Home ಜಿಲ್ಲೆ ಕಲಬುರಗಿ ಕೆಬಿಎನ್ ಗೋಲ್ಡ್ ಕಪ್: ಸೋಷಿಯಲ್ ಕ್ರಿಕೆಟರ್ಸ್ ತಂಡ ಸೆಮಿಫೈನಲ್‍ಗೆ

ಕೆಬಿಎನ್ ಗೋಲ್ಡ್ ಕಪ್: ಸೋಷಿಯಲ್ ಕ್ರಿಕೆಟರ್ಸ್ ತಂಡ ಸೆಮಿಫೈನಲ್‍ಗೆ

ಕಲಬುರಗಿ,ನ 20: ನಗರದ ಸಂಗತ್ರಾಶವಾಡಿ ಮೈದಾನದಲ್ಲಿ ನಡೆಯುತ್ತಿರುವ ಕೆಬಿಎನ್ ಗೋಲ್ಡ್ ಕಪ್ 2026 ಕ್ರಿಕೆಟ್ ಪಂದ್ಯಾವಳಿಯ 5ನೇ ದಿನದ ಪಂದ್ಯದಲ್ಲಿ ಹೈದರಾಬಾದ್ ಎಲಿಗೆಂಟ್ ವಿರುದ್ಧ ಸೋಷಿಯಲ್ ಕ್ರಿಕೆಟರ್ಸ್ ತಂಡವು 7 ವಿಕೆಟ್‍ಗಳ ಸುಲಭ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತು.
ಪಂದ್ಯದ ಟಾಸ್ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕುಮಾರ್ ಬುರಡಿಕಟ್ಟಿ ಅವರ ಸಮ್ಮುಖದಲ್ಲಿ ಟಾಸ್ ಗೆದ್ದ ಹೈದರಾಬಾದ್ ಎಲಿಗೆಂಟ್ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕರಾದ ಪ್ರಸನ್ನ ಕುಮಾರ್ (47) ಹಾಗೂ ಹೋಮವೇದ್ ಪೇಟ (48) ಮೊದಲ ವಿಕೆಟ್‍ಗೆ 93 ರನ್‍ಗಳ ಉತ್ತಮ ಜೊತೆಯಾಟವಾಡಿದರು. ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕಶ್ಯಪ್ (55) ಮತ್ತು ವಿಘ್ನೇಶ್ ರೆಡ್ಡಿ (45) ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಮೊತ್ತವನ್ನು 42 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 222 ರನ್‍ಗಳಿಗೆ ಕೊಂಡೊಯ್ದರು. ಆದರೆ, ಅಂತಿಮ ಹಂತದಲ್ಲಿ ಸೋಷಿಯಲ್ ಕ್ರಿಕೆಟರ್ಸ್ ಬೌಲರ್ ಧ್ರುವ್ (44ಕ್ಕೆ 5) ಹಾಗೂ ಶ್ವೇತಾಂಶ್ ಆರ್.ಕೆ (33ಕ್ಕೆ 3) ಮಾರಕ ದಾಳಿಗೆ ತತ್ತರಿಸಿದ ಹೈದರಾಬಾದ್, ಕೇವಲ 31 ರನ್‍ಗಳ ಅಂತರದಲ್ಲಿ ಕೊನೆಯ 7 ವಿಕೆಟ್ ಕಳೆದುಕೊಂಡು 48.4 ಓವರ್‍ಗಳಲ್ಲಿ 253 ರನ್‍ಗಳಿಗೆ ಆಲೌಟ್ ಆಯಿತು.
254 ರನ್‍ಗಳ ಸವಾಲಿನ ಗುರಿ ಬೆನ್ನತ್ತಿದ ಸೋಷಿಯಲ್ ಕ್ರಿಕೆಟರ್ಸ್‍ಗೆ ಆರಂಭಿಕ ಆಟಗಾರ ಪ್ರಭವ್ ಪೈದಾ ಹಾಗೂ ನಾಯಕ ರಯಾನ್ ತೋಮರ್ (37) ಭದ್ರ ಬುನಾದಿ ಹಾಕಿಕೊಟ್ಟರು. ನಂತರ ಜೊತೆಯಾದ ಪ್ರಭವ್ ಮತ್ತು ಹೃದಾನ್ ಸಾಯಿ ಶಿಂಧೆ (56) ಎರಡನೇ ವಿಕೆಟ್‍ಗೆ 133 ರನ್‍ಗಳ ಭರ್ಜರಿ ಜೊತೆಯಾಟವಾಡಿ ಗೆಲುವನ್ನು ಸುಲಭಗೊಳಿಸಿದರು. 96 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್‍ಗಳೊಂದಿಗೆ ಆಕರ್ಷಕ ಶತಕ ಬಾರಿಸಿದ ಪ್ರಭವ್, ಸಹ ಆಟಗಾರರಿಗೆ ಅವಕಾಶ ನೀಡುವ ಸಲುವಾಗಿ ‘ರಿಟೈರ್ಡ್ ಔಟ್’ ಆದರು. ಅಂತಿಮವಾಗಿ ಹೃತಿಕ್ ಪೆÇೀಲಿನ್ (ಅಜೇಯ 31) ಮತ್ತು ವಾಸ್ತವಿಕ್ (ಅಜೇಯ 15) ತಂಡವನ್ನು 39.5 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 257 ರನ್‍ಗಳ ಗಡಿ ದಾಟಿಸಿ ಗೆಲುವಿನ ನಗೆ ಬೀರಿದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮುಖ್ಯ ಅತಿಥಿ ಕುಮಾರ್ ಬುರಡಿಕಟ್ಟಿ,ಮೈದಾನವು ಅತ್ಯುತ್ತಮ ಕ್ರೀಡಾ ಮೂಲಸೌಕರ್ಯ ಮತ್ತು ಗುಣಮಟ್ಟದ ಟರ್ಫ್ ಪಿಚ್ ಹೊಂದಿದ್ದು, ಸ್ಪರ್ಧಾತ್ಮಕ ಕ್ರಿಕೆಟ್‍ಗೆ ಪೂರಕವಾಗಿದೆ ಎಂದು ಶ್ಲಾಘಿಸಿದರು. ಮತ್ತೋರ್ವ ಅತಿಥಿ ಜಹಗೀರ್‍ದಾರ್ ಹಾಗೂ ಗಣ್ಯರು ಉಪಸ್ಥಿತರಿದ್ದರು. 5 ವಿಕೆಟ್ ಕಬಳಿಸಿ ಪಂದ್ಯಕ್ಕೆ ತಿರುವು ನೀಡಿದ ಸೋಷಿಯಲ್ ಕ್ರಿಕೆಟರ್ಸ್‍ನ ಧ್ರುವ್ ಅವರಿಗೆ ರೂ 2,500 ನಗದು ಹಾಗೂ ಕೆಬಿಎನ್ ಗೋಲ್ಡ್ ಕಪ್ ಸ್ಮರಣಿಕೆಯೊಂದಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.