
ಶ್ರೀನಿವಾಸ್ ಜಯರಾಮ್ ನಿರ್ದೇಶನದ ಕ್ರೈಂ ಥ್ರಿಲ್ಲರ್ಗೆ ಮುಹೂರ್ತ
ಅಪರಾಧದ ಜಗತ್ತಿನ ನಿಗೂಢತೆ, ತನಿಖೆಯ ಹಾದಿ ಹಾಗೂ ಅನಿರೀಕ್ಷಿತ ತಿರುವುಗಳನ್ನು ಒಳಗೊಂಡ ‘ಪತ್ತೇದಾರಿ’ ಸಿನಿಮಾ ಸೆಟ್ಟೇರಿದೆ. ವಿಭಿನ್ನ ನಿರೂಪಣೆಯ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುವ ಉದ್ದೇಶದೊಂದಿಗೆ ರೂಪುಗೊಳ್ಳುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ನಟ ನವೀನ್ ಶಂಕರ್ ಪ್ರಥಮ ಸನ್ನಿವೇಶಕ್ಕೆ ಆರಂಭ ಫಲಕ ತೋರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.
ಶ್ರೀನಿವಾಸ್ ಜಯರಾಮ್ ನಿರ್ದೇಶನದ ಈ ಚಿತ್ರದಲ್ಲಿ ಮೊಹಮ್ಮದ್ ಕಿಜಾರ್ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಈಗಾಗಲೇ ಹಲವು ಕ್ರೈಂ ಥ್ರಿಲ್ಲರ್ಗಳು ತೆರೆಕಂಡಿರುವ ಹಿನ್ನೆಲೆಯಲ್ಲಿ, ಹೊಸತನದ ಕಥನಕ್ಕಾಗಿ ಸುಮಾರು ಆರು ವರ್ಷಗಳ ಸಂಶೋಧನೆ ನಡೆಸಿ ಕಥೆ ಮತ್ತು ಚಿತ್ರಕಥೆ ಸಿದ್ಧಪಡಿಸಿರುವುದಾಗಿ ನಿರ್ದೇಶಕರು ತಿಳಿಸಿದರು. ಅನುಭವಿ ತಂತ್ರಜ್ಞರು ಹಾಗೂ ಕಲಾವಿದರ ಸಹಕಾರದೊಂದಿಗೆ ಗುಣಮಟ್ಟದ ಚಿತ್ರ ನೀಡುವ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
ನಾಯಕ ಮೊಹಮ್ಮದ್ ಕಿಜಾರ್, ನಿರ್ದೇಶಕರು ಹೇಳಿದ ಕಥೆ ಮತ್ತು ತಮ್ಮ ಪಾತ್ರ ವಿಭಿನ್ನವಾಗಿದ್ದು, ಉತ್ತಮ ಸಿನಿಮಾ ಮೂಡಿಬರುವ ನಿರೀಕ್ಷೆಯಿದೆ ಎಂದರು. ನಟ ತುಕಾಲಿ ಸಂತೋಷ್ ಚಿತ್ರದಲ್ಲಿ ಸಸ್ಪೆನ್ಸ್ ಹಾಗೂ ಹಾಸ್ಯ ಮಿಶ್ರಿತ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಥೆ ಮತ್ತು ಚಿತ್ರಕಥೆ ಮೆಚ್ಚುಗೆಗೆ ಪಾತ್ರವಾಗಿದ್ದು, ಒಂದರ ಹಿಂದೆ ಮತ್ತೊಂದು ತಿರುವುಗಳು ಎದುರಾಗಲಿವೆ ಎಂದು ಅವರು ಹೇಳಿದರು. ಸಹ ನಿರ್ಮಾಪಕರಾದ ಟಿ. ಕೃಷ್ಣಪ್ಪ (ಕೆ.ಕೆ.), ಮಧುಸೂದನ್ ಹಾಗೂ ನಟರಾದ ಸಿದ್ದೇಶ್ ಮತ್ತು ಸೂರಜ್ ಕೂಡ ಚಿತ್ರದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು.
ಮೊಹಮ್ಮದ್ ಅತೀಕ್ ನಿರ್ಮಾಪಕರಾಗಿದ್ದು, ಮಧುಸೂದನ್ ಟಿ.ವಿ. ಮತ್ತು ಟಿ. ಕೃಷ್ಣಪ್ಪ (ಕೆ.ಕೆ.) ಸಹ ನಿರ್ಮಾಪಕರಾಗಿದ್ದಾರೆ. ಹಾಲೇಶ್ ಛಾಯಾಗ್ರಹಣ, ರಾಘವೇಂದ್ರ ಸಂಗೀತ, ಕೆ. ರವಿವರ್ಮ ಮತ್ತು ನರಸಿಂಹ ಸಾಹಸ ನಿರ್ದೇಶನ, ರಘು ನಿಡವಳ್ಳಿ ಸಂಭಾಷಣೆ ಹಾಗೂ ಕೆ.ಎಂ. ಪ್ರಕಾಶ್ ಸಂಕಲನದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಪ್ರಶಾಂತ್ ಕಲಾ ನಿರ್ದೇಶನ ಮತ್ತು ದಯಾನಂದ್ ವಸ್ತ್ರಾಲಂಕಾರ ಮಾಡುತ್ತಿದ್ದಾರೆ.
ಮೊಹಮ್ಮದ್ ಕಿಜಾರ್, ರೂಪಾ, ಸಿದ್ದೇಶ್, ಕಾಕರೋಜ್ ಸುಧಿ, ತುಕಾಲಿ ಸಂತೋಷ್, ವರ್ಧನ್, ಸೂರಜ್, ಗಿರೀಶ್ ಜಟ್ಟಿ, ನಿರಂಜನ್ ಅಶ್ವತ್, ವಂದನಾ, ಶಿವಮೊಗ್ಗ ರಾಮಣ್ಣ, ಉಗ್ರಂ ವಿಜಿ, ಉಗ್ರಂ ರೆಡ್ಡಿ, ಪ್ರೇಮ ಹಾಗೂ ಮಂಡ್ಯ ಸಿದ್ದು ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.





















