Home ಮುಖಪುಟ ಸುದ್ದಿ ಪ್ರತಿಭಟನೆ ಕೈಬಿಡಲು ಆಶೆಯರಿಗೆ ಸಿಎಂ ಮನವಿ

ಪ್ರತಿಭಟನೆ ಕೈಬಿಡಲು ಆಶೆಯರಿಗೆ ಸಿಎಂ ಮನವಿ

ಇಂದಿನಿಂದ ಸಿಎಂ ಜಪಾನ್ ಪ್ರವಾಸ

ಬೆಂಗಳೂರು, ನ. ೨೨- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದಿನಿಂದ ವಿದೇಶ ಪ್ರವಾಸ ಕೈಗೊಂಡಿದ್ದು, ಮೂರು ದಿನಗಳ ಜಪಾನ್ ಪ್ರವಾಸಕ್ಕೆ ಅವರು ಪ್ರಯಾಣ ಬೆಳೆಸಿದರು.


ನಗರಾಭಿವೃದ್ಧಿ ಮತ್ತು ಹೂಡಿಕೆ ಆಕರ್ಷಣೆಗಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ಜಪಾನ್‌ನಲ್ಲಿ ಮೂರು ದಿನಗಳ ಕಾಲ ವಿವಿಧ ಕಂಪೆನಿಗಳ ಮುಖ್ಯಸ್ಥರ ಸಭೆ ಹಾಗೂ ಜಪಾನ್ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆಗಳಲ್ಲಿ ಭಾಗಿಯಾಗುವರು.


ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ಜತೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹಾಗೂ ೮ ಜನ ಹಿರಿಯ ಅಧಿಕಾರಿಗಳು ಜಪಾನ್‌ಗೆ ತೆರಳಿದರು.
ತಮ್ಮ ಜಪಾನ್ ಪ್ರವಾಸದ ಬಗ್ಗೆ ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು, ಸಚಿವ ಎಂ.ಬಿ. ಪಾಟೀಲ್ ಹಾಗೂ ೮ ಜನ ಅಧಿಕಾರಿಗಳು ಜಪಾನ್‌ಗೆ ತೆರಳುತ್ತಿದ್ದೇವೆ. ನಗರಾಭಿವೃದ್ಧಿ ಬಗ್ಗೆ ಹೆಚ್ಚು ಅಧ್ಯಯನ ಮಾಡಬೇಕಿದೆ. ಜತೆಗೆ ರಾಜ್ಯದಲ್ಲಿ ಜಪಾನ್ ಉದ್ಯಮಿಗಳಿಂದ ಹೂಡಿಕೆ ಆಕರ್ಷಿಸಲು ಈ ವಿದೇಶ ಪ್ರವಾಸ ಮಾಡುತ್ತಿದ್ದೇವೆ ಎಂದರು.


ಜಪಾನ್‌ನಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಮೇಲ್ಸೇತುವೆಗಳ ನಿರ್ಮಾಣ ಮಾಡಿದ್ದಾರೆ. ಅದನ್ನು ನಮ್ಮಲ್ಲೂ ಅಳವಡಿಸಿಕೊಳ್ಳುವ ಬಗ್ಗೆ ಅಧ್ಯಯನ ಮಾಡುತ್ತೇವೆ ಎಂದು ಅವರು ಹೇಳಿದರು.


ಟಯೋಟಾ ಕಂಪೆನಿಯ ವಿಸ್ತರಣೆಯನ್ನು ರಾಜ್ಯದಲ್ಲಿ ಮಾಡುವ ಸಂಬಂಧ ಸೇರಿದಂತೆ ಜಪಾನ್‌ನ ವಿವಿಧ ಉದ್ಯಮಿಗಳೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ಅವರು ಹೇಳಿದರು.


ಪ್ರತಿಭಟನೆ ಕೈ ಬಿಡಿ: ಆಶಾ ಕಾರ್ಯಕರ್ತೆಯರಿಗೆ ಮನವಿ
ಗೌರವ ಧನವನ್ನು ೧೫ ಸಾವಿರ ರೂ.ಗಳಿಗೆ ಹೆಚ್ಚಿಸುವಂತೆ ಆಗ್ರಹಿಸಿ ಕಳೆದ ೬ ದಿನಗಳಿಂದ ಆಶಾ ಕಾರ್ಯಕರ್ತೆಯರು ಬೆಂಗಳೂರಿನಲ್ಲಿ ನಡೆಸಿರುವ ಅಹೋರಾತ್ರಿ ಧರಣಿ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ರಾಜಕೀಯ ಒತ್ತಡಕ್ಕೆ ಮಣಿಯದೆ ಪ್ರತಿಭಟನೆಯನ್ನು ಕೈ ಬಿಡುವಂತೆ ಮನವಿ ಮಾಡಿದರು.
ನನ್ನೆಲ್ಲಾ ಆಶಾ ಸಹೋದರಿಯರಿಗೆ ಮನವಿ ಮಾಡಿಕೊಳ್ಳುತ್ತೇನೆ, ನಮ್ಮ ಮೇಲೆ ವಿಶ್ವಾಸವಿಡಿ, ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇನೆ, ನಿಮ್ಮ ಸಮಸ್ಯೆ ನಮಗೆ ಗೊತ್ತಿದೆ. ಒಂದು ಇಲಾಖೆಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ೭-೮ ಇಲಾಖೆಗಳಿವೆ, ಶಿಕ್ಷಕರಿದ್ದಾರೆ, ಉಪನ್ಯಾಸಕರಿದ್ದಾರೆ. ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು ಇದ್ದಾರೆ. ಹಾಗಾಗಿ ಸರ್ಕಾರ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ಮಾಡುತ್ತದೆ. ಸಂಯಮದಿಂದ ಇರುವಂತೆ ಮನವಿ ಮಾಡಿದರು.


ಆಶಾ ಕಾರ್ಯಕರ್ತೆಯರಿಗೆ ಸಹಾಯ ಮಾಡುತ್ತೇನೆ ಎಂದು ಹೇಳಿದ್ದೇನೆ. ಸರ್ಕಾರದಿಂದ ಏನು ಸಹಾಯ ಮಾಡಲು ಸಾಧ್ಯವೋ ಅದನ್ನೆಲ್ಲಾ ಮಾಡುತ್ತೇನೆ, ನಾನು ಅವರ ಜತೆ ಒಂದೂವರೆ ಗಂಟೆಗಳ ಕಾಲ ಚರ್ಚೆ ಮಾಡಿದ್ದೇನೆ. ರಾಜಕೀಯ ಒತ್ತಡಕ್ಕೆ ಮಣಿದು ಒಂದು ಸಂಘಟನೆ ಧರಣಿ ನಡೆಸುತ್ತಿದೆ. ಇದರಿಂದ ನಮಗೂ ಕೆಲಸ ಮಾಡಲು ಕಷ್ಟವಾಗುತ್ತದೆ. ಹಾಗಾಗಿ ರಾಜಕೀಯ ಒತ್ತಡಕ್ಕೆ ಮಣಿಯಬೇಡಿ, ಪ್ರತಿಭಟನೆ ಕೈ ಬಿಡಿ ಎಂದು ಆಶಾ ಕಾರ್ಯಕರ್ತೆಯರಲ್ಲಿ ಮನವಿ ಮಾಡಿದರು.