
ಕಲಬುರಗಿ, ಕೆಸಿಎನ್ ಗೋಲ್ಡ್ ಕಪ್ ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೋಶಿಯಲ್ಸ್ ಕ್ರಿಕೆಟರ್ಸ್ (ಸೋಸಿಯಲ್ ಕ್ರಿಕೆಟರ್ಸ್) ತಂಡವು ಬಿಪಿಸಿಎ ತಂಡದ ವಿರುದ್ಧ ಅದ್ಭುತ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ನೀಡಿ ಬೃಹತ್ ಅಂತರದ ಗೆಲುವು ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ಸೋಶಿಯಲ್ಸ್ ಕ್ರಿಕೆಟರ್ಸ್ ತಂಡವು ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 395 ರನ್ಗಳ ಕಲೆಹಾಕಿತು.
ತಂಡದ ಪರ ಆರಂಭಿಕ ಆಟಗಾರರಾದ ಪ್ರಭಾವ್ ಪೈದಾ (152 ರನ್, 131 ಎಸೆತ, 22 ಬೌಂಡರಿ, 2 ಸಿಕ್ಸರ್) ಹಾಗೂ ನಾಯಕ ಕೀಪರ್ ರಾಯನ್ ತೋಮರ್ (132 ರನ್, 117 ಎಸೆತ, 15 ಬೌಂಡರಿ, 1 ಸಿಕ್ಸರ್) ರನ್ ಮಳೆ ಹರಿಸಿದರು. ಇವರಿಬ್ಬರ ಅಬ್ಬರದ ಬ್ಯಾಟಿಂಗ್ ಬಲದಿಂದ ತಂಡವು ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಯಿತು. ಬಿಪಿಸಿಎ ಪರ ಅಕ್ಷಿತ್ ಸಿಂಗ್ 3 ವಿಕೆಟ್ ಪಡೆದರು.
ಬಳಿಕ ಕಠಿಣ ಗುರಿ ಬೆನ್ನತ್ತಿದ ಬಿಪಿಸಿಎ ತಂಡವು ಸೋಶಿಯಲ್ಸ್ ಕ್ರಿಕೆಟರ್ಸ್ ಬೌಲಿಂಗ್ ದಾಳಿಯನ್ನು ಎದುರಿಸಲಾಗದೆ 47.1 ಓವರ್ಗಳಲ್ಲಿ 189 ರನ್ಗಳಿಗೆ ಸರ್ವಪತನ ಕಂಡಿತು. ತಂಡದ ಪರ ನಾಯಕ ಶಾಮಂತ್ ಕೆ.ಸಿ. ರಾಜು (78 ರನ್) ಏಕಾಂಗಿ ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಉಳಿದ ಬ್ಯಾಟ್ಸ್ಮನ್ಗಳು ಬೇಗನೆ ಪೆವಿಲಿಯನ್ ಸೇರಿದರು.
ಸೋಶಿಯಲ್ಸ್ ಕ್ರಿಕೆಟರ್ಸ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಆರ್ಯ ಅಯ್ಯಪ್ಪನ್ 4 ವಿಕೆಟ್ ಪಡೆದು ಎದುರಾಳಿ ತಂಡದ ಕುಸಿತಕ್ಕೆ ಪ್ರಮುಖ ಕಾರಣರಾದರು. ವಾಸ್ತವಿಕ 2 ವಿಕೆಟ್ ಪಡೆದು ಸಾಥ್ ನೀಡಿದರು.
ಪಂದ್ಯದಾದ್ಯಂತ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಭರ್ಜರಿ ಶತಕ ಸಿಡಿಸಿದ ಪ್ರಭಾವ್ ಪೈದಾ ಅವರಿಗೆ ‘ಪಂದ್ಯಶ್ರೇಷ್ಠ’ (ಒಔಒ) ಪ್ರಶಸ್ತಿ ಒಲಿಯಿತು. ಸೋಶಿಯಲ್ಸ್ ಕ್ರಿಕೆಟರ್ಸ್ ತಂಡದ ಈ ಸರ್ವಾಂಗೀಣ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಪ್ರಾಯೋಜಕ ಸಮಿತಿಯ ಸದಸ್ಯರಾದ ಅಮರ್ & ಸನ್ಸ್ ಬಟ್ಟೆ ವ್ಯಾಪಾರಿ ಶ್ರೀ ವಾಹಿದ್ ಅಲಿ ಮತ್ತು ಮುಹಮ್ಮದ್ ಅಬುಜರ್ ಖಾನ್ ಅವರು ಮುಖ್ಯ ಅತಿಥಿಗಳಾಗಿದ್ದರು





















