Home Lead News ಗೀತಾ ನಿವಾಸದ ಮೇಲೆ ಎಸ್‌ಐಟಿ ದಾಳಿ

ಗೀತಾ ನಿವಾಸದ ಮೇಲೆ ಎಸ್‌ಐಟಿ ದಾಳಿ

ಕೆಪಿಎಸ್‌ಸಿ ನೇಮಕಾತಿ ಹಗರಣ-

ಬೆಂಗಳೂರು, ನ.೧೯: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ನೇಮಕಾತಿ ಹಗರಣದ ತನಿಖೆಯನ್ನು ತೀವ್ರಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಅಧಿಕಾರಿಗಳು ಪ್ರಕರಣದ ಪ್ರಮುಖ ಆರೋಪಿ ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ಅವರ ನಿವಾಸದ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲಿಸಿದ್ದಾರೆ.


ಗೀತಾ ಅವರನ್ನು ಮರುಬಂಧಿಸಿದ ಬೆನ್ನಲ್ಲೇ ಈ ಶೋಧ ಕಾರ್ಯಾಚರಣೆ ನಡೆದಿದೆ. ನಿವಾಸದಲ್ಲಿ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳು, ಬ್ಯಾಂಕ್ ವಹಿವಾಟಿನ ವಿವರಗಳು ಹಾಗೂ ಇತರ ಸಾಕ್ಷ್ಯಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ ಎಂದು ತಿಳಿದುಬಂದಿದೆ.


ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಮತ್ತು ಉತ್ತರ ಕೀ ಸೋರಿಕೆ ಮಾಡಿ ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಲಂಚ ಪಡೆದಿರುವ ಆರೋಪ ಈ ಹಗರಣದ ಪ್ರಮುಖ ಅಂಶವಾಗಿದೆ. ಅಭ್ಯರ್ಥಿ ನಂದೀಶ್ ಎಂಬುವವರಿಂದ ಬಿ.ವಿ. ಗೀತಾ ೨೦ ಲಕ್ಷ ರೂ. ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರಿನ ರಾಜಮಹಲ್ ವಿಲಾಸ್ ಕ್ಲಬ್ ಸಮೀಪ ತಮ್ಮ ಕಾರಿನಲ್ಲೇ ಹಣ ಸ್ವೀಕರಿಸಿದ್ದಾರೆ ಎಂದು ತನಿಖೆಯಲ್ಲಿ ಆರೋಪಿಸಲಾಗಿದೆ. ಈ ಹಣದ ವಹಿವಾಟು ಹಾಗೂ ಅಭ್ಯರ್ಥಿಗೆ ಉತ್ತರ ಕೀ ತಲುಪಿದ ರೀತಿಯ ಬಗ್ಗೆ ಎಸ್‌ಐಟಿ ತನಿಖೆ ಮುಂದುವರಿಸಿದೆ.


ಈ ಹಿಂದೆ ಜಾರಿ ನಿರ್ದೇಶನಾಲಯದ (ಇ.ಡಿ.) ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ಗೀತಾ ಅವರಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿತ್ತು. ಇ.ಡಿ. ಪ್ರಕರಣದಲ್ಲಿ ಬಿಡುಗಡೆಯಾದ ಐದು ದಿನಗಳ ಬಳಿಕ, ನವೆಂಬರ್ ೧೭ರಂದು ಎಸ್‌ಐಟಿ ಅವರನ್ನು ಮತ್ತೆ ಬಂಧಿಸಿತ್ತು. ವಿಚಾರಣೆಗೆ ಹಾಜರಾಗದಿರುವುದು ಸೇರಿದಂತೆ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.


೪೦೦ ಹುದ್ದೆ ನೇಮಕ ಅಕ್ರಮ:


ರಾಜ್ಯ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ೪೦೦ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಜನವರಿ ೮ ಮತ್ತು ೯ರಂದು ಪರೀಕ್ಷೆ ನಡೆದಿತ್ತು. ಸುಮಾರು ೧,೪೦೦ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ಅಂತಿಮವಾಗಿ ೩೨೯ ಅಭ್ಯರ್ಥಿಗಳು ಆಯ್ಕೆಯಾಗಿದ್ದರು.
ಆದರೆ, ಕಡಿಮೆ ಶೈಕ್ಷಣಿಕ ಸಾಧನೆ ಹೊಂದಿದ್ದ ಕೆಲ ಅಭ್ಯರ್ಥಿಗಳು ಹೆಚ್ಚಿನ ಅಂಕ ಗಳಿಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪಶುವೈದ್ಯ ಡಾ. ಎಸ್. ಮಂಜುನಾಥ್ ದೂರು ನೀಡಿದ್ದರು. ಆಯ್ಕೆಯಾದ ಅಭ್ಯರ್ಥಿಗಳ ಪೈಕಿ ಕೆಲವರು ಅಕ್ರಮವಾಗಿ ಪ್ರಶ್ನೆಪತ್ರಿಕೆ ಮತ್ತು ಉತ್ತರ ಕೀ ಪಡೆದು ಪರೀಕ್ಷೆ ಬರೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.


ತನಿಖೆಯ ವೇಳೆ ಸುಮಾರು ೧೬ ಅಭ್ಯರ್ಥಿಗಳು ಕೆಪಿಎಸ್ಸಿ ಅಧಿಕಾರಿಗಳಿಗೆ ತಲಾ ೨೦ರಿಂದ ೪೦ ಲಕ್ಷ ರೂ.ವರೆಗೆ ಲಂಚ ನೀಡಲು ಒಪ್ಪಿಕೊಂಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಈ ಅಭ್ಯರ್ಥಿಗಳಲ್ಲಿ ಹಲವರು ಮೊದಲ ೨೦ ರ?ಯಾಂಕ್‌ಗಳಲ್ಲಿದ್ದರು ಎಂದು ಸಿಐಡಿ ಮತ್ತು ಇ.ಡಿ. ತನಿಖೆಯಲ್ಲಿ ತಿಳಿದುಬಂದಿದೆ.


ಉನ್ನತ ಅಧಿಕಾರಿಗಳೇ ಆರೋಪಿಗಳು:


ಈ ಪ್ರಕರಣದಲ್ಲಿ ಕೆಪಿಎಸ್ಸಿ ಅಮಾನತುಗೊಂಡ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಬಿ.ವಿ. ಗೀತಾ, ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಮಧ್ಯವರ್ತಿ ಬಸವರಾಜ ಕನ್ನಾಳೆ ಪ್ರಮುಖ ಆರೋಪಿಗಳಾಗಿದ್ದಾರೆ.


ಪರೀಕ್ಷೆಯ ಹಿಂದಿನ ದಿನ ಬೆಂಗಳೂರಿನ ಸಮೀಪದ ರೆಸಾರ್ಟ್‌ನಲ್ಲಿ ಆಯ್ದ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಮತ್ತು ಉತ್ತರಗಳನ್ನು ಒದಗಿಸಲಾಗಿತ್ತು ಎಂಬ ಆರೋಪವಿದೆ. ಪರೀಕ್ಷಾ ನಿಯಂತ್ರಕರಾಗಿದ್ದ ಗಂಗ್ವಾರ್ ಉತ್ತರ ಕೀಗಳನ್ನು ಸಿದ್ಧಪಡಿಸಿ ಸಾಹುಕಾರ್ ಮತ್ತು ಗೀತಾ ಅವರಿಗೆ ತಲುಪಿಸಿದ್ದರು. ಬಳಿಕ ಅವುಗಳನ್ನು ಆಯ್ದ ಅಭ್ಯರ್ಥಿಗಳಿಗೆ ನೀಡಲಾಗಿತ್ತು ಎಂದು ಇ.ಡಿ. ಆರೋಪಿಸಿದೆ.


ಒಎಂಆರ್ ಉತ್ತರ ಪತ್ರಿಕೆಗಳು ಹಾಗೂ ಕೆಪಿಎಸ್ಸಿ ಪ್ರಕಟಿಸಿದ್ದ ಆರಂಭಿಕ ಮತ್ತು ಪರಿಷ್ಕೃತ ಉತ್ತರ ಕೀಗಳನ್ನು ಹೋಲಿಕೆ ಮಾಡಿದಾಗ ಅಕ್ರಮದ ಸುಳಿವು ಸಿಕ್ಕಿತ್ತು. ಆರಂಭಿಕ ಉತ್ತರ ಕೀ ಆಧರಿಸಿ ಕೆಲ ಅಭ್ಯರ್ಥಿಗಳು ಬಹುತೇಕ ಎಲ್ಲ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ದರೂ, ಪರಿಷ್ಕೃತ ಉತ್ತರ ಕೀ ಪ್ರಕಟವಾದ ಬಳಿಕ ಅವರ ಅಂಕಗಳಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಇದರಿಂದ ಉತ್ತರ ಕೀ ಸೋರಿಕೆಯಾಗಿರುವ ಅನುಮಾನ ಬಲಗೊಂಡಿತ್ತು.


೫೮೫ ಪುಟಗಳ ಆರೋಪಪಟ್ಟಿ:


ಪ್ರಕರಣದ ಹಣಕಾಸಿನ ವ್ಯವಹಾರಗಳ ಕುರಿತು ತನಿಖೆ ನಡೆಸಿರುವ ಇ.ಡಿ., ನವೆಂಬರ್ ೧೩ರಂದು ವಿಶೇಷ ನ್ಯಾಯಾಲಯಕ್ಕೆ ೫೮೫ ಪುಟಗಳ ಆರೋಪಪಟ್ಟಿ ಸಲ್ಲಿಸಿದೆ. ಇದರೊಂದಿಗೆ ೮,೦೦೦ಕ್ಕೂ ಹೆಚ್ಚು ಪುಟಗಳ ಪೂರಕ ದಾಖಲೆಗಳನ್ನೂ ಒದಗಿಸಿದೆ. ಬಿ.ವಿ. ಗೀತಾ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ಹಣ ಅಕ್ರಮ ವರ್ಗಾವಣೆ ಆರೋಪ ದಾಖಲಿಸಲಾಗಿದೆ.


ಇಡಿ ಆರೋಪದ ಪ್ರಕಾರ, ಅಮಾನತುಗೊಂಡ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸುಮಾರು ೪.೧೭ ಕೋಟಿ ರೂ., ಬಿ.ವಿ. ಗೀತಾ ೧.೪೮ ಕೋಟಿ ರೂ. ಹಾಗೂ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಮತ್ತು ಬಸವರಾಜ ಕನ್ನಾಳೆ ತಲಾ ಸುಮಾರು ೧.೫೨ ಕೋಟಿ ರೂ. ಅಕ್ರಮ ಹಣ ಸಂಗ್ರಹಿಸಿ ವರ್ಗಾವಣೆ ಮಾಡಿದ್ದಾರೆ.
ಗೀತಾ ಅವರು ತಮ್ಮ ಹೆಸರಿನಲ್ಲಿ ಹಾಗೂ ಪುತ್ರಿಯ ಹೆಸರಿನಲ್ಲಿ ಸುಮಾರು ಒಂದು ಕೋಟಿ ರೂ. ಮೊತ್ತವನ್ನು ಅಸುರಕ್ಷಿತ ಸಾಲದ ರೂಪದಲ್ಲಿ ಪಡೆದಿದ್ದು, ಬಳಿಕ ಕುಟುಂಬದ ಸದಸ್ಯರು ಹಾಗೂ ಇತರರ ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ ಎಂಬುದು ಇ.ಡಿ. ಆರೋಪವಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಸೇರಿದ ಸುಮಾರು ೧.೨೨ ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ನವೆಂಬರ್ ೧೩ರಂದು ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿದೆ ಎಂದು ಇ.ಡಿ. ಪ್ರಕಟಿಸಿದೆ.


ಗೀತಾ ಅಮಾನತಿಗೆ ಚಿಂತನೆ:


ಭ್ರಷ್ಟಾಚಾರ ಮತ್ತು ಅಧಿಕಾರ ದುರ್ಬಳಕೆ ಆರೋಪ ಎದುರಿಸುತ್ತಿರುವ ಬಿ.ವಿ. ಗೀತಾ ಅವರನ್ನು ಕೆಪಿಎಸ್ಸಿ ಸದಸ್ಯ ಸ್ಥಾನದಿಂದ ಅಮಾನತುಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ರಾಜ್ಯಪಾಲರಿಗೆ ಶಿಫಾರಸು ಮಾಡುವ ಪ್ರಕ್ರಿಯೆ ಸಿದ್ಧವಾಗುತ್ತಿದ್ದು, ನವೆಂಬರ್ ೧೯ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬರುವ ಸಾಧ್ಯತೆಯಿದೆ.


ಸಾಂವಿಧಾನಿಕ ಸಂಸ್ಥೆಯಾದ ಕೆಪಿಎಸ್ಸಿಯ ನೇಮಕಾತಿ ಪ್ರಕ್ರಿಯೆಯೇ ಅಕ್ರಮದ ಆರೋಪಕ್ಕೆ ಸಿಲುಕಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಪ್ರಕರಣದಲ್ಲಿ ಇನ್ನೂ ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಎಸ್‌ಐಟಿ ತನಿಖೆ ಮುಂದುವರಿಸಿದೆ.

ಕೆಪಿಎಸ್ಸಿ ಹಗರಣ: ಪ್ರಮುಖ ಅಂಶಗಳು

  • ಎಸ್‌ಐಟಿ ದಾಳಿ: ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ.
  • ೨೦ ಲಕ್ಷ ರೂ.: ಅಭ್ಯರ್ಥಿ ನಂದೀಶ್ ಅವರಿಂದ ಲಂಚ ಪಡೆದ ಆರೋಪ.
  • ನ.೧೭: ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಗೀತಾ ಮರುಬಂಧನ.
  • ೪೦೦ ಹುದ್ದೆಗಳು: ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮದ ಆರೋಪ.
  • ೧,೪೦೦ ಅಭ್ಯರ್ಥಿಗಳು: ನೇಮಕಾತಿ ಪರೀಕ್ಷೆ ಬರೆದಿದ್ದವರು.
  • ೧೬ ಅಭ್ಯರ್ಥಿಗಳು: ಲಂಚ ನೀಡಿ ಪ್ರಶ್ನೆಪತ್ರಿಕೆ ಮತ್ತು ಉತ್ತರ ಕೀ ಪಡೆದಿರುವ ಆರೋಪ.
  • ೧.೪೮ ಕೋಟಿ ರೂ.: ಗೀತಾ ಅಕ್ರಮವಾಗಿ ಸಂಗ್ರಹಿಸಿರುವ ಹಣ ಎಂದು ಇ.ಡಿ. ಆರೋಪ.
  • ೫೮೫ ಪುಟಗಳು: ಇ.ಡಿ. ಸಲ್ಲಿಸಿರುವ ಆರೋಪಪಟ್ಟಿಯ ಗಾತ್ರ.
  • ೧.೨೨ ಕೋಟಿ ರೂ.: ಆರೋಪಿಗಳಿಗೆ ಸೇರಿದ ಆಸ್ತಿ ತಾತ್ಕಾಲಿಕ ಜಪ್ತಿ.
  • ಅಮಾನತು: ಗೀತಾ ಅವರನ್ನು ಕೆಪಿಎಸ್ಸಿ ಸದಸ್ಯ ಸ್ಥಾನದಿಂದ ಅಮಾನತುಗೊಳಿಸಲು ಸರ್ಕಾರದ ಚಿಂತನೆ.