
ವಾಷಿಂಗ್ಟನ್, ಅ. ೪- ಬರ್ಮುಡಾದಿಂದ ಅಮೆರಿಕದ ಬಾಸ್ಟನ್‌ಗೆ ವೈದ್ಯಕೀಯ ಸ್ಥಳಾಂತರಕ್ಕಾಗಿ ತೆರಳುತ್ತಿದ್ದ ಗಲ್ಫ್‌ಸ್ಟ್ರೀಮ್ ಉ೧೦೦ ವಿಮಾನ ನಾಪತ್ತೆಯಾಗಿರುವ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ವಿಮಾನದ ಅವಶೇಷಗಳು ಪತ್ತೆಯಾಗಿವೆ. ಆದರೆ ವಿಮಾನದಲ್ಲಿದ್ದ ಆರು ಮಂದಿಯ ಸುಳಿವು ಇನ್ನೂ ಪತ್ತೆಯಾಗಿಲ್ಲ ಎಂದು ಅಮೆರಿಕದ ಕರಾವಳಿ ರಕ್ಷಣಾ ಪಡೆ (ಯುಎಸ್ ಕೋಸ್ಟ್ ಗಾರ್ಡ್) ತಿಳಿಸಿದೆ.
ವಿಮಾನದಲ್ಲಿ ಒಬ್ಬ ರೋಗಿ, ಅವರೊಂದಿಗೆ ಬಂದಿದ್ದ ಕುಟುಂಬದ ಸದಸ್ಯರೊಬ್ಬರು ಹಾಗೂ ನಾಲ್ವರು ಸಿಬ್ಬಂದಿ ಇದ್ದರು. ನಾಲ್ವರು ಕೆನಡಾ ನಾಗರಿಕರು ಮತ್ತು ಇಬ್ಬರು ಬರ್ಮುಡಾ ನಾಗರಿಕರು ವಿಮಾನದಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆನಡಾ ಮೂಲದ ಲ್ಯಾಟಿಟ್ಯೂಡ್ ಏರ್ ಆಂಬ್ಯುಲೆನ್ಸ್‌ಸಂಸ್ಥೆಗೆ ಸೇರಿದ ವಿಮಾನವು ಬರ್ಮುಡಾದಿಂದ ಬಾಸ್ಟನ್‌ನ ಲೋಗನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಪ್ರಯಾಣಿಸುತ್ತಿತ್ತು. ಶನಿವಾರ ರಾತ್ರಿ ವಿಮಾನದೊಂದಿಗೆ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಕೋಸ್ಟ್ ಗಾರ್ಡ್‌ಗೆ ಮಾಹಿತಿ ನೀಡಿತ್ತು.
ತಕ್ಷಣವೇ ವಾಯು ಹಾಗೂ ಸಮುದ್ರ ಮಾರ್ಗದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಭಾನುವಾರ ನಾಪತ್ತೆಯಾಗಿದ್ದ ವಿಮಾನಕ್ಕೆ ಸಂಬಂಧಿಸಿದ ಅವಶೇಷಗಳ ಪ್ರದೇಶವೊಂದನ್ನು ಪತ್ತೆಹಚ್ಚಲಾಗಿದೆ ಎಂದು ಕೋಸ್ಟ್ ಗಾರ್ಡ್ ದೃಢಪಡಿಸಿದೆ.
“ಪತ್ತೆಯಾಗಿರುವ ಅವಶೇಷಗಳು ನಾಪತ್ತೆಯಾಗಿರುವ ವಿಮಾನಕ್ಕೆ ಸೇರಿವೆ ಎಂಬುದು ದೃಢಪಟ್ಟಿದೆ. ವಿಮಾನದಲ್ಲಿದ್ದ ಆರು ಮಂದಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ” ಎಂದು ಕೋಸ್ಟ್ ಗಾರ್ಡ್ ತಿಳಿಸಿದೆ.
ವಿಮಾನ ನಾಪತ್ತೆಯಾಗುವ ಮುನ್ನ ತುರ್ತು ಪರಿಸ್ಥಿತಿ ಘೋಷಿಸಿದ್ದಿರಬಹುದು ಎಂಬ ಮಾಹಿತಿ ಕೂಡ ಹೊರಬಿದ್ದಿದೆ. ಮ್ಯಾಸಚೂಸೆಟ್ಸ್‌ನ ‘ನಾಂಟಕೆಟ್ ಮೆಮೋರಿಯಲ್ ವಿಮಾನ ನಿಲ್ದಾಣ’ದ ಅಧಿಕಾರಿಗಳಿಗೆ ವಿಮಾನವು ತುರ್ತು ಪರಿಸ್ಥಿತಿ ಘೋಷಿಸಿರುವ ಮಾಹಿತಿ ಬಂದಿತ್ತು ಎಂದು ವಿಮಾನ ನಿಲ್ದಾಣದ ವಕ್ತಾರ ಪ್ರೆಸ್ಟನ್ ಹರಿಮನ್ ತಿಳಿಸಿದ್ದಾರೆ.
ಆದರೆ ತುರ್ತು ಪರಿಸ್ಥಿತಿಗೆ ಕಾರಣವೇನು ಎಂಬುದು ಇನ್ನೂ ಖಚಿತವಾಗಿಲ್ಲ. ಅಪಘಾತದ ಕಾರಣದ ಬಗ್ಗೆ ಊಹಾಪೋಹಗಳಿಗೆ ಅವಕಾಶ ನೀಡುವುದಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.
ನಾಪತ್ತೆಯಾದ ಉ೧೦೦ ವಿಮಾನವು ಕೆನಡಾದ ‘ಲ್ಯಾಟಿಟ್ಯೂಡ್ ಏರ್ ಆಂಬ್ಯುಲೆನ್ಸ್’ ಸಂಸ್ಥೆಗೆ ಸೇರಿದ್ದು, ವೈದ್ಯಕೀಯ ಸ್ಥಳಾಂತರ ಹಾಗೂ ರೋಗಿಗಳ ವಾಪಸಾತಿ ಸೇವೆಗಳನ್ನು ಒದಗಿಸುತ್ತದೆ. ವಿಮಾನವು ಸಕ್ರಿಯ ಮೆಡಿವ್ಯಾಕ್ ಕಾರ್ಯಾಚರಣೆಯಲ್ಲಿದ್ದು, ರೋಗಿಯೊಬ್ಬರನ್ನು ಚಿಕಿತ್ಸೆಗಾಗಿ ಪ್ರದೇಶದ ಆಸ್ಪತ್ರೆಗೆ ಕರೆದೊಯ್ಯುತ್ತಿತ್ತು ಎಂದು ಸಂಸ್ಥೆಯ ವಕ್ತಾರ ಕ್ಲಾರೆನ್ಸ್ ಟೋಗರೆಟ್ಜ್ ತಿಳಿಸಿದ್ದಾರೆ.
ಆದರೆ ಇದು ಒಂಟಾರಿಯೊ ಪ್ರಾಂತ್ಯದ ಅಧಿಕೃತ ಸರ್ಕಾರಿ ಏರ್ ಆಂಬ್ಯುಲೆನ್ಸ್ ವಿಮಾನವಲ್ಲ ಎಂದು ಒಂಟಾರಿಯೊದ ಏರ್ ಆಂಬ್ಯುಲೆನ್ಸ್ ಸೇವೆ ಒದಗಿಸುವ ಸಂಸ್ಥೆ ಸ್ಪಷ್ಟಪಡಿಸಿದೆ.
ವಿಮಾನದ ಅವಶೇಷಗಳು ಪತ್ತೆಯಾಗಿರುವುದರಿಂದ ಅಪಘಾತದ ಸ್ಥಳದ ಕುರಿತು ತನಿಖಾಧಿಕಾರಿಗಳಿಗೆ ಮಹತ್ವದ ಸುಳಿವು ದೊರೆತಿದೆ. ಆದರೆ ವಿಮಾನದಲ್ಲಿದ್ದ ಆರು ಮಂದಿಯ ಸ್ಥಿತಿ ಇನ್ನೂ ತಿಳಿದುಬಂದಿಲ್ಲ.























