Home ಮುಖಪುಟ ಸುದ್ದಿ ಸಾಹುಕಾರ್ ಗೀತಾಗೆ ಇಡಿ ಗ್ರಿಲ್

ಸಾಹುಕಾರ್ ಗೀತಾಗೆ ಇಡಿ ಗ್ರಿಲ್

ಬೆಂಗಳೂರು,ಅ.೭-ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ ಸಿ) ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧ ತನಿಖೆಯನ್ನು ಚುರುಕು ಗೊಳಿಸಿರುವ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬಂಧಿತ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಸದಸ್ಯೆ ಗೀತಾ ಅವರನ್ನು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.


ನಿನ್ನೆ ಸದಸ್ಯೆ ಗೀತಾ ಅವರನ್ನು ಸತತ ಆರು ಗಂಟೆಗಳ ವಿಚಾರಣೆ ಬಳಿಕ ಬಂಧಿಸಲಾಗಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ, ಬಳಿಕ ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಲಾಗಿದೆ.


ಇದೇ ವೇಳೆ ಕೆಪಿಎಸ್ ಸಿಯ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ತಡರಾತ್ರಿವರೆಗೂ ಅವರ ನಿವಾಸದಲ್ಲೇ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಆಯೋಗದ ಮಾಜಿ ಪರೀಕ್ಷಾ ನಿಯಂತ್ರಕ ಗ್ಯಾನೇಂದ್ರ ಕುಮಾರ್ ಹಾಗೂ ಮಧ್ಯವರ್ತಿ ಬಸವರಾಜು ಕನ್ನಾಳೆ ನೀಡಿದ ಹೇಳಿಕೆಗಳ ಆಧಾರದ ಮೇಲೆ ಗೀತಾ ಅವರನ್ನು ಬಂಧಿಸಲಾಗಿದೆ.


ಸಂಜಯನಗರದ ಡಾಲರ್ಸ್ ಕಾಲೋನಿಯಲ್ಲಿರುವ ಶಿವಶಂಕರಪ್ಪ ಸಾಹುಕಾರ್ ನಿವಾಸದ ಮೇಲೆ ಇ.ಡಿ. ಅಧಿಕಾರಿಗಳು ಎರಡನೇ ಬಾರಿಗೆ ದಾಳಿ ನಡೆಸಿದ್ದರು. ಅವರ ನಿವಾಸದ ಸಮೀಪದಲ್ಲಿರುವ ಕೆಪಿಎಸ್ ಸಿ ಸದಸ್ಯೆ ಗೀತಾ ಅವರ ಮನೆಯ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಗಿದೆ.


ಸುಮಾರು ಆರು ಗಂಟೆಗಳ ಕಾಲ ಗೀತಾ ಅವರನ್ನು ವಿಚಾರಣೆ ನಡೆಸಿದ ಬಳಿಕ ಬಂಧಿಸಲಾಗಿದೆ. ಇದೇ ಪ್ರಕರಣದಲ್ಲಿ ಜ್ಞಾನೇಂದ್ರ ಕುಮಾರ್ ಹಾಗೂ ಬಸವರಾಜು ಕನ್ನಾಳೆ ಅವರನ್ನು ಸುಮಾರು ೨೦ ದಿನಗಳ ಕಾಲ ವಿಚಾರಣೆ ನಡೆಸಲಾಗಿದ್ದು, ಈ ವೇಳೆ ಹಲವು ಮಹತ್ವದ ಮಾಹಿತಿಗಳು ಬಹಿರಂಗವಾಗಿವೆ.


ಅಭ್ಯರ್ಥಿಗಳ ಮಾಹಿತಿ ಸಂಗ್ರಹ:


ಪರೀಕ್ಷೆಗೆ ಎರಡು ದಿನಗಳ ಮುನ್ನ ಶಿವಶಂಕರಪ್ಪ ಸಾಹುಕಾರ್, ಗೀತಾ, ಶಾಂತಾ ಹೊಸಮನಿ ಹಾಗೂ ಎಲ್ಫ್ರೀಡಾ ಡಿಸಿಲ್ವಾ ಅವರು ತಮ್ಮನ್ನು ಸಂಪರ್ಕಿಸಿದ್ದರು ಎಂದು ಜ್ಞಾನೇಂದ್ರ ಕುಮಾರ್ ಮತ್ತು ಬಸವರಾಜು ಕನ್ನಾಳೆ ಹೇಳಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.


ಎಷ್ಟು ಮಂದಿ ಅಭ್ಯರ್ಥಿಗಳು ಸಂಪರ್ಕಕ್ಕೆ ಬಂದಿದ್ದಾರೆ, ನಿರ್ದಿಷ್ಟ ಅಭ್ಯರ್ಥಿಗಳ ಮೆರಿಟ್ ಎಷ್ಟು, ಅಂತಿಮ ಪಟ್ಟಿಯಲ್ಲಿ ಯಾರು ಸ್ಥಾನ ಪಡೆದಿದ್ದಾರೆ ಹಾಗೂ ಹಣಕಾಸಿನ ವ್ಯವಹಾರಕ್ಕೆ ಯಾರು ಸಿದ್ಧರಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕೇಳಲಾಗಿತ್ತು ಎಂದು ಆರೋಪಿಗಳು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.


ಸಂಬಂಧಿಯ ಹೇಳಿಕೆ:


ಶಿವಶಂಕರಪ್ಪ ಸಾಹುಕಾರ್ ಅವರ ಸಂಬಂಧಿ ಎನ್ನಲಾದ ಸುಗುರೇಶ್ ಜಾಕ್ ಅವರ ಹೆಸರೂ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಜ್ಞಾನೇಂದ್ರ ಕುಮಾರ್ ಹಾಗೂ ಬಸವರಾಜು ಕನ್ನಾಳೆ ನೀಡಿದ ಮಾಹಿತಿ ಆಧರಿಸಿ ಸುಗುರೇಶ್ ಜಾಕ್ ಅವರನ್ನು ಎರಡು ದಿನದ ಹಿಂದೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.
ಪದವಿಯಲ್ಲಿ ಅನುತ್ತೀರ್ಣರಾಗಿದ್ದರೂ ಕೆಪಿಎಸ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ್ದ ಸುಗುರೇಶ್ ಜಾಕ್ ಅವರ ವಿಚಾರಣೆ ವೇಳೆ ಶಿವಶಂಕರಪ್ಪ ಸಾಹುಕಾರ್ ಹಾಗೂ ಗೀತಾ ಅವರೊಂದಿಗಿನ ಸಂಪರ್ಕದ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಇಡಿ ಮೂಲಗಳು ತಿಳಿಸಿವೆ.


ನಿರಂತರ ಸಂಪರ್ಕ:


ಜನವರಿ ೭ರ ರಾತ್ರಿ, ಅಂದರೆ ಪರೀಕ್ಷೆಯ ಹಿಂದಿನ ದಿನ, ಶಿವಶಂಕರಪ್ಪ ಅವರು ಗ್ಯಾನೇಂದ್ರ ಕುಮಾರ್‌ಗೆ ಎರಡು ಬಾರಿ ಕರೆ ಮಾಡಿದ್ದರು ಎನ್ನಲಾಗಿದ್ದು, ಬಳಿಕ ಗ್ಯಾನೇಂದ್ರ ಕುಮಾರ್ ಉತ್ತರ ಪತ್ರಿಕೆಯನ್ನು ಸುಗುರೇಶ್‌ಗೆ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ. ಆ ಉತ್ತರ ಪತ್ರಿಕೆಯನ್ನು ಸುಗುರೇಶ್ ಗೀತಾಗೆ ಕಳುಹಿಸಿದ್ದರು ಎನ್ನಲಾಗಿದೆ.


ಈ ಮಾಹಿತಿಯನ್ನು ಆಧರಿಸಿ ಗೀತಾ ಆಯೋಗದ ಕೆಲ ಅಧಿಕಾರಿಗಳ ಮೂಲಕ ಪರೀಕ್ಷಾರ್ಥಿಗಳ ಮೊಬೈಲ್ ಸಂಖ್ಯೆಗಳನ್ನು ಪಡೆದು ನಿರಂತರ ಸಂಪರ್ಕದಲ್ಲಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.


ಆಗಸ್ಟ್‌ನಲ್ಲೂ ಇಡಿದಾಳಿ:


ಕಳೆದ ಆಗಸ್ಟ್ ೧೮ರಂದು ಶಿವಶಂಕರಪ್ಪ ಸಾಹುಕಾರ್ ಅವರ ನಿವಾಸ ಹಾಗೂ ಕೆಪಿಎಸ್ ಸಿ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಸತತ ಮೂರು ದಿನಗಳ ಕಾಲ ನಡೆದ ಶೋಧದಲ್ಲಿ ಪರೀಕ್ಷಾ ನೇಮಕಾತಿಗೆ ಸಂಬಂಧಿಸಿದ ದಾಖಲೆಗಳು, ಕಂಪ್ಯೂಟರ್ ಹಾರ್ಡ್ ಡಿಸ್ಕ್, ಸಿಸಿಟಿವಿ ದೃಶ್ಯಗಳು ಹಾಗೂ ಬ್ಯಾಂಕ್ ದಾಖಲೆಗಳನ್ನು ಜಪ್ತಿ ಮಾಡಲಾಗಿತ್ತು.


ಇದೀಗ ಎರಡು ತಿಂಗಳ ಬಳಿಕ ಮತ್ತೆ ದಾಳಿ ನಡೆಸಿರುವ ಇ.ಡಿ., ಅಕ್ರಮ ಹಣ ವರ್ಗಾವಣೆ ಆರೋಪದ ಆಯಾಮದಲ್ಲೂ ತನಿಖೆ ನಡೆಸುತ್ತಿದೆ ಎಂದು ವರದಿಯಾಗಿದೆ.


೧೩ ನೇಮಕಾತಿ ಅಕ್ರಮ:


ಪಶುವೈದ್ಯಾಧಿಕಾರಿ ಹಾಗೂ ಮೀನುಗಾರಿಕೆ ಇಲಾಖೆಯ ಸುಮಾರು ೪೦೦ ಹುದ್ದೆಗಳ ನೇಮಕಾತಿಯಲ್ಲಿನ ಅಕ್ರಮದ ತನಿಖೆ ವೇಳೆ, ಜಲಸಂಪನ್ಮೂಲ ಇಲಾಖೆ, ಕೈಗಾರಿಕಾ ವಿಸ್ತರಣಾಧಿಕಾರಿ, ಗೆಜೆಟೆಡ್ ಪ್ರೊಬೇಷನರಿ, ಬ್ರೇಕ್ ಇನ್‌ಸ್ಪೆಕ್ಟರ್ ಸೇರಿದಂತೆ ಒಟ್ಟು ೧೩ ನೇಮಕಾತಿಗಳಲ್ಲೂ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಪರೀಕ್ಷೆಗೂ ಮುನ್ನವೇ ಅಭ್ಯರ್ಥಿಗಳಿಂದ ಕೋಟ್ಯಂತರ ರೂಪಾಯಿ ಸಂಗ್ರಹ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಕೆಪಿಎಸ್ ಸಿ ನಿಯಮಗಳನ್ನು ಉಲ್ಲಂಘಿಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಲಾಗಿದೆ ಎಂಬ ಆರೋಪಗಳಿವೆ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಜೂನ್ ಮತ್ತು ಜುಲೈ ತಿಂಗಳಲ್ಲಿ ನಾಲ್ಕು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ.


ಪ್ರತಿ ಅಭ್ಯರ್ಥಿ ೩೦% ಹಣ:


ಗ್ಯಾನೇಂದ್ರ ಕುಮಾರ್ ಹಾಗೂ ಬಸವರಾಜು ಕನ್ನಾಳೆ ಅವರ ಬ್ಯಾಂಕ್ ಖಾತೆಗಳ ವಿವರಗಳನ್ನು ಪರಿಶೀಲಿಸಿದಾಗ ಶಿವಶಂಕರಪ್ಪ ಸಾಹುಕಾರ್, ಶಾಂತಾ ಹೊಸಮನಿ ಹಾಗೂ ಗೀತಾ ಅವರ ನಡುವೆ ಹಣಕಾಸಿನ ವ್ಯವಹಾರ ನಡೆದಿರುವುದು ಪತ್ತೆಯಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.


ಆರಂಭದಲ್ಲಿ ಇದನ್ನು ಸಾಮಾನ್ಯ ಹಣಕಾಸಿನ ವ್ಯವಹಾರ ಎಂದು ಆರೋಪಿಗಳು ಹೇಳಿಕೊಂಡಿದ್ದರು ಎನ್ನಲಾಗಿದ್ದು, ತೀವ್ರ ವಿಚಾರಣೆಯ ಬಳಿಕ ಪ್ರತಿ ಅಭ್ಯರ್ಥಿಯಿಂದ ಪಡೆದ ಹಣದಲ್ಲಿ ಶೇ.೨೦ರಿಂದ ೩೦ರಷ್ಟು ಮೊತ್ತವನ್ನು ಶಿವಶಂಕರಪ್ಪ ಸಾಹುಕಾರ್, ಗೀತಾ ಹಾಗೂ ಶಾಂತಾ ಹೊಸಮನಿ ಅವರಿಗೆ ನೀಡಲಾಗುತ್ತಿತ್ತು ಎಂಬ ಮಾಹಿತಿ ಹೊರಬಿದ್ದಿದೆ ಎನ್ನಲಾಗಿದೆ.


ಒಬ್ಬ ಅಭ್ಯರ್ಥಿಯಿಂದ ೬೦-೭೦ ಲಕ್ಷ ಪಡೆಯಲಾಗುತ್ತಿತ್ತು ಮತ್ತು ಅದರಲ್ಲಿ ೧೮-೨೪ ಲಕ್ಷದವರೆಗೆ ಈ ಆರೋಪಿಗಳಿಗೆ ನೀಡಲಾಗುತ್ತಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಇಡಿಮೂಲಗಳು ಹೇಳಿವೆ.