
ಟ್ರೇಲರ್ ಅನಾವರಣ
ನವೆಂಬರ್ 13ಕ್ಕೆ ತೆರೆಗೆ
ಕೌಟುಂಬಿಕ ಸಂಬಂಧಗಳ ಭಾವನಾತ್ಮಕ ಸ್ಪರ್ಶ, ತಾಯಿ ಮೇಲಿನ ಪ್ರೀತಿ ಹಾಗೂ ಪ್ರಣಯದ ಸಂಘರ್ಷವನ್ನು ತೆರೆಮೇಲೆ ಕಟ್ಟಿಕೊಡಲು ಸಜ್ಜಾಗಿರುವ ‘ರಾಶಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಹಿರಿಯ ನಟ ಶಶಿಕುಮಾರ್ ಹಾಗೂ ನಟಿ ತಾರಾ ಅನುರಾಧಾ ಟ್ರೇಲರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಡಿ ಬೀಟ್ಸ್ನ ಶೈಲಜಾ ನಾಗ್ ಉಪಸ್ಥಿತರಿದ್ದರು. ಚಿತ್ರ ನವೆಂಬರ್ 13ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಅಖಿಲೇಶ್ ನಿರ್ಮಾಣದ ಈ ಚಿತ್ರಕ್ಕೆ ವಿಜಯ್ ಪಾಳೇಗಾರ್ ನಿರ್ದೇಶನದ ಜೊತೆಗೆ ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ. ಡಿ ಬೀಟ್ಸ್ ಮೂಲಕ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಈಗಾಗಲೇ ಸಂಗೀತಪ್ರಿಯರ ಮೆಚ್ಚುಗೆ ಗಳಿಸಿವೆ. ನಾಯಕ ಆದಿತ್ಯ ಶಶಿಕುಮಾರ್ ಶಿವು ಎಂಬ ಮುಗ್ಧ ಹಳ್ಳಿಯ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕಿ ಸಮೀಕ್ಷಾ ರಾಧ್ಯಾ ಎಂಬ ಕಾಲೇಜು ವಿದ್ಯಾರ್ಥಿನಿಯಾಗಿ ನಟಿಸಿದ್ದಾರೆ.
ಚಿತ್ರ ನಿರ್ಮಾಣದ ಕುರಿತು ಮಾತನಾಡಿದ ಅಖಿಲೇಶ್, ಸಿನಿಮಾ ಮೇಲಿನ ಪ್ರೀತಿಯಿಂದ ನಿರ್ಮಾಣ ಕ್ಷೇತ್ರಕ್ಕೆ ಬಂದಿರುವುದಾಗಿ ತಿಳಿಸಿದರು. ನಟ ಶಶಿಕುಮಾರ್ ಅವರು ಪ್ರತಿ ಹಂತದಲ್ಲೂ ಬೆಂಬಲ, ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡಿದ್ದಾರೆ. ಶೈಲಜಾ ನಾಗ್ ಅವರ ಸಲಹೆಗಳೂ ಸಹಕಾರಿಯಾಗಿವೆ ಎಂದು ಕೃತಜ್ಞತೆ ಸಲ್ಲಿಸಿದರು.
ನಿರ್ದೇಶಕ ವಿಜಯ್ ಪಾಳೇಗಾರ್, ಕಾಲೇಜು ದಿನಗಳಿಂದಲೂ ನಿರ್ದೇಶನದ ಕನಸು ಹೊಂದಿದ್ದು, ತಾಯಿ–ಮಗನ ಭಾವನಾತ್ಮಕ ಸಂಬಂಧವನ್ನು ಆಧರಿಸಿ ಕಥೆ ರೂಪಿಸಿರುವುದಾಗಿ ಹೇಳಿದರು. ನಾಯಕ ಆದಿತ್ಯ ಶಶಿಕುಮಾರ್, ತಂದೆ ಶಶಿಕುಮಾರ್ ಅವರ ಸಾಧನೆ ತನಗೆ ಪ್ರೇರಣೆಯಾಗಿದ್ದು, ಚಿತ್ರರಂಗದಲ್ಲಿ ತನ್ನದೇ ಗುರುತು ಮೂಡಿಸಿಕೊಳ್ಳುವ ಆಸೆಯಿದೆ ಎಂದರು. ತಾಯಿಯ ಮೇಲಿನ ಪ್ರೀತಿ ಮತ್ತು ನಾಯಕಿಯ ಮೇಲಿನ ಪ್ರೀತಿಯ ನಡುವಿನ ಸಂಘರ್ಷವೇ ಚಿತ್ರದ ಪ್ರಮುಖ ಅಂಶ ಎಂದು ತಿಳಿಸಿದರು.
ಕಿರುತೆರೆಯಿಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿರುವ ಸಮೀಕ್ಷಾ, ಹದಿಹರೆಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಬದುಕಿನ ಮೇಲೆ ಬೀರುವ ಪರಿಣಾಮಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದರು. ಹಿರಿಯ ನಟ ಶಶಿಕುಮಾರ್ ಟ್ರೇಲರ್ನಲ್ಲಿನ ಗ್ರಾಮೀಣ ಸೊಗಡು, ಹಾಸ್ಯ ಹಾಗೂ ಕೌಟುಂಬಿಕ ಸನ್ನಿವೇಶಗಳನ್ನು ಮೆಚ್ಚಿ, ದ್ವಿತೀಯಾರ್ಧದ ಭಾವನಾತ್ಮಕ ಸನ್ನಿವೇಶಗಳು ಮತ್ತು ಕ್ಲೈಮ್ಯಾಕ್ಸ್ ಪ್ರೇಕ್ಷಕರ ಮನಮುಟ್ಟುವ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಟಿ ವೀಣಾ ಸುಂದರ್, ತಬಲಾ ನಾಣಿ, ಮಂಜು ಪಾವಗಡ, ಹುಲಿ ಕಾರ್ತಿಕ್, ವಿನೋದ್ ಗೊಬ್ಬರಗಾಲ, ಉಗ್ರಂ ರವಿ, ಭಜರಂಗಿ ಪ್ರಸನ್ನ ಸೇರಿದಂತೆ ಚಿತ್ರತಂಡದ ಕಲಾವಿದರು ಹಾಗೂ ತಂತ್ರಜ್ಞರು ಉಪಸ್ಥಿತರಿದ್ದರು.





















