಣ್ಯ ಭವನದಿಂದ ಜಯಮಾರ್ತಾಂಡ ದ್ವಾರದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಸಾರ್ವಜನಿಕರು, ಶಾಲಾ ಮಕ್ಕಳು ಸಾಲುಗಟ್ಟಿ ನಿಂತು ಗಜಪಡೆಗಳನ್ನು ಕಣ್ತುಂಬಿಕೊಂಡರು. ಪೊಲೀಸರು ಇಕ್ಕೆಲಗಳಲ್ಲಿ ಹಗ್ಗ ಹಿಡಿದು ಜನರನ್ನು ನಿಯಂತ್ರಿಸಿ, ಗಜಪಡೆಗಳಿಗೆ ಹಾದಿ ಮಾಡಿಕೊಟ್ಟರು. ಆನೆಗಳು ಹೆಜ್ಜೆ ಹಾಕುತ್ತಾ ಸಾಗುತ್ತಿದ್ದಂತೆ ಜನರು ಚಪ್ಪಾಳೆ ತಟ್ಟಿ, ಮೊಬೈಲ್ ನಲ್ಲಿ ಫೋಟೋ, ವಿಡಿಯೋ ಸೆರೆಹಿಡಿದು ಸಂಭ್ರಮಿಸಿದರು.

ಗಣ್ಯರಿಂದ ಅದ್ಧೂರಿ ಸ್ವಾಗತ
ಬೆಳಗ್ಗೆ ೯:೫೨ ರಿಂದ ೧೦:೧೯ರ ಶುಭ ತುಲಾ ಲಗ್ನದಲ್ಲಿ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಅರಮನೆ ಆಡಳಿತ ಮಂಡಳಿಯಿಂದ ಸಾಂಪ್ರದಾಯಿಕ ಪೂಜೆ, ಪೂರ್ಣಕುಂಭ ಸ್ವಾಗತ ನಡೆಯಿತು.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಯತಿಂದ್ರ, ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಜಿಲ್ಲಾಧಿಕಾರಿ ಮೈಸೂರು ಪೊಲೀಸ್ ಆಯುಕ್ತರು, ಜಿಲ್ಲಾ ಪಂಚಾಯತ್ ಸಿಇಒ ಅರಮನೆ ಮಂಡಳಿಯ ಉಪನಿರ್ದೇಶಕರು ಹಾಗೂ ದಸರಾ ಕಲಾ ತಂಡದ ಸದಸ್ಯರು ಉಪಸ್ಥಿತರಿದ್ದು, ಆನೆಗಳಿಗೆ ಹೂಮಾಲೆ ಹಾಕಿ, ಕಬ್ಬು, ಬೆಲ್ಲ, ಹಣ್ಣುಗಳನ್ನು ನೀಡಿ ಬರಮಾಡಿಕೊಂಡರು.

ಅರಮನೆ ಪ್ರವೇಶಿಸಿದ ೯ ಗಜಗಳು – ಧನಂಜಯ (೪೫), ಪ್ರಶಾಂತ (೫೪), ಗೋಪಿ (೪೩), ಶ್ರೀರಾಮ (೪೧), ಕಾವೇರಿ (೪೬), ಮಹೇಂದ್ರ (೪೨), ಲಕ್ಷ್ಮೀ (೫೪), ಏಕಲವ್ಯ (೪೧), ಶ್ರೀಕಂಠ (೫೭).

ಇಂದು ಸಂಜೆ ಎಲ್ಲಾ ಆನೆಗಳ ತೂಕ ಪರೀಕ್ಷೆ ನಡೆಸಿ, ನಾಳೆಯಿಂದ ಅರಮನೆ ಆವರಣದಲ್ಲಿ ಜಂಬೂಸವಾರಿ ತಾಲೀಮು ಆರಂಭವಾಗಲಿದೆ ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದ್ದಾರೆ.