
ಕಾಠ್ಮಂಡು.ಆ೨೬ –ನೇಪಾಳದ ಉತ್ತರ ಗಡಿಭಾಗದಲ್ಲಿರುವ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ದಿಢೀರ್ ಪ್ರವಾಹಕ್ಕೆ ಇಡೀ ಗ್ರಾಮಗಳೇ ಕೊಚ್ಚಿಹೋಗಿದ್ದು,ಭಾರಿ ಪ್ರಾಣಹಾನಿ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ಪ್ರಸ್ತುತ ಲಭ್ಯವಾಗಿರುವ ಪ್ರಾಥಮಿಕ ವರದಿಗಳ ಪ್ರಕಾರ ಸುಮಾರು ೧,೦೦೦ ಜನರು ಪ್ರವಾಹದ ಭೋರ್ಗರೆತಕ್ಕೆ ಕೊಚ್ಚಿಹೋಗಿರಬಹುದು ಎಂದು ಅಂದಾಜಿಸಲಾಗಿದ್ದು,ಸಾವು-ನೋವಿನ ಅಧಿಕೃತ ಅಂಕಿ-ಅಂಶಗಳು ಇನ್ನೂ ದೃಢಪಟ್ಟಿಲ್ಲ.
ಟಿಬೆಟ್ ಭಾಗದಲ್ಲಿ ಉದ್ಭವಿಸುವ ಭೋಟೆ ಕೋಶಿ ನದಿಯಲ್ಲಿ ಬೆಳಿಗ್ಗೆ ಸುಮಾರು ೯:೦೦ ಗಂಟೆಯ ವೇಳೆಗೆ ದಿಢೀರನೆ ನೀರಿನ ಮಟ್ಟ ಆಕಾಶಮುಖಿಯಾಗಿ ಹೆಚ್ಚಾಯಿತು. ಪರಿಣಾಮವಾಗಿ, ರಸುವಾ ಜಿಲ್ಲೆಯ ಟಿಮುರೆ, ಸ್ಯಾಪ್ರು ಬೇಸಿ ಸೇರಿದಂತೆ ಗಡಿ ಪ್ರದೇಶದಲ್ಲಿದ್ದ ಗ್ರಾಮಗಳು, ಮಾರುಕಟ್ಟೆಗಳು ಹಾಗೂ ಜಲವಿದ್ಯುತ್ ಯೋಜನೆಗಳ ಕಟ್ಟಡಗಳು ನೀರುಪಾಲಾಗಿವೆ. ನದಿಯು ಧುಮ್ಮಿಕ್ಕಿ ಹರಿದ ರಭಸಕ್ಕೆ ಗಡಿ ಭಾಗವನ್ನು ಸಂಪರ್ಕಿಸುವ ಹೆದ್ದಾರಿಗಳು ಮತ್ತು ಸೇತುವೆಗಳು ಕೊಚ್ಚಿಹೋಗಿದ್ದು, ಪ್ರದೇಶವು ದೇಶದ ಇತರ ಭಾಗಗಳಿಂದ ಸಂಪೂರ್ಣವಾಗಿ ಸಂಪರ್ಕ ಕಳೆದುಕೊಂಡಿದೆ.
ಸ್ಥಳೀಯವಾಗಿ ಯಾವುದೇ ಭಾರಿ ಮಳೆಯಾಗಿರಲಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಟಿಬೆಟ್ ಭಾಗದ ಹಿಮಾಲಯ ಶ್ರೇಣಿಯಲ್ಲಿ ಗ್ಲೇಸಿಯರ್ ಸರೋವರ ಒಡೆದು ನೀರು ಅಪಾರ ಪ್ರಮಾಣದಲ್ಲಿ ಹರಿದುಬಂದಿರುವ ಶಂಕೆ ವ್ಯಕ್ತವಾಗಿದೆ.ತ್ರಿಶೂಲಿ ನದಿ ಜಲಾನಯನ ಪ್ರದೇಶದ ಕೆಳಭಾಗದಲ್ಲಿರುವ ನುವಾಕೋಟ್, ಧಾಡಿಂಗ್, ಚಿತ್ವಾನ್ ಹಾಗೂ ಗೋರ್ಖಾ ಜಿಲ್ಲೆಗಳ ನದಿ ತೀರದ ಜನರಿಗೆ ತಕ್ಷಣವೇ ಸುರಕ್ಷಿತ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಹೈ ಅಲರ್ಟ್ ಘೋಷಿಸಲಾಗಿದೆ.
ಪ್ರಧಾನಿ ಬಾಲೆನ್ ಶಾ ತುರ್ತು ಸಭೆ
ಘಟನೆ ತಿಳಿಯುತ್ತಿದ್ದಂತೆಯೇ ನೇಪಾಳದ ಪ್ರಧಾನಮಂತ್ರಿ ಬಾಲೆನ್ ಶಾ, ರಾಷ್ಟ್ರೀಯ ವಿಕೋಪ ನಿರ್ವಹಣಾ ಮಂಡಳಿಯ ತುರ್ತು ಸಭೆ ಕರೆದು ರಕ್ಷಣಾ ಕಾರ್ಯದ ಪರಿಶೀಲನೆ ನಡೆಸಿದ್ದಾರೆ.
ಸೇನಾ ಹೆಲಿಕಾಪ್ಟರ್ ನಿಯೋಜನೆ: ನೇಪಾಳ ಸೇನೆ, ಪೊಲೀಸ್ ಹಾಗೂ ಸಶಸ್ತ್ರ ಪಡೆಗಳ ಸಿಬ್ಬಂದಿ ದುರಂತ ಪ್ರದೇಶದಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ. ಸಂತ್ರಸ್ತ ಪ್ರದೇಶಗಳಿಗೆ ವೈದ್ಯಕೀಯ ತಂಡಗಳೊಂದಿಗೆ ಸೇನಾ ಹೆಲಿಕಾಪ್ಟರ್‌ಗಳನ್ನು ರವಾನಿಸಲಾಗಿದೆ.
ಪ್ರವಾಹದಿಂದಾಗಿ ಹೆಲಿಪ್ಯಾಡ್ ಮತ್ತು ರಸ್ತೆಗಳು ಕೊಚ್ಚಿಹೋಗಿರುವುದರಿಂದ ದುರ್ಗಮ ಬೆಟ್ಟದ ಹಾದಿಯಲ್ಲಿ ರಕ್ಷಣಾ ತಂಡಗಳು ತಲುಪುವುದು ಸವಾಲಾಗಿ ಪರಿಣಮಿಸಿದೆ.
ದಿಢೀರ್ ಹರಿದುಬಂದ ಭೀಕರ ಪ್ರವಾಹದ ದೃಶ್ಯಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಶ್ವದಾದ್ಯಂತ ಕಳವಳಕ್ಕೆ ಕಾರಣವಾಗಿದೆ. ನಷ್ಟದ ಪೂರ್ಣ ಪ್ರಮಾಣದ ವಿವರಗಳು ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ನಂತರವಷ್ಟೇ ತಿಳಿದುಬರಬೇಕಿದೆ.
































