
ಯಶವಂತ್ ಬಿಜೂರ್ ನಿರ್ದೇಶನದ ಚಿತ್ರದ ಟ್ರೇಲರ್ ಬಿಡುಗಡೆ
ಹಾಸ್ಯ ಮತ್ತು ಅಪರಾಧದ ಎಳೆಗಳನ್ನು ಬೆಸೆದಿರುವ ‘ವಿದೂಷಕ’ ಸಿನಿಮಾ ನವೆಂಬರ್ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಯಶ್ ಬಿಜೂರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಯಶವಂತ್ ಬಿಜೂರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಿತ್ರದ ಟ್ರೇಲರ್ ಅನ್ನು ಇತ್ತೀಚೆಗೆ ನಿರ್ದೇಶಕ ಕೆ.ಎಂ. ಚೈತನ್ಯ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ನಟನೆಯ ಜೊತೆಗೆ ಡಬ್ಬಿಂಗ್ ಕ್ಷೇತ್ರದಲ್ಲೂ ಅನುಭವ ಹೊಂದಿರುವ ಯಶವಂತ್ ಬಿಜೂರ್ ಅವರ ಹಲವು ವರ್ಷಗಳ ಸಿನಿಮಾ ಕನಸಿಗೆ ‘ವಿದೂಷಕ’ ರೂಪ ನೀಡಿದೆ. ಸುಮಾರು ಮೂರು ವರ್ಷಗಳ ಪರಿಶ್ರಮದ ಫಲವಾಗಿ ಮೂಡಿಬಂದಿರುವ ಈ ಚಿತ್ರವನ್ನು ಪ್ರೀತಿ ಮತ್ತು ಪ್ಯಾಷನ್ನಿಂದ ರೂಪಿಸಿರುವುದಾಗಿ ಅವರು ತಿಳಿಸಿದರು.
‘ವಿದೂಷಕ’ ಕಾಮಿಡಿ ಆಧಾರಿತ ಕ್ರೈಮ್ ಥ್ರಿಲ್ಲರ್ ಆಗಿದ್ದು, ನೈಜ ಘಟನೆಯೊಂದರಿಂದ ಪ್ರೇರಣೆ ಪಡೆದಿದೆ. ಹಾಸ್ಯದೊಂದಿಗೆ ಆರಂಭವಾಗುವ ಕಥೆ ನಾಯಕನಿಗೆ ಇರುವ ‘ಗೈನೊಫೋಬಿಯಾ’ ಎಂಬ ಭಯದ ಸುತ್ತ ಸಾಗುತ್ತದೆ. ಚಿತ್ರದಲ್ಲಿ ಶೀರ್ಷಿಕೆ ಗೀತೆ, ರೊಮ್ಯಾಂಟಿಕ್ ಹಾಡು ಹಾಗೂ ಕ್ಲಬ್ ಸಾಂಗ್ ಇದ್ದು, ಕಥೆಯ ವೇಗಕ್ಕೆ ಧಕ್ಕೆಯಾಗದಂತೆ ಪ್ರಣಯ ಗೀತೆಯನ್ನು ಲಿರಿಕಲ್ ವಿಡಿಯೋ ರೂಪದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ನಾಯಕ ರವಿ ಸಾಲಿಯಾನ್ ಹಾಗೂ ನಾಯಕಿ ಅಮೃತಾ ಉಪಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪತ್ರಕರ್ತೆಯಾಗಿ ವೃತ್ತಿ ಆರಂಭಿಸಿ ಕಿರುತೆರೆಯಲ್ಲಿ ಕೆಲಸ ಮಾಡಿರುವ ಅಮೃತಾ ಈ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಛಾಯಾಗ್ರಾಹಕ ಪರಮೇಶ್ವರ್, ನಟರಾದ ಹೆದ್ದೂರು ಮಂಜುನಾಥ್ ಶೆಟ್ಟಿ, ನಿಪುಣ್, ಸುಹಾಸ್ ಅತ್ರೇಯಸ್, ಸಂಕಲನಕಾರ ನಾಗೇಂದ್ರ ಅರಸ್ ಹಾಗೂ ಭುವಿ ಮ್ಯೂಸಿಕ್ನ ವಿಜಯ್ ರೈ ಸೇರಿದಂತೆ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.





















