
ಕಲಬುರಗಿ,ನ22: ನಗರದ ಸಂಗತ್ರಾಶವಾಡಿಯ ಕೆಬಿಎನ್ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕೆಬಿಎನ್ ಗೋಲ್ಡ್ ಕಪ್ 2026 ಕ್ರಿಕೆಟ್ ಪಂದ್ಯಾವಳಿಯ 50 ಓವರ್ಗಳ ರೋಚಕ ಪಂದ್ಯದಲ್ಲಿ, ಕ್ರಿಕೆಟ್ ಅನಂತಪುರ ತಂಡದ ಆರಂಭಿಕ ಆಟಗಾರ ಸಿ. ಮೊಹಮ್ಮದ್ ಫೈಜಾನ್ ಅವರ ಅಜೇಯ ಶತಕದ ಹೊರತಾಗಿಯೂ ಪ್ರೆಸಿಡೆಂಟ್ 11 ತಂಡವು 22 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಶನಿವಾರ ನಡೆದ ಪಂದ್ಯದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆಯ ಸಹಾಯಕ ಸಂಪಾದಕ ರಾಮಕೃಷ್ಣ ಬಡಶೇಷಿ ಅವರು ನಾಣ್ಯ ಚಿಮ್ಮುವ ಮೂಲಕ ಪಂದ್ಯಕ್ಕೆ ಚಾಲನೆ ನೀಡಿದರು. ಟಾಸ್ ಗೆದ್ದ ಪ್ರೆಸಿಡೆಂಟ್ 11 ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕರಾದ ಸೈಯದ್ ಮುಹಮ್ಮದ್ ಸೈಯದ್ ಹುಸೇನಿ (27) ಮತ್ತು ಉಸ್ಮಾನ್ ಗನಿ ಮೊದಲ 10 ಓವರ್ಗಳಲ್ಲಿ 71 ರನ್ಗಳ ಬಿರುಸಿನ ಜೊತೆಯಾಟವಾಡಿ ಉತ್ತಮ ಅಡಿಪಾಯ ಹಾಕಿದರು. ಗನಿ ಕೇವಲ 41 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ 49 ರನ್ ಸಿಡಿಸಿದರು. ನಂತರ ಮಧ್ಯಮ ಕ್ರಮಾಂಕದಲ್ಲಿ ವರ್ಷಿತ್ ಕುಮಾರ್ (2/28) ಅವರ ದಾಳಿಗೆ ಪ್ರೆಸಿಡೆಂಟ್ ತಂಡ 160 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ವಾಲಿ ಹುಸೇನಿ (35), ಹಶ್ಮತ್ (21) ಮತ್ತು ವಿಶಾಲ್ ರೆಡ್ಡಿ (18) ಅವರ ಉಪಯುಕ್ತ ಆಟದಿಂದ ತಂಡವು 39.2 ಓವರ್ಗಳಲ್ಲಿ 216 ರನ್ಗಳಿಗೆ ಆಲೌಟ್ ಆಯಿತು. ಅನಂತಪುರ ಪರ ಜೈವಂಶ್ (2/35), ವೈ. ಲಿಖಿತ್ (2/53) ಮತ್ತು ಪಿ. ರಾಹುಲ್ ರೆಡ್ಡಿ (2/29) ತಲಾ ಎರಡು ವಿಕೆಟ್ ಪಡೆದರು.
217 ರನ್ಗಳ ಸವಾಲಿನ ಗುರಿ ಬೆನ್ನಟ್ಟಿದ ಕ್ರಿಕೆಟ್ ಅನಂತಪುರ ತಂಡಕ್ಕೆ ಪವನ್ದೀಪ್ ಆರ್. ಭರಡಕಣೆ (3/29) ಮತ್ತು ಸೈಯದ್ ಅಯಾನ್ ಫರೀಸ್ (2/30) ಆರಂಭಿಕ ಆಘಾತ ನೀಡಿದರು. ಕೇವಲ 15 ರನ್ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್ಗಳನ್ನು ಕಳೆದುಕೊಂಡು ತಂಡ ತತ್ತರಿಸಿತು. ಆದರೆ, ಏಕಾಂಗಿ ಹೋರಾಟ ನಡೆಸಿದ ಆರಂಭಿಕ ಆಟಗಾರ ಸಿ. ಮೊಹಮ್ಮದ್ ಫೈಜಾನ್ 140 ಎಸೆತಗಳಲ್ಲಿ 12 ಬೌಂಡರಿಗಳೊಂದಿಗೆ ಅಜೇಯ 113 ರನ್ ಬಾರಿಸಿ ಕೊನೆಯವರೆಗೂ ಕ್ರೀಸ್ನಲ್ಲಿ ಉಳಿದರು.
83 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದಾಗ ಫೈಜಾನ್ ಮತ್ತು ಜೈವಂಶ್ (19) 7ನೇ ವಿಕೆಟ್ಗೆ 51 ರನ್ ಸೇರಿಸಿ ಗೆಲುವಿನ ಆಸೆ ಚಿಗುರಿಸಿದರು. ಆದರೆ, ಹಶ್ಮತ್ ಅವರ ಚುರುಕಿನ ಕ್ಷೇತ್ರರಕ್ಷಣೆಯಿಂದ ಜೈವಂಶ್ ರನೌಟ್ ಆದದ್ದು ಪಂದ್ಯಕ್ಕೆ ತಿರುವು ನೀಡಿತು. ಕೊನೆಯಲ್ಲಿ ವೈ. ಲಿಖಿತ್ (11) ಜೊತೆಗೂಡಿ 9ನೇ ವಿಕೆಟ್ಗೆ 42 ರನ್ ಸೇರಿಸಿದರೂ, ಸುಲೇಮಾನ್ ಸಫಿ (2/50) ಮತ್ತು ವಿಶಾಲ್ ರೆಡ್ಡಿ (2/40) 47.5 ಓವರ್ಗಳಲ್ಲಿ ಅನಂತಪುರ ತಂಡವನ್ನು 194 ರನ್ಗಳಿಗೆ ಕಟ್ಟಿಹಾಕುವ ಮೂಲಕ ಪ್ರೆಸಿಡೆಂಟ್11 ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು. ಪ್ರೆಸಿಡೆಂಟ್ ತಂಡದ ಪವನದೀಪ ಅವರಿಗೆ ಪಂದ್ಯ ಪುರುಷ ಪ್ರಶಸ್ತಿ ದೊರೆಯಿತು.




















