
ಬೇಳೂರು, ಭಂಡಾರಿ ಸಚೇತಕರು
ಬೆಂಗಳೂರು, ನ. ೨೧- ರಾಜ್ಯದ ವಿವಿಧ ನಿಗಮ ಮಂಡಳಿಗಳಿಗೆ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಮತ್ತು ವಿಧಾನ ಸಭೆಯಲ್ಲಿ ಸರ್ಕಾರದ ಮುಖ್ಯ ಸಚೇತಕರನ್ನಾಗಿ ಶಾಸಕರುಗಳನ್ನು ನೇಮಕ ಮಾಡಲಾಗಿದೆ.
ಸಚಿವ ಸ್ಥಾನ ವಂಚಿತ ಶಾಸಕರುಗಳಿಗೆ ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷ ನಿಯೋಜನೆ ಮಾಡಿದ್ದು, ಒಟ್ಟಾರೆ ೧೫ ನಿಗಮ ಮಂಡಳಿಗಳಿಗೆ ನೇಮಕ ಮಾಡಲಾಗಿದ್ದು, ಈ ಪೈಕಿ ೧೨ ನಿಗಮ ಮಂಡಳಿಗಳಿಗೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಶಾಸಕರನ್ನು ನೇಮಕ ಮಾಡಿ, ಅವರನ್ನು ಓಲೈಸುವ ಪ್ರಯತ್ನ ಮಾಡಲಾಗಿದೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಹಿರಿಯ ಶಾಸಕ ತನ್ವೀರ್ ಸೇಠ್‌ರವರನ್ನು ನೇಮಕ ಮಾಡಲಾಗಿದ್ದು, ವಿಧಾನಸಭೆಯ ಸರ್ಕಾರಿ ಮುಖ್ಯ ಸಚೇತಕರಾಗಿ ಶಾಸಕ ಬೇಳೂರು ಗೋಪಾಲಕೃಷ್ಣರವರನ್ನು, ವಿಧಾನ ಪರಿಷತ್ತಿನ ಮುಖ್ಯ ಸಚೇತಕರನ್ನಾಗಿ ಮಂಜುನಾಥ ಭಂಡಾರಿರವರನ್ನು ಎಐಸಿಸಿ ನೇಮಕ ಮಾಡಿದೆ.
ಇತ್ತೀಚೆಗೆಷ್ಟೇ ವಿವಿಧ ನಿಗಮ ಮಂಡಳಿಗಳಿಗೆ ೫೦೦ಕ್ಕೂ ಹೆಚ್ಚು ನಿರ್ದೇಶಕರು ಹಾಗೂ ಸದಸ್ಯರನ್ನು ನೇಮಕ ಮಾಡಿದ್ದ ಬೆನ್ನಲ್ಲೇ ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷ ನೇಮಕಾತಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಈ ಸಂಬಂಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಪ್ರಕಟಣೆ ಹೊರಡಿಸಿದ್ದು, ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಶಾಸಕರು ಹಾಗೂ ಮುಖಂಡರುಗಳನ್ನು ನೇಮಕ ಮಾಡುವ ಪ್ರಸ್ತಾವನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಪ್ಪಿಗೆ ನೀಡಿದ್ದಾರೆ ಎಂದು ಪಟ್ಟಿಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಕಳುಹಿಸಿದ್ದಾರೆ.
ಎಐಸಿಸಿ ಕಳುಹಿಸಿರುವ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿ ಸಂಬಂಧ ಸರ್ಕಾರದ ಅಧಿಕೃತ ಆದೇಶ ಹೊರಬೀಳಬೇಕಿದೆ.
ಎಐಸಿಸಿ ಅಂತಿಮಗೊಳಿಸಿರುವ ನಿಗಮ ಮಂಡಳಿಗಳ ಅಧ್ಯಕ್ಷರುಗಳ ಪಟ್ಟಿ ಈ ಕೆಳಕಂಡಂತಿದೆ.
- ಆನೇಕಲ್ ಶಾಸಕ ಬಿ. ಶಿವಣ್ಣ, ಅಧ್ಯಕ್ಷರು, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ
- ತಿಪಟೂರು ಶಾಸಕ ಕೆ. ಷಡಾಕ್ಷರಿ, ಅಧ್ಯಕ್ಷರು, ಕರ್ನಾಟಕ ರಾಜ್ಯ ಖನಿಜ ನಿಗಮ
- ರಾಮದುರ್ಗ ಶಾಸಕ ಪಿ.ಎಂ. ಅಶೋಕ್, ಅಧ್ಯಕ್ಷರು, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ
- ಕೊಳ್ಳೆಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ, ಅಧ್ಯಕ್ಷರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)
- ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಅಧ್ಯಕ್ಷರು, ಉಗ್ರಾಣ ನಿಗಮ
- ಹೊನ್ನಾಳ್ಳಿ ಶಾಸಕ ಡಿ.ಜಿ. ಶಾಂತನಗೌಡ, ಅಧ್ಯಕ್ಷರು, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ
- ತರೀಕೆರೆ ಶಾಸಕ ಸಿ.ಹೆಚ್. ಶ್ರೀನಿವಾಸ್, ಅಧ್ಯಕ್ಷರು, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
- ಬೈಲಹೊಂಗಲ ಶಾಸಕ ಮಹಂತೇಶ ಕೌಜಲಗಿ, ಅಧ್ಯಕ್ಷರು, ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ
- ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ, ಅಧ್ಯಕ್ಷರು, ಎಂಎಸ್‌ಐಎಲ್
- ನರಗುಂದ ಶಾಸಕ ಎನ್.ಹೆಚ್. ಕೋನರೆಡ್ಡಿ, ಅಧ್ಯಕ್ಷರು, ಕರ್ನಾಟಕ ಕೃಷಿ ಬೆಲೆ ಆಯೋಗ
- ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಅಧ್ಯಕ್ಷರು, ಕರ್ನಾಟಕ ಕಲ್ಯಾಣ ಪ್ರಾದೇಶಿಕ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)
- ಅಲ್ಲಮಪ್ರಭು ಪಾಟೀಲ್, ಅಧ್ಯಕ್ಷರು, ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ
- ಶಾಮ್‌ನಟೇಕರ್, ಅಧ್ಯಕ್ಷರು, ಕರ್ನಾಟಕ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ
- ಹೆಚ್.ಸಿ. ಲಲಿತಾ ರಾಘವ್, ಅಧ್ಯಕ್ಷರು, ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಗಮ
- ಸುಭಾಷ್ ರಾಥೋಡ್, ಅಧ್ಯಕ್ಷರು, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ
























