
ಬೆಂಗಳೂರು, ನ. ೨೨- ಜಯನಗರ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ನಾಗರಿಕರ ಸಹಭಾಗಿತ್ವದೊಂದಿಗೆ ನಗರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ತಿಳಿಸಿದರು.
ಜಯನಗರ ಕ್ಷೇತ್ರದ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಶಾಸಕ ಸಿ.ಕೆ. ರಾಮಮೂರ್ತಿ ಹಾಗೂ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ನೇತೃತ್ವದಲ್ಲಿ ವಿವಿಧ ಬಡಾವಣೆಗಳ ನಿವಾಸಿಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (ಖWಂ), ಅಸೋಸಿಯೇಷನ್ಗಳು ಮತ್ತು ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಸಭೆ ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ಆಯುಕ್ತರು, ಪಾಲಿಕೆಯಿಂದ ಮಾತ್ರ ನಗರದ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ನಾಗರಿಕರು ಹಾಗೂ ನಿವಾಸಿಗಳ ಸಂಘಗಳು ಪಾಲಿಕೆಯೊಂದಿಗೆ ಕೈಜೋಡಿಸಿದಾಗ ಮಾತ್ರ ಸ್ವಚ್ಛ ಹಾಗೂ ಸುಂದರ ನಗರ ನಿರ್ಮಾಣ ಸಾಧ್ಯ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಸಾರ್ವಜನಿಕರ ಸಹಭಾಗಿತ್ವಕ್ಕೆ ಒತ್ತು ನೀಡಲಾಗಿದೆ ಎಂದರು.
ನಿವಾಸಿಗಳು ತಮ್ಮ ಬಡಾವಣೆಗಳ ಸಮಸ್ಯೆಗಳನ್ನು ಪಟ್ಟಿ ಮಾಡಿ ಪಾಲಿಕೆ ಕಚೇರಿಗೆ ನೀಡಿದರೆ, ಅಧಿಕಾರಿಗಳು ಹಾಗೂ ಶಾಸಕರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಅನ್ನು ದಕ್ಷಿಣ ನಗರ ಪಾಲಿಕೆಯಿಂದಲೇ ಅಭಿವೃದ್ಧಿಪಡಿಸಲು ಬಿಡಿಎ ಒಪ್ಪಿಗೆ ಸೂಚಿಸಿದೆ. ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಿಸಿದ ಅಂತಿಮ ಆದೇಶದ ಪತ್ರ ಮುಂದಿನ ಒಂದು ತಿಂಗಳೊಳಗೆ ದೊರೆತ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
ಶಾಸಕ ಸಿ.ಕೆ. ರಾಮಮೂರ್ತಿ ಮಾತನಾಡಿ, ಜೆ.ಪಿ. ನಗರ ಸಿಂಧೂರ ಛತ್ರದ ರಸ್ತೆಯಲ್ಲಿ ಮಳೆನೀರು ನಿಲ್ಲುವುದನ್ನು ತಡೆಯಲು ಪರ್ಯಾಯ ಚರಂಡಿ ಕಾಮಗಾರಿಯನ್ನು ತಕ್ಷಣ ಕೈಗೆತ್ತಿಕೊಳ್ಳಲಾಗುವುದು ಎಂದರು.
ಪ್ರಮುಖ ಜಂಕ್ಷನ್ಗಳ ಅಭಿವೃದ್ಧಿಗೆ ೭.೫ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ರಾಘವೇಂದ್ರ ಸ್ವಾಮಿ ಮಠದ ಬಳಿ ೨೩ ಕೋಟಿ ರೂ. ವೆಚ್ಚದಲ್ಲಿ ಅಂಡರ್ಪಾಸ್ ನಿರ್ಮಾಣದ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ನೈಸ್ ರಸ್ತೆಯವರೆಗೆ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೂ ಅನುಮೋದನೆ ದೊರೆತಿದೆ ಎಂದು ಮಾಹಿತಿ ನೀಡಿದರು.
ಕನಕಪುರ ಮುಖ್ಯರಸ್ತೆಯಿಂದ ಬನ್ನೇರುಘಟ್ಟ ರಸ್ತೆಯವರೆಗೆ ಸುಮಾರು ೩೦ ಪಬ್ಗಳು ತಡರಾತ್ರಿವರೆಗೂ ಕಾರ್ಯನಿರ್ವಹಿಸುತ್ತಿರುವುದು ಹಾಗೂ ಮಾದಕವಸ್ತುಗಳ ಹಾವಳಿ ಕುರಿತು ಪ್ರಸ್ತಾಪಿಸಿದ ಅವರು, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು.
ಕ್ಷೇತ್ರದ ೪೫ ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್ ನೀತಿ ಜಾರಿಗೊಳಿಸಲು ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಶಾಕಾಂಬರಿ ನಗರದ ಸ್ಯಾನಿಟರಿ ಲೈನ್ ಕಾಮಗಾರಿಯನ್ನು ಮುಂದಿನ ೧೫ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು. ಜಯನಗರ ಪೂರ್ವ ವಾರ್ಡ್ನ ಕಂದಾಯ ಕಚೇರಿ ಸ್ಥಳಾಂತರ ಹಾಗೂ ನಾಲ್ಕನೇ ’ಟಿ’ ಬ್ಲಾಕ್ನಲ್ಲಿ ಅತ್ಯಾಧುನಿಕ ಬೆಂಗಳೂರು ಒನ್ ಕೇಂದ್ರವನ್ನು ಇದೇ ಅವಧಿಯಲ್ಲಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಶಾಸಕ ರಾಮಮೂರ್ತಿ ತಿಳಿಸಿದರು.
ಸಭೆಯಲ್ಲಿ ನಿವಾಸಿಗಳು ರಸ್ತೆ ಗುಂಡಿ ಮುಚ್ಚುವುದು, ರಸ್ತೆ ಹಂಪ್ಗಳ ಅಳವಡಿಕೆ, ಒಣಗಿದ ಮರದ ಕೊಂಬೆಗಳ ತೆರವು ಹಾಗೂ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಜಯನಗರ ಐದನೇ ಬ್ಲಾಕ್ನಲ್ಲಿ ರಸ್ತೆ ಹಂಪ್ ಅಳವಡಿಕೆ ಹಾಗೂ ದಕ್ಷಿಣ್ ತಿಂಡಿ ಹೋಟೆಲ್ ಸುತ್ತಮುತ್ತ ಪಾರ್ಕಿಂಗ್ ಸಮಸ್ಯೆ ಪರಿಹರಿಸುವಂತೆ ಕೋರಿದರು.
ನಾಲ್ಕನೇ ಬ್ಲಾಕ್ನ ಶಾಪಿಂಗ್ ಕಾಂಪ್ಲೆಕ್ಸ್ ಸುತ್ತಮುತ್ತಲಿನ ಫುಟ್ಪಾತ್ ಒತ್ತುವರಿ ತೆರವುಗೊಳಿಸುವುದು, ಜೈನ ದೇವಸ್ಥಾನದ ಎದುರಿನ ಬಲೂನ್ ಮಾರಾಟಗಾರರನ್ನು ತೆರವುಗೊಳಿಸಿ ನೋ ಪಾರ್ಕಿಂಗ್ ಫಲಕ ಅಳವಡಿಸುವುದು ಹಾಗೂ ಉದ್ಯಾನವನಗಳಲ್ಲಿನ ಜಿಮ್ ಪರಿಕರಗಳ ಕಳವು ತಡೆಯಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಜಲಭವನ ರಸ್ತೆ ಮತ್ತು ಈಸ್ಟ್ ಎಂಡ್ ಮುಖ್ಯರಸ್ತೆಯ ಫುಟ್ಪಾತ್ಗಳನ್ನು ಹಳೆಯ ಕಾರು ಮಾರಾಟಗಾರರು, ಫ್ಯಾಬ್ರಿಕೇಶನ್ ಅಂಗಡಿಗಳು ಹಾಗೂ ಹೋಟೆಲ್ಗಳವರು ಒತ್ತುವರಿ ಮಾಡಿಕೊಂಡಿರುವುದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ೩೮ನೇ ಕ್ರಾಸ್ನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ರಸ್ತೆ ದಾಟುವುದು ಅಪಾಯಕಾರಿಯಾಗಿದೆ ಎಂದು ನಿವಾಸಿಗಳು ದೂರಿದರು.
ಮಿನಿ ಫಾರೆಸ್ಟ್ನಿಂದ ಜೆ.ಪಿ. ನಗರ ನಾಲ್ಕನೇ ಹಂತದವರೆಗೆ ಫುಟ್ಪಾತ್ ನಿರ್ಮಿಸುವುದು ಹಾಗೂ ಗೇಲ್ ಮತ್ತು ಜಲಮಂಡಳಿ ಕಾಮಗಾರಿಗಳಿಗಾಗಿ ಅಗೆದ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಮನವಿ ಮಾಡಿದರು.
ಉದ್ಯಾನವನ, ಕುಡಿಯುವ ನೀರು, ಕಸ ವಿಲೇವಾರಿಗೆ ಒತ್ತಾಯ:
ಎನ್ಎಎಲ್ ಲೇಔಟ್ನಲ್ಲಿ ಹಿರಿಯ ನಾಗರಿಕರಿಗಾಗಿ ಉದ್ಯಾನವನ ನಿರ್ಮಿಸುವುದು, ಕಸ ಹಾಗೂ ಒಣಗಿದ ಮರಗಳನ್ನು ತೆರವುಗೊಳಿಸುವುದು ಮತ್ತು ಎಲ್ಐಸಿ ಕಾಲೋನಿ ಉದ್ಯಾನವನ ಅಭಿವೃದ್ಧಿಪಡಿಸಿ ಕೊಳಚೆ ನೀರು ನುಗ್ಗುವುದನ್ನು ತಡೆಯುವಂತೆ ಸ್ಥಳೀಯರು ಕೋರಿದರು.
ನಿಮ್ಹಾನ್ಸ್ ಲೇಔಟ್ ಹಾಗೂ ಅರಸು ಕಾಲೋನಿಯ ಎಬಿಸಿಡಿ ಮುಖ್ಯರಸ್ತೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವುದು, ನಿಮ್ಹಾನ್ಸ್ ಲೇಔಟ್ನಲ್ಲಿ ಗಾಂಜಾ ವ್ಯಸನಿಗಳ ಹಾವಳಿ ನಿಯಂತ್ರಿಸುವುದು ಹಾಗೂ ಬಿದ್ದ ಮರಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿದರು.
ಗುರಪ್ಪನಪಾಳ್ಯ ಲೇಔಟ್ ಮತ್ತು ಜೆ.ಪಿ. ನಗರ ಎರಡನೇ ಹಂತದ ಉದ್ಯಾನವನಗಳಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ. ಸಾರಕ್ಕಿ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಕಸ ಬಿಟ್ಟು ಹೋಗುವುದರಿಂದ ದುರ್ವಾಸನೆ ಹರಡುತ್ತಿದ್ದು, ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ದೂರಿದರು. ಶಾಕಾಂಬರಿ ನಗರ ಮತ್ತು ಸಿ.ಆರ್. ಲೇಔಟ್ನಲ್ಲಿ ರಸ್ತೆ ಹಾಗೂ ಸ್ಯಾನಿಟರಿ ವ್ಯವಸ್ಥೆ ದುರಸ್ತಿ, ನವೋದಯ ಮತ್ತು ತಾರಾಮಂಡಲ ಲೇಔಟ್ಗಳಲ್ಲಿ ಸಿಸಿಟಿವಿ ಅಳವಡಿಕೆ ಹಾಗೂ ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳುವಂತೆ ಕೋರಿದರು.
ಪ್ರತ್ಯೇಕ ಕಾಲ್ ಸೆಂಟರ್ಗೆ ಸಲಹೆ
ಜೆ.ಪಿ. ನಗರ ಮೂರನೇ ಮತ್ತು ನಾಲ್ಕನೇ ಹಂತಗಳಲ್ಲಿ ಮಳೆನೀರು ಚರಂಡಿ ಸಮಸ್ಯೆ ಪರಿಹರಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಯಂತ್ರಿಸುವುದು ಹಾಗೂ ಜಯನಗರ ಪೂರ್ವ ಭಾಗದಲ್ಲಿ ನಿಯಮಾನುಸಾರ ಮಾತ್ರ ಧ್ವನಿವರ್ಧಕ ಬಳಕೆಗೆ ಅನುಮತಿ ನೀಡುವಂತೆ ನಿವಾಸಿಗಳು ಮನವಿ ಮಾಡಿದರು.
ಎಂ.ಆರ್. ಲೇಔಟ್ನಲ್ಲಿ ವಿದ್ಯುತ್ ಮೀಟರ್ ಕಳವು ತಡೆಯಲು ಸಿಸಿಟಿವಿ ಅಳವಡಿಸುವುದು, ಡಾಲರ್ಸ್ ಕಾಲೋನಿಯಲ್ಲಿ ರಾಜಕಾಲುವೆ ಮೇಲಿನ ಅನಧಿಕೃತ ಸೇತುವೆ ಮೇಲೆ ರಸ್ತೆ ನಿರ್ಮಿಸದಿರುವುದು ಹಾಗೂ ಪುಟ್ಟೇನಹಳ್ಳಿ ಮತ್ತು ಎಸ್ಬಿಐ ಕಾಲೋನಿಯ ಸಮಸ್ಯೆಗಳನ್ನು ಪರಿಹರಿಸುವಂತೆಯೂ ಕೋರಿದರು.
ನಾಗರಿಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಲು ಪ್ರತ್ಯೇಕ ಕಾಲ್ ಸೆಂಟರ್ ಮತ್ತು ಟಿಕೆಟಿಂಗ್ ವ್ಯವಸ್ಥೆ ಆರಂಭಿಸಬೇಕು ಎಂಬ ಸಲಹೆಯೂ ಸಭೆಯಲ್ಲಿ ಕೇಳಿಬಂತು.
ಸಭೆಯಲ್ಲಿ ಜಂಟಿ ಆಯುಕ್ತ ಪಿ. ವಿವೇಕಾನಂದ, ಉಪ ಆಯುಕ್ತೆ ಗಗನ, ಮುಖ್ಯ ಅಭಿಯಂತರ ಬಸವರಾಜ ಕಬಾಡೆ ಸೇರಿದಂತೆ ಪೊಲೀಸ್, ಜಲಮಂಡಳಿ, ಅರಣ್ಯ, ನಗರ ಯೋಜನೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.























