Home Lead News ತಮಿಳುನಾಡು ಅರ್ಜಿ ವಜಾ

ತಮಿಳುನಾಡು ಅರ್ಜಿ ವಜಾ

ಕಾವೇರಿ ನೀರು ಹಂಚಿಕೆ

ನವದೆಹಲಿ, ನ.೨೦: ಹೆಚ್ಚುವರಿಯಾಗಿ ಕಾವೇರಿ ನದಿ ನೀರನ್ನು ಬಿಡುಗಡೆ ಮಾಡುವಂತೆ ಕೋರಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಕಾವೇರಿ ನದಿ ನೀರಿನ ಬಿಡುಗಡೆಗೆ ಸಂಬಂಧಿಸಿದಂತೆ ತಮಿಳುನಾಡು ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಇಂದು ವಜಾ ಗೊಳಿಸಿದೆ.


ಕರ್ನಾಟಕ ಕಾವೇರಿ ನೀರು ಹರಿಸುತ್ತಿಲ್ಲ ಎಂದು ಆಕ್ಷೇಪಿಸಿ ತಮಿಳುನಾಡು ಜುಲೈನಲ್ಲಿ ಸುಪ್ರೀಂ ಕೋರ್ಟ್‌ನ ಕದ ತಟ್ಟಿದ್ದು ಬರಗಾಲದ ಪರಿಸ್ಥಿತಿಯಲ್ಲಿ ಕಡಿಮೆ ಮಾಡಲಾದ ಹಂಚಿಕೆಯ ಹೊರತಾಗಿ ಸುಮಾರು ೧೧ ರಿಂದ ೧೧.೭೧ ಟಿಎಂಸಿ ನೀರನ್ನು ಕರ್ನಾಟಕ ಭಾಗ್ಯ ಹರಿಸುವುದು ಬಾಕಿ ಇದೆ ಎಂದು ತಮಿಳುನಾಡು ವಾದಿಸಿದ್ದು ಬೆಳೆ ನಷ್ಟ ಮತ್ತು ರೈತರ ಸಂಕಷ್ಟವನ್ನು ಮುಂದಿಟ್ಟು ಹೆಚ್ಚುವರಿ ನೀರು ಬಿಡಿಸಲು ನಿರ್ದೇಶನ ನೀಡುವಂತೆ ಕೋರಿತ್ತು.


ತಮಿಳುನಾಡಿನ ಅರ್ಜಿಯ ವಿಚಾರಣೆಯನ್ನು ಇಂದು ಪೂರ್ಣಗೊಳಿಸಿದ ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ವಿಕ್ರಂ ನೇತೃತ್ವದ ಪೀಠ ತಮಿಳುನಾಡಿನ ಅರ್ಜಿಯನ್ನು ವಜಾ ಗೊಳಿಸಿ ತೀರ್ಪು ನೀಡಿದೆ


ಕಳೆದ ಆಗಸ್ಟ್ ೩ರಂದು ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಕರ್ನಾಟಕ ನಿಗದಿತ ಪ್ರಮಾಣದ ಕಾವೇರಿ ನೀರನ್ನು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿತ್ತು. ಮಳೆ ಕೊರತೆಯ ವರ್ಷದಲ್ಲಿಯೂ ತನಗೆ ಸಿಗಬೇಕಾದ ಪಾಲು ದೊರೆತಿಲ್ಲ. ಜುಲೈನಿಂದ ಸುಮಾರು ೧೧ ಟಿಎಂಸಿ ಅಡಿ ನೀರಿನ ಕೊರತೆಯಿದ್ದು, ಇದರಿಂದ ರಾಜ್ಯದ ಕೃಷಿ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗಿದೆ ಎಂದು ವಾದಿಸಿತ್ತು. ಬಾಕಿ ನೀರನ್ನು ಸರಿದೂಗಿಸಲು ಕರ್ನಾಟಕ ಪ್ರತಿದಿನ ಹೆಚ್ಚುವರಿಯಾಗಿ ಒಂದು ಟಿಎಂಸಿ ಅಡಿ ನೀರು ಬಿಡುಗಡೆ ಮಾಡಬೇಕು ಎಂದೂ ಕೋರಿತ್ತು.

ತಮಿಳುನಾಡು ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ಪ್ರತಿ ೧೫ ದಿನಗಳಿಗೊಮ್ಮೆ ಸಭೆ ನಡೆಸುತ್ತಿದ್ದರೂ, ಹಿಂದಿನ ಕೊರತೆಯನ್ನು ಸರಿದೂಗಿಸಲು ಅಗತ್ಯ ನಿರ್ದೇಶನ ನೀಡಿಲ್ಲ ಎಂದು ನ್ಯಾಯಾಲಯದ ಗಮನ ಸೆಳೆದಿದ್ದರು. ನೀರಿನ ಕೊರತೆಯಿಂದ ಬೆಳೆಗಳಿಗೆ ಹಾನಿಯಾಗುತ್ತಿದೆ ಎಂಬುದನ್ನೂ ಉಲ್ಲೇಖಿಸಿದ್ದರು.

ಆದರೆ ಕರ್ನಾಟಕದ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್, ರಾಜ್ಯದ ಹಲವು ಜಿಲ್ಲೆಗಳು ಬರ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿರುವುದರಿಂದ ನೀರಾವರಿ ಬಳಕೆಯನ್ನೂ ನಿಯಂತ್ರಿಸಬೇಕಾಗಿದೆ. ಕುಡಿಯುವ ನೀರಿನ ಅಗತ್ಯಕ್ಕೆ ಆದ್ಯತೆ ನೀಡುವುದು ಅನಿವಾರ್ಯ ಎಂದು ವಾದಿಸಿದ್ದರು. ತಮಿಳುನಾಡಿಗೆ ಈಶಾನ್ಯ ಮುಂಗಾರು ಮಳೆಯಿಂದ ಜಲಾಶಯಗಳಿಗೆ ನೀರು ಹರಿದುಬರುವ ಸಾಧ್ಯತೆಯಿದೆ. ಹೀಗಾಗಿ ಹೆಚ್ಚುವರಿ ನೀರು ಬಿಡುಗಡೆಗೆ ನ್ಯಾಯಾಲಯದ ಮಧ್ಯಪ್ರವೇಶ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದ್ದರು.

ಸಾಮಾನ್ಯ ಮಳೆ ವರ್ಷದಲ್ಲಿ ಕರ್ನಾಟಕವು ತಮಿಳುನಾಡಿಗೆ ೧೭೭.೨೫ ಟಿಎಂಸಿ ಅಡಿ ಕಾವೇರಿ ನೀರು ಒದಗಿಸಬೇಕೆಂದು ೨೦೧೮ರ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹಂಚಿಕೆ ನಿಗದಿಪಡಿಸಲಾಗಿದೆ. ಆದರೆ ಮಳೆ ಕೊರತೆಯ ವರ್ಷಗಳಲ್ಲಿ ನದಿಯಲ್ಲಿನ ನೀರಿನ ಲಭ್ಯತೆಗೆ ಅನುಗುಣವಾಗಿ ರಾಜ್ಯಗಳ ಪಾಲನ್ನು ಪ್ರಮಾಣಾನುಗುಣವಾಗಿ ಕಡಿತಗೊಳಿಸುವ ವ್ಯವಸ್ಥೆಯಿದೆ. ಇದೇ ಅಂಶವನ್ನು ಕರ್ನಾಟಕ ತನ್ನ ವಾದದಲ್ಲಿ ಪ್ರಮುಖವಾಗಿ ಮುಂದಿಟ್ಟಿತ್ತು.

ಸುಪ್ರೀಂ ಕೋರ್ಟ್‌ನ ಈ ನಿರ್ಧಾರವು ಪ್ರಸಕ್ತ ನೀರಿನ ಕೊರತೆಯ ಸಂದರ್ಭದಲ್ಲಿ ಕರ್ನಾಟಕದ ನಿಲುವಿಗೆ ಮಹತ್ವ ನೀಡಿದೆ. ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಎರಡೂ ರಾಜ್ಯಗಳ ನಡುವಿನ ವಿವಾದ ಮುಂದುವರಿದಿದ್ದು, ಜಲಾಶಯಗಳ ಒಳಹರಿವು, ನೀರಿನ ಲಭ್ಯತೆ ಮತ್ತು ಕೃಷಿ ಹಾಗೂ ಕುಡಿಯುವ ನೀರಿನ ಅಗತ್ಯಗಳು ಮುಂದಿನ ದಿನಗಳಲ್ಲಿಯೂ ಪ್ರಮುಖವಾಗಲಿವೆ.

ತಮಿಳುನಾಡು ಆರೋಪಿಸಿದ ನೀರಿನ ಕೊರತೆ: ಸುಮಾರು ೧೧ ಟಿಎಂಸಿ ಅಡಿ.
ಬಾಕಿ ನೀರು ಸರಿದೂಗಿಸಲು ದಿನಕ್ಕೆ ಹೆಚ್ಚುವರಿ ೧ ಟಿಎಂಸಿ ಅಡಿ ಬಿಡುಗಡೆಗೆ ಮನವಿ.
ಕರ್ನಾಟಕದ ವಾದ: ಬರ ಪರಿಸ್ಥಿತಿಯಿಂದ ಜಲಾಶಯಗಳ ನೀರಿನ ಸಂಗ್ರಹದ ಮೇಲೆ ಒತ್ತಡ.
ಸಾಮಾನ್ಯ ವರ್ಷದಲ್ಲಿ ತಮಿಳುನಾಡಿಗೆ ಕರ್ನಾಟಕದಿಂದ ೧೭೭.೨೫ ಟಿಎಂಸಿ ಅಡಿ ನೀರು ಹಂಚಿಕೆ.