Home ಮುಖಪುಟ ಸುದ್ದಿ ಲೇಖಕ ರವಿ ಹಂಜ್‌ಗೆ ಪೊಲೀಸ್ ಗ್ರಿಲ್

ಲೇಖಕ ರವಿ ಹಂಜ್‌ಗೆ ಪೊಲೀಸ್ ಗ್ರಿಲ್

ಬೆಂಗಳೂರು, ನ.೨೨-ಕ್ರಾಂತಿಯೋಗಿ ಬಸವಣ್ಣನವರಿಗೆ ಅಪಮಾನ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿರುವ ‘ಬಸವ ಮಂಟಪ’ ಕೃತಿಯ ಲೇಖಕ ರವಿ ಹಂಜ್ ಅವರನ್ನು ನಗರ ಪೊಲೀಸರು ವಿಚಾರಣೆ ನಡೆಸಿದ್ದಾರೆ.


ಈ ಸಂಬಂಧ ದಾಖಲಾಗಿರುವ ದೂರಿನ ಹಿನ್ನೆಲೆಯಲ್ಲಿ ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ಲೇಖಕ ರವಿ ಹಂಜ್ ಅವರನ್ನು ವಶಕ್ಕೆ ತೆಗೆದುಕೊಂಡ ಹೈಗ್ರೌಂಡ್ಸ್ ಠಾಣೆಯ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಸುಮಾರು ಒಂದು ಗಂಟೆ ಕಾಲ ವಿಚಾರಣೆ ನಡೆಸಿದ ಬಳಿಕ, ತನಿಖೆಗೆ ಸಹಕರಿಸುವಂತೆ ನೋಟಿಸ್ ಜಾರಿ ಮಾಡಿ ಮತ್ತೆ ನಾಳೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.


ಇನ್ನು ವಿಚಾರಣೆ ವೇಳೆ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿರುವ ರವಿ ಹಂಜ್, ಬಸವಣ್ಣನವರನ್ನು ನಿಂದಿಸುವ ಅಥವಾ ಅಪಮಾನಿಸುವ ಉದ್ದೇಶದಿಂದ ಕೃತಿಯಲ್ಲಿ ಯಾವುದೇ ಬರಹವನ್ನು ಬರೆದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.


‘ಬಸವ ಮಂಟಪ’ ಕೃತಿಯಲ್ಲಿನ ಬರಹಗಳ ಕುರಿತು ಈಗಾಗಲೇ ಕನ್ನಡ ಸಾಹಿತ್ಯ ಹಾಗೂ ಸಾಮಾಜಿಕ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.


ಏನಿದು ಕೃತಿ ವಿವಾದ:


ಲೇಖಕ ರವಿ ಹಂಜ್ ಅವರು ಕಳೆದ ಎರಡು ವರ್ಷಗಳಲ್ಲಿ ಕನ್ನಡ ಪತ್ರಿಕೆಯೊಂದರಲ್ಲಿ ಬರೆದಿದ್ದ ಅಂಕಣ ಬರಹಗಳನ್ನು ಒಟ್ಟುಗೂಡಿಸಿ ‘ಬಸವ ಮಂಟಪ’ ಎಂಬ ಕೃತಿಯನ್ನು ಪ್ರಕಟಿಸಿದ್ದರು. ನವೆಂಬರ್ ೧೫ರಂದು ಬೆಂಗಳೂರಿನಲ್ಲಿ ಈ ಕೃತಿ ಬಿಡುಗಡೆಯಾಗಿತ್ತು. ಆದರೆ, ಕೃತಿ ಬಿಡುಗಡೆಯಾದ ಬಳಿಕ ಬಸವಣ್ಣನವರ ಕುರಿತು ಮಾಡಲಾಗಿದೆ ಎನ್ನಲಾದ ಕೆಲವು ಉಲ್ಲೇಖಗಳು ಹಾಗೂ ಲೇಖಕರು ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದವು.


ನವೆಂಬರ್ ೧೩ರಂದು ನಡೆದ ಸಂದರ್ಶನದಲ್ಲಿ ಬಸವಣ್ಣನವರ ಪ್ರಸಿದ್ಧ ವಚನವಾದ ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಎಂಬ ಸಾಲುಗಳನ್ನು ವಿಶ್ಲೇಷಿಸುವ ಸಂದರ್ಭದಲ್ಲಿ ರವಿ ಹಂಜ್ ಅವರು ಬಸವಣ್ಣನವರನ್ನು ಕಳ್ಳ ಮತ್ತು ಕೊಲೆಗಾರನ ರೀತಿಯಲ್ಲಿ ಬಿಂಬಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಅಲ್ಲದೆ, ಲಿಂಗಾಯತ ಪದವನ್ನು ತಿರುಚಿ ‘ಲಿಂಗಾಹತ’ ಎಂದು ಉಲ್ಲೇಖಿಸಿರುವುದು ಹಾಗೂ ಲಿಂಗಾಯತ ಸಮುದಾಯದ ಪೂಜ್ಯರು ಮತ್ತು ಶರಣ ಪರಂಪರೆಯ ಕುರಿತು ಆಕ್ಷೇಪಾರ್ಹ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಸಮುದಾಯದ ಮುಖಂಡರು ಆರೋಪಿಸಿದ್ದರು. ಸಂದರ್ಶನದ ಕೆಲವು ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿತ್ತು.


ಕೃತಿ ಮುಟ್ಟುಗೋಲಿಗೆ ನಿರ್ಧಾರ:


ವಿವಾದ ತೀವ್ರಗೊಳ್ಳುತ್ತಿದ್ದಂತೆ ಬಸವ ಸಮಿತಿ ಅಧ್ಯಕ್ಷ ಅರವಿಂದ್ ಜತ್ತಿ ಅವರು ರಾಜ್ಯ ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ಬಸವಣ್ಣನವರ ಕುರಿತು ಅವಹೇಳನಕಾರಿ ಬರಹ ಹಾಗೂ ಹೇಳಿಕೆಗಳ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಲಾಗಿದೆ. ಸಮಾಜದಲ್ಲಿ ದ್ವೇಷ ಮತ್ತು ಅಶಾಂತಿ ಸೃಷ್ಟಿಸುವ ಪ್ರಯತ್ನ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಈ ಬೆಳವಣಿಗೆಯ ಬೆನ್ನಲ್ಲೇ ನವೆಂಬರ್ ೧೯ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ಲೇಖಕ ರವಿ ಹಂಜ್ ಮತ್ತು ಪ್ರಕಾಶಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿತ್ತು.