
ಬೆಂಗಳೂರು, ನ.೨೨- ನಗರದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಧೂಳು ಮತ್ತು ಕೊಳೆಯನ್ನು ಪರಿಣಾಮಕಾರಿಯಾಗಿ ತೆರವುಗೊಳಿಸಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಬೆಂಗಳೂರು ಕೇಂದ್ರ ನಗರ ಪಾಲಿಕೆ ಜೆಟ್ ಸ್ಪ್ರೇ ವಾಹನಗಳ ಬಳಕೆಗೆ ಮುಂದಾಗಿದೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಸೂಚನೆಯಂತೆ, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (ಬಿಎಸ್ಡಬ್ಲ್ಯುಎಂಎಲ್) ಬಳಿ ಲಭ್ಯವಿರುವ ಐದು ಜೆಟ್ ಸ್ಪ್ರೇ ವಾಹನಗಳನ್ನು ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ತಲಾ ಒಂದರಂತೆ ಹಂಚಿಕೆ ಮಾಡಿ ಸ್ವಚ್ಛತಾ ಕಾರ್ಯಕ್ಕೆ ಬಳಸಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ಜಿ ಹಾಗೂ ಅಭಿವೃದ್ಧಿ ಅಪರ ಆಯುಕ್ತ ವೆಂಕಟಾ ಚಲಪತಿ ಅವರು ನಿನ್ನೆ ರಾತ್ರಿ ವಿಧಾನಸೌಧದ ಮುಂಭಾಗದಲ್ಲಿ ಜೆಟ್ ಸ್ಪ್ರೇ ವಾಹನದ ಪ್ರಾತ್ಯಕ್ಷಿಕೆಯನ್ನು ಪರಿಶೀಲಿಸಿದರು. ಈ ವೇಳೆ ಅಧಿಕಾರಿಗಳು ಸ್ವತಃ ಜೆಟ್ ಸ್ಪ್ರೇ ಮೂಲಕ ಸ್ವಚ್ಛತಾ ಕಾರ್ಯ ನಡೆಸಿ ವಾಹನದ ಕಾರ್ಯನಿರ್ವಹಣೆಯನ್ನು ಪರೀಕ್ಷಿಸಿದರು.
ಪಾದಚಾರಿ ಮಾರ್ಗ, ನಾಮಫಲಕಗಳ ಸ್ವಚ್ಛತೆ
ಜೆಟ್ ಸ್ಪ್ರೇ ವಾಹನಗಳನ್ನು ಬಳಸಿಕೊಂಡು ಪಾದಚಾರಿ ಮಾರ್ಗಗಳು, ರಸ್ತೆ ಬದಿಯ ಕರ್ಬ್ಗಳು, ನಾಮಫಲಕಗಳು ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸಬಹುದು ಎಂದು ಆಯುಕ್ತ ಜಗದೀಶ್ ಜಿ ತಿಳಿಸಿದರು.
ಕೇಂದ್ರ ನಗರ ಪಾಲಿಕೆಯ ಪ್ರತಿ ವಿಭಾಗದಲ್ಲಿಯೂ ತಲಾ ಒಂದು ಜೆಟ್ ಸ್ಪ್ರೇ ವಾಹನವನ್ನು ಬಳಕೆಗೆ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಇದರಿಂದ ನಗರದ ಪ್ರಮುಖ ಸ್ಥಳಗಳ ಸ್ವಚ್ಛತಾ ಕಾರ್ಯಕ್ಕೆ ವೇಗ ದೊರೆಯುವ ನಿರೀಕ್ಷೆಯಿದೆ.
ಈ ಸಂದರ್ಭದಲ್ಲಿ ಅಭಿವೃದ್ಧಿ ಅಪರ ಆಯುಕ್ತ ವೆಂಕಟಾ ಚಲಪತಿ ಆರ್., ಜಂಟಿ ಆಯುಕ್ತರಾದ ಹೇಮಂತ್ ಶರಣ್ ಮತ್ತು ಸಪ್ತಶ್ರೀ, ಮುಖ್ಯ ಅಭಿಯಂತರರಾದ ವಿಜಯ್ ಕುಮಾರ್ ಹಾಗೂ ಹರಿದಾಸ್, ಅಧೀಕ್ಷಕ ಅಭಿಯಂತರ ಚಂದ್ರಶೇಖರ್, ಆರೋಗ್ಯಾಧಿಕಾರಿ ಶಿವಕುಮಾರ್, ಡಿಜಿಎಂ ಭೀಮೇಶ್ ನಾಯಕ್ ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿದ್ದರು.























