
ನವದೆಹಲಿ,ಆ.೧೨: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮುಂಬರುವ ಮೂರು ಪಂದ್ಯಗಳ ಟಿ೨೦ ಅಂತಾರಾಷ್ಟ್ರೀಯ ಸರಣಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಖಚಿತಪಡಿಸಿದೆ.
ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್ ೧೩ರಂದು ನಡೆಯಲಿದ್ದು, ಎರಡನೇ ಹಾಗೂ ಮೂರನೇ ಪಂದ್ಯಗಳು ಕ್ರಮವಾಗಿ ಸೆಪ್ಟೆಂಬರ್ ೧೫ ಮತ್ತು ೧೭ರಂದು ನಡೆಯಲಿವೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣವು ಸರಣಿಯ ಎಲ್ಲಾ ಮೂರು ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.
ಅಫ್ಘಾನಿಸ್ತಾನವು ಆತಿಥೇಯ ತಂಡವಾಗಿ ಈ ಸರಣಿಯಲ್ಲಿ ಆಡಲಿದೆ. ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಅವರು ಈ ಬೆಳವಣಿಗೆಯನ್ನು ಖಚಿತಪಡಿಸಿದ್ದು, ಅಫ್ಘಾನಿಸ್ತಾನ ಕ್ರಿಕೆಟ್‌ಗೆ ಬೆಂಬಲ ನೀಡುವ ಬಿಸಿಸಿಐನ ಬದ್ಧತೆಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ನಡುವಿನ ಸಂಬಂಧವನ್ನು ಈ ಸರಣಿ ಮತ್ತಷ್ಟು ಬಲಪಡಿಸಲಿದೆ ಎಂದು ಅವರು ಹೇಳಿದ್ದಾರೆ.
“ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಬೆಳವಣಿಗೆಗೆ ಬೆಂಬಲ ನೀಡಲು ಮತ್ತು ಅದರ ಆಟಗಾರರಿಗೆ ಉನ್ನತ ಮಟ್ಟದಲ್ಲಿ ಸ್ಪರ್ಧಿಸುವ ಅವಕಾಶಗಳನ್ನು ಒದಗಿಸಲು ಬಿಸಿಸಿಐ ಬದ್ಧವಾಗಿದೆ. ದ್ವಿಪಕ್ಷೀಯ ಕ್ರಿಕೆಟ್ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗುಣಮಟ್ಟದ ಎದುರಾಳಿಗಳ ವಿರುದ್ಧ ನಿಯಮಿತವಾಗಿ ಆಡುವುದರಿಂದ ತಂಡಗಳಿಗೆ ಅಮೂಲ್ಯವಾದ ಅನುಭವ ದೊರೆಯುತ್ತದೆ.
ಈ ಸರಣಿಗಾಗಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯನ್ನು ಭಾರತಕ್ಕೆ ಸ್ವಾಗತಿಸುತ್ತೇವೆ. ಸರಣಿಯನ್ನು ಯಶಸ್ವಿಗೊಳಿಸಲು ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ. ಎರಡೂ ದೇಶಗಳ ಕ್ರಿಕೆಟ್ ಸಂಬಂಧವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ಒಟ್ಟಾಗಿ ಇನ್ನಷ್ಟು ಕೆಲಸ ಮಾಡುವ ಅವಕಾಶಗಳಿವೆ ಎಂಬ ನಂಬಿಕೆ ನಮಗಿದೆ,” ಎಂದು ಮನ್ಹಾಸ್ ಹೇಳಿದ್ದಾರೆ.
ಈ ಮಧ್ಯೆ, ಬಿಸಿಸಿಐ ಅಫ್ಘಾನಿಸ್ತಾನ ವಿರುದ್ಧದ ಸರಣಿಯನ್ನು ಅಧಿಕೃತವಾಗಿ ಖಚಿತಪಡಿಸಿರುವ ಹಿನ್ನೆಲೆಯಲ್ಲಿ, ಭಾರತದ ಪ್ರಸ್ತಾವಿತ ಬಾಂಗ್ಲಾದೇಶ ಪ್ರವಾಸ ನಡೆಯುವ ಸಾಧ್ಯತೆ ಮತ್ತಷ್ಟು ಕಡಿಮೆಯಾಗಿದೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಸೆಪ್ಟೆಂಬರ್ ೧ರಿಂದ ೧೩ರವರೆಗೆ ಆರು ಪಂದ್ಯಗಳ ವೈಟ್-ಬಾಲ್ ಸರಣಿಗಾಗಿ ಸಮಯವನ್ನು ನಿಗದಿಪಡಿಸಿತ್ತು.






























