
ಕಲಬುರಗಿ,ನ.22-ಸಾಹಿತ್ಯದ ಸ್ಥಿರತೆಯು ಸಮಕಾಲೀನತೆ, ನೈತಿಕತೆ ಮತ್ತು ತಾತ್ವಿಕತೆಯ ನೆಲೆಗಟ್ಟಿನ ಮೇಲೆ ನಿಂತಿದೆ. ಅದು ಸಾಂದರ್ಭಿಕವಾಗಿ ಹುಟ್ಟಿ ತನ್ನ ಬಾಹುಗಳನ್ನು ಓದು, ವಿಮರ್ಶೆ, ಚರ್ಚೆ, ಸಂವಾದದ ಮೂಲಕ ವಿಸ್ತರಿಸಿಕೊಂಡು ಜೀವಂತವಾಗಿರುತ್ತದೆ ಎಂದು ಸರ್ಕಾರಿ ಸ್ವಾಯತ್ತ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಸಿದ್ಧಲಿಂಗ ದಬ್ಬಾರವರು ಹೇಳಿದರು.
ಅವರು ಬೀದರ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಸಾಹಿತಿ ಡಾ.ರಾಮಚಂದ್ರ ಗಣಾಪೂರ ರಚಿಸಿದ “ಅನುಸಂಧಾನ” ಲೇಖನಗಳ ಸಂಕಲನ ಕೃತಿ ಪರಿಚಯಿಸುತ್ತ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕೃತಿಯಲ್ಲಿನ ಲೇಖನಗಳು ವಚನ ಸಾಹಿತ್ಯ, ದಾಸ ಸಾಹಿತ್ಯ, ಬಂಡಾಯ ಮತ್ತು ವ್ಯಕ್ತಿ ಸಂಬಂಧಿತ ಲೇಖನಗಳು ಒಳಗೊಂಡಿವೆ ಎಂದರು.
ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘವು ‘ಅನುಸಂಧಾನ’ ಕೃತಿ ಪರಿಚಯ ಕಾರ್ಯಕ್ರಮದ ಆಯೋಜನೆ ಮಾಡಿತ್ತು. ಸಂಘದ ಅಧ್ಯಕ್ಷರಾದ ಅಪ್ಪಾರಾವ ಅಕ್ಕೋಣೆಯವರು ಅಧ್ಯಕ್ಷೀಯ ಮಾತನಾಡಿದರು. ಸಂಘದ ಉಪಾಧ್ಯಕ್ಷರಾದ ಹಿರಿಯ ಸಾಹಿತಿಗಳಾದ ಡಾ.ಸ್ವಾಮಿರಾವ ಕುಲಕರ್ಣಿಯವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಾಹಿತಿ ಡಾ.ರಾಮಚಂದ್ರ ಗಣಾಪೂರ ಅವರು ತಮ್ಮ ಸಾಹಿತ್ಯದ ಅನುಭವ ಹಂಚಿಕೊಂಡರು.
ಡಾ.ಲಕ್ಷ್ಮೀಕಾಂತ ಪಂಚಾಳ ಮತ್ತು ಡಾ.ಸಿದ್ದಪ್ಪ ಹೊಸಮನಿಯವರು ಕೃತಿಯ ಕುರಿತು ಪ್ರತಿಕ್ರಿಯೆ ವ್ಯಕ್ತ ಪಡಿಸಿದರು. ಡಾ.ವಿಜಯಕುಮಾರ ಪರುತೆಯವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಸಾಹಿತಿಗಳಾದ ವಿಶ್ವನಾಥಭಕರೆ, ಡಾ.ಜಿ.ಎಸ್ ಕುಲಕರ್ಣಿ, ಡಾ.ಬಸವರಾಜ ಭಾಗಾ, ಸಿದ್ಧರಾಮ ಸರಸಂಬಿ, ಶಿವಯ್ಯ ಮಠಪತಿ, ಡಾ.ಶ್ರೀದೇವಿ ರಾಠೋಡ ಮುಂತಾದವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.




















