Home Lead News ರಾಜ್ಯಕ್ಕೆ ಮತ್ತೆ ಆಘಾತ; 15 ದಿನ 9 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸಲು ಸಮಿತಿ...

ರಾಜ್ಯಕ್ಕೆ ಮತ್ತೆ ಆಘಾತ; 15 ದಿನ 9 ಸಾವಿರ ಕ್ಯೂಸೆಕ್ ಕಾವೇರಿ ನೀರು ಹರಿಸಲು ಸಮಿತಿ ಸೂಚನೆ

ನವದೆಹಲಿ,ಆ.24-ಮುಂದಿನ ಹದಿನೈದು ದಿನಗಳ ವರೆಗೆ ತಮಿಳುನಾಡಿಗೆ 9 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚಿಸಿದೆ.


ಇಂದು ನಡೆದ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದಾಗಿ ಕರ್ನಾಟಕಕ್ಕೆ ಮತ್ತೆ ಆಘಾತ ಉಂಟಾಗಿದೆ.


ಆ.25ರಿಂದ ಬೆಳಿಗ್ಗೆ 8 ಗಂಟೆಯಿಂದ ಮುಂದಿನ 15 ದಿನಗಳ ಅವಧಿಯಲ್ಲಿ ರಾಜ್ಯದ ಜಲಾಶಯಗಳಿಂದ
ಬಿಳಿಗುಂಡ್ಲುವಿನಲ್ಲಿ 11.66 ಟಿಎಂಸಿ ನೀರು ಹರಿಸುವಂತೆ ಸೂಚನೆ ನೀಡಲಾಗಿದೆ.


ಈ ಅವಧಿಯಲ್ಲಿ ಬಿಳಗೊಂಡ್ಲುವಿನ ಹರಿವನ್ನು 9 ಸಾವಿರ ಕ್ಯೂಸೆಕ್ ಮಟ್ಟದಲ್ಲಿ ಖಾತ್ರಿಪಡಿಸುವ ಜವಾಬ್ದಾರಿ ಕರ್ನಾಟಕದ ಪ್ರತಿನಿಧಿಗಳ ಮೇಲಿದೆ ಎಂದು ಆದೇಶಿಸಲಾಗಿದೆ.


ಮೊದಲ ಬಾರಿಗೆ 3 ಸಾವಿರ ಕ್ಯೂಸೆಕ್‌ ನೀರು ಬಿಡಲು ಆದೇಶಿಸಲಾಗಿತ್ತು. ಎರಡನೇ ಬಾರಿಗೆ 12 ಸಾವಿರ, ಈಗ ಮೂರನೇ ಬಾರಿಗೆ 9 ಸಾವಿರ ಕ್ಯೂಸೆಕ್‌ ನೀರು ಬಿಡಲು ಸೂಚಿಸಲಾಗಿದೆ.


ಕುಡಿಯುವ ನೀರಿಗಾಗಿ ಸುಮಾರು 38 ಟಿಎಂಸಿ, ಪರಿಸರದ ಹರಿವಿಗಾಗಿ 10 ಟಿಎಂಸಿ ನೀರನ್ನು ಕಾಯ್ದಿರಿಸುವ ಅಗತ್ಯವಿದೆ. ತಮಿಳುನಾಡಿನ ಮೆಟ್ಟೂರು ಜಲಾಶಯದ ಸಂಗ್ರಹ, ಅಂತರ್ಜಲ ಲಭ್ಯತೆ ಮತ್ತು ಈಶಾನ್ಯ ಮುಂಗಾರು ನಿರೀಕ್ಷಿತ ಹರಿವುಗಳನ್ನು ಪರಿಗಣಿಸಬೇಕು ಎಂದು ಕರ್ನಾಟಕ ವಾದಿಸಿತು.


ಸಂಕಷ್ಟದ ಹೊರೆ ಕೇವಲ ಕರ್ನಾಟಕದ ಜಲಾಶಯಗಳ ಮೇಲೆ ಬೀಳಬಾರದು. ಕಾವೇರಿ ಕೊಳ್ಳದ ಎರಡೂ ರಾಜ್ಯಗಳ ನಡುವೆ ಸಮಾನವಾಗಿ ಹಂಚಿಕೊಳ್ಳಬೇಕು. ಬಿಳಿಗುಂಡ್ಲುವಿನಲ್ಲಿ ಪ್ರಸ್ತುತ ನಿಗದಿಪಡಿಸಿರುವ 12,000 ಕ್ಯೂಸೆಕ್ ಬದಲು ದಿನಕ್ಕೆ 6,000 ಕ್ಯೂಸೆಕ್‌ಗೆ ಇಳಿಸಿ, ಆಗಸ್ಟ್ 27 ರವರೆಗೆ ಮಾತ್ರ ನೀರು ಹರಿಸಲು ಮನವಿ ಮಾಡಿತು.

ತಮಿಳುನಾಡು ಬೇಡಿಕೆ

ಬಾಕಿ ಉಳಿಸಿಕೊಂಡ 17.49 ಟಿಎಂಸಿ ನೀರು ಹರಿಸಬೇಕು. ಬಿಳಿಗುಂಡ್ಲುವಿನಲ್ಲಿ ನಿಗದಿತ ಹರಿವು ಕಾಯ್ದುಕೊಳ್ಳಲು ಕೆಆರ್‌ಎಸ್ ಮತ್ತು ಕಬಿನಿಯಿಂದ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು.


ಆಗಸ್ಟ್ 24 ರಿಂದ ಸೆಪ್ಟೆಂಬರ್ 7 ರವರೆಗಿನ 15 ದಿನಗಳಲ್ಲಿ ಒಟ್ಟು 28.386 ಟಿಎಂಸಿ ನೀರು ಬಿಳಿಗುಂಡ್ಲುವಿಗೆ ತಲುಪಬೇಕು. ಇದರಲ್ಲಿ 17.49 ಟಿಎಂಸಿ ಬಾಕಿ ಪ್ರಮಾಣ ಹಾಗೂ 10.896 ಟಿಎಂಸಿ ಪ್ರೊ-ರಾಟಾ ಪಾಲು ಸೇರಿದೆ. ಸಂಕಷ್ಟ ಪರಿಸ್ಥಿತಿ ಯಲ್ಲೂ ತಮಿಳುನಾಡಿಗೆ ತನ್ನ ನ್ಯಾಯಸಮ್ಮತ ಪಾಲು ಸಿಗಬೇಕು ಎಂದು ಒತ್ತಾಯಿಸಿದೆ.