Home ಜಿಲ್ಲೆ ಬೆಂಗಳೂರು ಯಾವ ಮಗುವಿಗೂ ಲಸಿಕೆ ತಪ್ಪಿಸಬಾರದು -ಡಾ. ಶ್ರೀನಿವಾಸ್

ಯಾವ ಮಗುವಿಗೂ ಲಸಿಕೆ ತಪ್ಪಿಸಬಾರದು -ಡಾ. ಶ್ರೀನಿವಾಸ್

ಕೋಲಾರ, ಜೂ. ೨೫-“ದೇಶವು ಪೋಲಿಯೋ ಮುಕ್ತವಾಗಿದ್ದರೂ ಸಹ, ನೆರೆಹೊರೆಯ ದೇಶಗಳಲ್ಲಿ ಇನ್ನೂ ಪೋಲಿಯೋ ವೈರಸ್ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜೂನ್ ೨೮ ರ ಭಾನುವಾರದಂದು ಜಿಲ್ಲೆಯಾದ್ಯಂತ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ” ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಿ. ಶ್ರೀನಿವಾಸ್ ಅವರು ತಿಳಿಸಿದರು.


ಇಂದು ನಗರದ ಹೊರವಲಯದಲ್ಲಿರುವ ಡಿ.ಹೆಚ್.ಓ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಘೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ದೇಶವು ೨೦೧೪ ರಲ್ಲೇ ಪೋಲಿಯೋ ಮುಕ್ತ ರಾಷ್ಟ್ರ ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರಮಾಣಪತ್ರ ಪಡೆದಿದೆ. ಆದಾಗ್ಯೂ, ನೆರೆದೇಶಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಕೆಲವು ಆಫ್ರಿಕನ್ ದೇಶಗಳು ಸೇರಿದಂತೆ ಸುಮಾರು ೩೨ ರಾಷ್ಟ್ರಗಳಲ್ಲಿ ಪೋಲಿಯೋ ವೈರಸ್ ಇಂದಿಗೂ ಸಕ್ರಿಯವಾಗಿದೆ. ಅಲ್ಲಿಂದ ಬರುವ ಪ್ರವಾಸಿಗರಿಂದ ಅಥವಾ ವೈರಸ್‌ನ ರೂಪಾಂತರ ತಳಿಗಳಿಂದ ನಮ್ಮ ದೇಶದ ಮಕ್ಕಳಿಗೆ ಮತ್ತೆ ತೊಂದರೆಯಾಗಬಾರದು ಎಂಬ ಮುಂಜಾಗ್ರತೆಯಿಂದ ಈ ಮಾಸ್ ಕ್ಯಾಂಪೇನ್ ಹಮ್ಮಿಕೊಳ್ಳಲಾಗುತ್ತಿದೆ ಎಂದು ಡಾ. ಜಿ. ಶ್ರೀನಿವಾಸ್ ವಿವರಿಸಿದರು.


ಜಿಲ್ಲೆಯಲ್ಲಿ ೦ ಯಿಂದ ೫ ವರ್ಷದೊಳಗಿನ ಒಟ್ಟು ೧,೬೪,೯೯೨ ಮಕ್ಕಳನ್ನು ಗುರುತಿಸಲಾಗಿದ್ದು, ಇವರೆಲ್ಲರಿಗೂ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.


ಜೂನ್ ೨೮ರ ಪೋಲಿಯೋ ಭಾನುವಾರದಂದು ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿಗಳು ಹಾಗೂ ಸರ್ಕಾರಿ ಆಸ್ಪತ್ರೆಗಳ ಪೋಲಿಯೋ ಬೂತ್‌ಗಳಲ್ಲಿ ಲಸಿಕೆ ನೀಡಲಾಗುವುದು. ಅಂದು ಲಸಿಕೆಯಿಂದ ವಂಚಿತರಾಗುವ ಮಕ್ಕಳಿಗಾಗಿ ಸೋಮವಾರ ಮತ್ತು ಮಂಗಳವಾರ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕಲಿದ್ದಾರೆ.


ಅಭಿಯಾನಕ್ಕಾಗಿ ೩,೧೧೪ ವ್ಯಾಕ್ಸಿನೇಟರ್ಸ್ ಹಾಗೂ ಮೇಲ್ವಿಚಾರಣೆಗಾಗಿ ೨೧೦ ಸೂಪರ್‌ವೈಸರ್‌ಗಳನ್ನು ನಿಯೋಜಿಸಲಾಗಿದೆ. ಲಸಿಕೆಗಳ ಸಾಗಣೆಗೆ ಪಂಚಾಯತ್ ರಾಜ್ ಇಲಾಖೆಯಿಂದ ೨೩೩ ಆಟೋಗಳು ಮತ್ತು ಸರ್ಕಾರದ ೭೩ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು ೧೦,೩೯೯ ಕ್ಕೂ ಹೆಚ್ಚು ಲಸಿಕಾ ವಯಲ್ಸ್ ಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದೆ.


ಜಿಲ್ಲೆಯು ಆಂಧ್ರಪ್ರದೇಶ ಮತ್ತು ತಮಿಳುನಾಡು ಗಡಿಗೆ ಹೊಂದಿಕೊಂಡಿರು ವುದರಿಂದ ಗಡಿ ಭಾಗದ ಸುಮಾರು ೩೦ ರಿಂದ ೩೫ ಹಳ್ಳಿಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದೆ. ಇದಲ್ಲದೆ, ಇಟ್ಟಿಗೆ ಭಟ್ಟಿ, ಕೋಳಿ ಫಾರಂ ಹಾಗೂ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ವಲಸೆ ಕಾರ್ಮಿಕರ ಮಕ್ಕಳನ್ನು ತಲುಪಲು ೧,೭೨೦ ಹೈ ರಿಸ್ಕ್ ವಲಸೆ ಪ್ರದೇಶಗಳನ್ನು ಗುರುತಿಸಿ ನಕ್ಷೆ ಮಾಡಲಾಗಿದೆ. ಈ ಪ್ರದೇಶಗಳಲ್ಲೇ ಜಿಲ್ಲೆಯ ಸುಮಾರು ೮೭,೭೬೪ ರಷ್ಟು (ಅಂದರೆ ಸುಮಾರು ಶೇ. ೫೦ ರಷ್ಟು) ಮಕ್ಕಳು ಇರುವುದರಿಂದ ಇಲಾಖೆಯು ಇಲ್ಲಿ ಹೆಚ್ಚಿನ ಗಮನ ಹರಿಸಿದೆ. ಈ ಪೋಲಿಯೋ ಲಸಿಕೆ ಸಂಪೂರ್ಣ ಉಚಿತವಾಗಿದ್ದು, ಲಸಿಕೆ ಹಾಕಿಸಲು ಯಾವುದೇ ರೀತಿಯ ಗುರುತಿನ ಚೀಟಿ ಅಥವಾ ದಾಖಲೆಗಳ ಅಗತ್ಯವಿರುವುದಿಲ್ಲ. ಮಗುವಿಗೆ ಜೂನ್ ೨೭ ರ ಸಂಜೆಯೇ ಪೋಲಿಯೋ ಡ್ರಾಪ್ಸ್ ಹಾಕಿಸಿದ್ದರೂ ಸಹ, ಜೂನ್ ೨೮ ರ ಭಾನುವಾರ ಮತ್ತೊಮ್ಮೆ ಲಸಿಕೆ ಹಾಕಿಸುವುದು ಅತ್ಯಗತ್ಯ ಎಂದು ಜಿ. ಶ್ರೀನಿವಾಸ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.


ಪತ್ರಿಕಾಗೋಷ್ಠಿಯಲ್ಲಿ ಆರ್.ಸಿ.ಹೆಚ್ ಅಧಿಕಾರಿ ಡಾ. ಚಾರ್ಮಿಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ಹೆಚ್.ವಿ. ನಾರಾಯಣಸ್ವಾಮಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.