
ಕಲಬುರಗಿ (ಸಂಗತ್ರಾಸ್ವಾಡಿ): ನಗರದ ಸಂಗತ್ರಾಸ್ವಾಡಿಯ ಕೆಬಿಎನ್ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ‘ಕೆಬಿಎನ್ ಗೋಲ್ಡ್ ಕಪ್-2026’ ಕ್ರಿಕೆಟ್ ಪಂದ್ಯಾವಳಿಯ ಶುಕ್ರವಾರದ ಪಂದ್ಯದಲ್ಲಿ ಬ್ರಿಜೇಶ್ ಪಟೇಲ್ ಕ್ರಿಕೆಟ್ ಅಕಾಡೆಮಿ (ಃPಅಂ) ತಂಡವು ಹೈದರಾಬಾದ್ ಎಲಿಗಂಟ್ ವಿರುದ್ಧ 182 ರನ್ಗಳ ಏಕಪಕ್ಷೀಯ ಹಾಗೂ ಭರ್ಜರಿ ಜಯ ಸಾಧಿಸಿದೆ.
ಪಂದ್ಯಕ್ಕೂ ಮುನ್ನ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ‘ಕನ್ನಡ ಪ್ರಭ’ ಪತ್ರಿಕೆಯ ಮುಖ್ಯ ವರದಿಗಾರರಾದ ಶೇಷಮೂರ್ತಿ ಅವಧಾನಿ ಅವರು ಟಾಸ್ ನೆರವೇರಿಸಿದರು. ಟಾಸ್ ಗೆದ್ದ ಬಿಪಿಸಿಎ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕರಾದ ನಾಯಕ ಶಮಂತ್ ಕೆ.ಸಿ. ರಾಜು ಮತ್ತು ಶ್ರೀಜೇಶ್ ಪಾರ್ಥಿಬನ್ ಮೊದಲ ವಿಕೆಟ್ಗೆ 14 ಓವರ್ಗಳ ಒಳಗೆ 104 ರನ್ಗಳ ಸ್ಫೋಟಕ ಜೊತೆಯಾಟವಾಡಿ ಭದ್ರ ಬುನಾದಿ ಹಾಕಿದರು. ಶಮಂತ್ 38 ಎಸೆತಗಳಲ್ಲಿ 4 ಬೌಂಡರಿ ಸಹಿತ 32 ರನ್ ಗಳಿಸಿ ವಿರಾಟ್ ಕಶ್ಯಪ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ಬೆನ್ನಲ್ಲೇ, ಕೇವಲ 43 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ಗಳ ನೆರವಿನಿಂದ 72 ರನ್ ಸಿಡಿಸಿದ್ದ ಶ್ರೀಜೇಶ್ ಕೂಡ ವಿರಾಟ್ ಕಶ್ಯಪ್ಗೆ ವಿಕೆಟ್ ಒಪ್ಪಿಸಿದರು.
ನಂತರ ಜೊತೆಯಾದ ಹೃತ್ವಿಕ್ ಶೆಟ್ಟಿ ಮತ್ತು ವಿಕೆಟ್ ಕೀಪರ್ ಗೌತಮ್ ಕೃಷ್ಣ ರೆಡ್ಡಿ ಮೂರನೇ ವಿಕೆಟ್ಗೆ 128 ರನ್ಗಳ ಅಮೂಲ್ಯ ಜೊತೆಯಾಟ ನೀಡಿದರು. ಗೌತಮ್ 61 ಎಸೆತಗಳಲ್ಲಿ 42 ರನ್ ಗಳಿಸಿ ಔಟಾದರೆ, ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದ ಹೃತ್ವಿಕ್ ಶೆಟ್ಟಿ 101 ಎಸೆತಗಳಲ್ಲಿ 13 ಆಕರ್ಷಕ ಬೌಂಡರಿಗಳೊಂದಿಗೆ ಭರ್ಜರಿ ಶತಕ (100 ರನ್) ಪೂರೈಸಿದರು. ಅಂತಿಮ ಹಂತದಲ್ಲಿ ಆರವ್ ಎ. ಠಾಕೂರ್ (30 ಎಸೆತಗಳಲ್ಲಿ 40 ರನ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಬಿಪಿಸಿಎ 49.1 ಓವರ್ಗಳಲ್ಲಿ 336 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಹೈದರಾಬಾದ್ ಪರ ವಿರಾಟ್ ಕಶ್ಯಪ್ 67 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದರೆ, ವಿಘ್ನೇಶ್ ರೆಡ್ಡಿ 2 ವಿಕೆಟ್ ಪಡೆದರು.
337 ರನ್ಗಳ ಕಠಿಣ ಗುರಿ ಬೆನ್ನಟ್ಟಿದ ಹೈದರಾಬಾದ್ ಎಲಿಗಂಟ್ ತಂಡಕ್ಕೆ ಪ್ರಸನ್ನ ಕುಮಾರ್ (15 ಎಸೆತಗಳಲ್ಲಿ 28 ರನ್) ವೇಗದ ಆರಂಭ ನೀಡಲು ಯತ್ನಿಸಿದರು. ಆದರೆ ಶೌನಕ್ ವೆಲ್ಲಲೋರ್ ಮತ್ತು ಅಕ್ಷಿತ್ ಸಿಂಗ್ ಆರಂಭಿಕ ಆಘಾತ ನೀಡಿದ್ದರಿಂದ ತಂಡ 47 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಆರಿನ್ ಸಕ್ಸೇನಾ (39 ಎಸೆತಗಳಲ್ಲಿ 43 ರನ್) ಹಾಗೂ ವಿರಾಟ್ ಕಶ್ಯಪ್ (21 ರನ್) ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.
ಪಂದ್ಯದ 14ನೇ ಓವರ್ನಲ್ಲಿ ಲಲಿತಾದಿತ್ಯ ಜಿ. ಸತತ ಎರಡು ಎಸೆತಗಳಲ್ಲಿ ಆರಿನ್ ಸಕ್ಸೇನಾ ಮತ್ತು ನಾಯಕ ಯುವರಾಜ್ ನಾರ್ತಿ ಅವರನ್ನು ಔಟ್ ಮಾಡುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿದರು. 107ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ಹೈದರಾಬಾದ್, ದಿಢೀರ್ ಕುಸಿತ ಕಂಡು 128 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿತು. ನಕುಲ್ ಆರ್. ಸಾಗರ್ ಕೇವಲ 5 ರನ್ ನೀಡಿ 2 ವಿಕೆಟ್ ಪಡೆದು ಎದುರಾಳಿ ಬ್ಯಾಟರ್ಗಳನ್ನು ಕಟ್ಟಿಹಾಕಿದರು. ಅಂತಿಮವಾಗಿ ಹೈದರಾಬಾದ್ ಎಲಿಗಂಟ್ 33.2 ಓವರ್ಗಳಲ್ಲಿ 154 ರನ್ಗಳಿಗೆ ಸರ್ವಪತನ ಕಂಡಿತು. ಬಿಪಿಸಿಎ ಪರ ಲಲಿತಾದಿತ್ಯ ಜಿ. 15 ರನ್ಗಳಿಗೆ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.




















