
ಜಾರ್ಜಿಯಾ.ನ.20- ರಾಜಧಾನಿ ಟಿಬಿಲಿಸಿಯ ಪೆÇನಿಚಾಲಾ ಪ್ರದೇಶದಲ್ಲಿ ಸಂಭವಿಸಿದ ಶಂಕಿತ ಅನಿಲ ಸ್ಫೋಟದಿಂದ ಐದು ಅಂತಸ್ತಿನ ವಸತಿ ಕಟ್ಟಡದ ಒಂದು ಭಾಗ ಕುಸಿದು, ಮಗು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ.
ಸ್ಫೋಟದ ತೀವ್ರತೆಗೆ ಕಟ್ಟಡದ ಭಾಗ ಕುಸಿದಿದ್ದು, ಹಲವು ನಿವಾಸಿಗಳು ಅವಶೇಷಗಳಡಿ ಸಿಲುಕಿದ್ದರು. ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿ ಆರು ಮೃತದೇಹಗಳನ್ನು ಹೊರತೆಗೆದಿವೆ ಎಂದು ಜಾರ್ಜಿಯಾದ ಆಂತರಿಕ ಸಚಿವ ಸುಲ್ಖಾನ್ ತಮಜಾಶ್ವಿಲಿ ತಿಳಿಸಿದ್ದಾರೆ.ಅವಶೇಷಗಳಡಿ ಹಲವು ಗಂಟೆಗಳ ಕಾಲ ಸಿಲುಕಿದ್ದ ಮೂರು ವರ್ಷದ ಬಾಲಕಿಯನ್ನು ಜೀವಂತವಾಗಿ ರಕ್ಷಿಸಲಾಗಿದೆ. ಮೃತ ಮಹಿಳೆಯೊಬ್ಬರು ಬಾಲಕಿಯ ತಾಯಿ ಎಂದು ಶಂಕಿಸಲಾಗಿದೆ. ರಕ್ಷಿಸಲಾದ ಬಾಲಕಿಯನ್ನು ಇಂಗೊರೊಕ್ವಾ ವಿಶ್ವವಿದ್ಯಾಲಯದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಗಂಭೀರ ಗಾಯಗಳಿಲ್ಲ ಎಂದು ತಿಳಿದುಬಂದಿದೆ. 11 ವರ್ಷದ ಬಾಲಕನೊಬ್ಬ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಸ್ಥಿರವಾಗಿದೆ.
ಕಟ್ಟಡದ ಐದನೇ ಮಹಡಿಯಲ್ಲಿ ನಿವಾಸಿಯೊಬ್ಬರು ಅನಿಲ ಹೀಟರ್ ಚಾಲನೆ ಮಾಡಲು ಪ್ರಯತ್ನಿಸಿದ ವೇಳೆ ಸ್ಫೋಟ ಸಂಭವಿಸಿರಬಹುದು ಎಂಬುದು ಪ್ರಾಥಮಿಕ ತನಿಖೆಯ ಅಂದಾಜು. ಆದರೆ, ಸ್ಫೋಟಕ್ಕೆ ಕಾರಣವಾದ ಮನೆ ಕಳೆದ ಒಂದು ವರ್ಷದಿಂದ ಖಾಲಿಯಾಗಿತ್ತು ಹಾಗೂ ಅಲ್ಲಿ ಅನಿಲ ಬಳಕೆಯ ದಾಖಲೆ ಇಲ್ಲ ಎಂದು ಅನಿಲ ಪೂರೈಕೆ ಸಂಸ್ಥೆ ತಿಳಿಸಿದೆ.
ಕಟ್ಟಡದ ಎರಡು ಭಾಗಗಳು ವಾಸಕ್ಕೆ ಸುರಕ್ಷಿತವಲ್ಲ ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ಅಲ್ಲಿನ 28 ಕುಟುಂಬಗಳ 100ಕ್ಕೂ ಹೆಚ್ಚು ನಿವಾಸಿಗಳನ್ನು ತಾತ್ಕಾಲಿಕವಾಗಿ ಹೋಟೆಲ್ಗಳಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಸುರಕ್ಷತಾ ನಿಯಮಗಳ ಉಲ್ಲಂಘನೆ ನಡೆದಿದೆಯೇ ಎಂಬ ಬಗ್ಗೆ ಅಧಿಕಾರಿಗಳು ಕ್ರಿಮಿನಲ್ ತನಿಖೆ ಆರಂಭಿಸಿದ್ದಾರೆ.





















