Home Lead News ಪ್ರತ್ಯೇಕ ಅಪಘಾತ: ೧೯ ಸಾವು

ಪ್ರತ್ಯೇಕ ಅಪಘಾತ: ೧೯ ಸಾವು

ಕೋಟಾ/ಕಚ್‌ನ೨೨: ದೇವರ ದರ್ಶನ ಹಾಗೂ ಪ್ರವಾಸ ಮುಗಿಸಿ ಮನೆಗೆ ಮರಳುತ್ತಿದ್ದವರ ಪಾಲಿಗೆ ರಸ್ತೆ ಪ್ರಯಾಣವೇ ಸಾವಾಗಿ ಪರಿಣಮಿಸಿದೆ. ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಶನಿವಾರ ರಾತ್ರಿ ಸಂಭವಿಸಿದ ಮೂರು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಒಟ್ಟು ೧೯ ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಕೋಟಾದಲ್ಲಿ ಖಾಟು ಶ್ಯಾಮ್ ದರ್ಶನ ಮುಗಿಸಿ ಮರಳುತ್ತಿದ್ದ ಒಂದೇ ಕುಟುಂಬದ ೯ ಮಂದಿ, ಗುಜರಾತ್‌ನ ಕಚ್‌ನಲ್ಲಿ ಮೂವರು ಮಕ್ಕಳು ಸೇರಿದಂತೆ ೭ ಮಂದಿ ಹಾಗೂ ಜೋಧ್‌ಪುರದಲ್ಲಿ ೩ ಮಂದಿ ಅಪಘಾತಕ್ಕೆ ಬಲಿಯಾಗಿದ್ದಾರೆ.

ಜೋಧ್‌ಪುರದಲ್ಲೂ ಕಾರು-ಟೆಂಪೊ ಡಿಕ್ಕಿಯಲ್ಲಿ ಮೂವರು ಮೃತಪಟ್ಟಿದ್ದು, ೧೫ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ಖಾಟು ಶ್ಯಾಮ್ ದರ್ಶನ ಮುಗಿಸಿ ಮರಳುತ್ತಿದ್ದ ಕುಟುಂಬದ ೯ ಮಂದಿ ದುರ್ಮರಣ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಖಾಟು ಶ್ಯಾಮ್ ದೇವಸ್ಥಾನಕ್ಕೆ ಭೇಟಿ ನೀಡಿ ಮಹಾರಾಷ್ಟ್ರಕ್ಕೆ ವಾಪಸ್ಸಾಗುತ್ತಿದ್ದ ೧೬ ಮಂದಿ ಪ್ರಯಾಣಿಸುತ್ತಿದ್ದ ವಾಹನವು ಕೋಟಾ-ಉದಯಪುರ ಹೆದ್ದಾರಿಯ ಶಂಭುಪುರ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದರು. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಸ್ಥಳೀಯರು ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ, ಒಂಬತ್ತು ಮಂದಿ ಮೃತಪಟ್ಟಿದ್ದು, ಉಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಕುರಿತು ಮಾಹಿತಿ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ರಾಜೇಶ್ ಜೋಶಿ, ವಾಹನದಲ್ಲಿ ೧೬ ಮಂದಿ ಇದ್ದರು. ಎಲ್ಲರೂ ಒಂದೇ ಕುಟುಂಬದವರು. ಖಾಟು ಶ್ಯಾಮ್ ದರ್ಶನ ಮುಗಿಸಿ ಮಹಾರಾಷ್ಟ್ರಕ್ಕೆ ಮರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವುದು ಆಡಳಿತದ ಮೊದಲ ಆದ್ಯತೆಯಾಗಿದ್ದು, ಮೃತರ ಮರಣೋತ್ತರ ಪರೀಕ್ಷೆ ಸೇರಿದಂತೆ ಅಗತ್ಯ ಪ್ರಕ್ರಿಯೆಗಳು ನಡೆಯುತ್ತಿವೆ ಎಂದರು.

ಕಚ್‌ನಲ್ಲಿ ಸೇನಾ ಸಿಬ್ಬಂದಿಯ ಕುಟುಂಬದ ೭ ಮಂದಿ ಸಾವು
ಗುಜರಾತ್‌ನ ಕಚ್ ಜಿಲ್ಲೆಯ ಭುಜ್-ಖಾವ್ಡಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಟ್ರೇಲರ್ ಲಾರಿ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಹಾಗೂ ಮೂವರು ಮಕ್ಕಳು ಸೇರಿದ್ದಾರೆ.

ವೇಕಾರಿಯಾ ರಣ್ ಪ್ರದೇಶದ ಬಳಿ ಶನಿವಾರ ತಡರಾತ್ರಿ ಅಪಘಾತ ಸಂಭವಿಸಿದ್ದು, ಖಾವ್ಡಾ ಕಡೆಯಿಂದ ಪ್ರವಾಸ ಮುಗಿಸಿ ಹಿಂದಿರುಗುತ್ತಿದ್ದ ಕಾರು ಟ್ರೇಲರ್ ಲಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ತೀವ್ರತೆಗೆ ಕಾರು ಪಲ್ಟಿಯಾಗಿ ಸಂಪೂರ್ಣ ಜಖಂಗೊಂಡಿದ್ದು, ಅದರಲ್ಲಿದ್ದ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಾಹನದ ಅವಶೇಷಗಳಲ್ಲಿ ಸಿಲುಕಿದ್ದ ಮೃತದೇಹಗಳನ್ನು ಧೋರ್ಡೊ ಪೊಲೀಸರು ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿ ಹೊರತೆಗೆದರು.

ಮೃತರು ಉತ್ತರಾಖಂಡ ಮೂಲದ, ಭುಜ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೇನಾ ಸಿಬ್ಬಂದಿಯ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರು ಎನ್ನಲಾಗಿದೆ. ಮೃತರ ಗುರುತು ಮತ್ತು ಅಪಘಾತದ ನಿಖರ ಕಾರಣದ ಕುರಿತು ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಜೋಧ್‌ಪುರ- ಕಾರುಟೆಂಪೊ ಡಿಕ್ಕಿ: ೩ ಸಾವು, ೧೫ಕ್ಕೂ ಹೆಚ್ಚು ಗಾಯ
ರಾಜಸ್ಥಾನದ ಜೋಧ್‌ಪುರದಲ್ಲೂ ಮತ್ತೊಂದು ರಸ್ತೆ ಅಪಘಾತ ಸಂಭವಿಸಿದ್ದು, ಕಾರು ಮತ್ತು ಟೆಂಪೊ ನಡುವೆ ಡಿಕ್ಕಿಯಾಗಿ ಮೂವರು ಮೃತಪಟ್ಟಿದ್ದಾರೆ. ೧೫ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ನಾಲ್ಕು ಆಂಬುಲೆನ್ಸ್‌ಗಳ ಮೂಲಕ ಗಾಯಾಳುಗಳನ್ನು ಮಥುರಾದಾಸ್ ಮಥುರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಗುಜರಾತ್ ಮೂಲದ ಕುಟುಂಬವೊಂದು ರಾಮದೇವರ ದೇವಸ್ಥಾನಕ್ಕೆ ಭೇಟಿ ನೀಡಿ ವಾಪಸ್ಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಸಂಜೆ ಸುಮಾರು ೭ ಗಂಟೆಗೆ ಆಸ್ಪತ್ರೆ ಆಡಳಿತಕ್ಕೆ ಮಾಹಿತಿ ತಲುಪಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಅಗತ್ಯ ವ್ಯವಸ್ಥೆ ಮಾಡಲಾಗಿತ್ತು ಎಂದು ಆಸ್ಪತ್ರೆಯ ಅಧೀಕ್ಷಕ ವಿಕಾಸ್ ರಾಜಪುರೋಹಿತ್ ತಿಳಿಸಿದ್ದಾರೆ.

ಒಂದೇ ರಾತ್ರಿ ರಸ್ತೆ ದುರಂತಗಳ ಸರಣಿ
ಕೋಟಾ: ೯ ಮಂದಿ ಸಾವು ಖಾಟು ಶ್ಯಾಮ್ ದರ್ಶನದಿಂದ ಮರಳುತ್ತಿದ್ದ ಕುಟುಂಬ
ಕಚ್: ೭ ಮಂದಿ ಸಾವು ಮೂವರು ಮಕ್ಕಳು ಸೇರಿ ಕುಟುಂಬದ ಸದಸ್ಯರು
ಜೋಧ್‌ಪುರ: ೩ ಮಂದಿ ಸಾವು, ೧೫ಕ್ಕೂ ಹೆಚ್ಚು ಗಾಯ ಕಾರು-ಟೆಂಪೊ ಡಿಕ್ಕಿ
ಒಟ್ಟು ಸಾವು: ೧೯ ಮಂದಿ