
ನವದೆಹಲಿ, ಜು.25-ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರಿಗೆ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತಂತೆ ಮಧ್ಯಾನ್ಹ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ಲಲ್ಲೇ ಈ ಆದೇಶ ಹೊರಬಿದ್ದಿದೆ.
ಪ್ರಧಾನ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ ಬಳಿಕ, ರಾಷ್ಟ್ರಪತಿಗಳ ಕಚೇರಿ ಇಂದು ಸಂಜೆ ಪ್ರಕಟಣೆಯಲ್ಲಿ ಜೋಶಿ ಅವರ ನೇಮಕಾತಿಯನ್ನು ದೃಢಪಡಿಸಿದೆ.
ಪ್ರಧಾನಿಗಳ ಶಿಫಾರಸಿನ ಮೇರೆಗೆ ಸಚಿವ ಪ್ರಲ್ಹಾದ್ ಜೋಷಿಯವರಿಗೆ ಶಿಕ್ಷಣ ಇಲಾಖೆಯ ಹೆಚ್ಚುವರಿ ಹೊಣೆ ನೀಡಿ ರಾಷ್ಟ್ರಪತಿಗಳು ಆದೇಶ ಹೊರಡಿಸಿದ್ದಾರೆ.
ಕರ್ನಾಟಕದ ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಪ್ರಹ್ಲಾದ್ ಜೋಶಿ ಅವರು, ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರ ಜೊತೆಗೆ, ಅವರು ಅಂತರರಾಷ್ಟ್ರೀಯ ಸೌರ ಒಕ್ಕೂಟದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ದೇಶದ ಶಿಕ್ಷಣ ಕ್ಷೇತ್ರದಲ್ಲಿ ಹಲವು ಪ್ರಮುಖ ಸುಧಾರಣೆಗಳು ಹಾಗೂ ಸವಾಲುಗಳು ಎದುರಾಗಿರುವ ಈ ನಿರ್ಣಾಯಕ ಸಮಯದಲ್ಲಿ ಪ್ರಹ್ಲಾದ್ ಜೋಶಿ ಅವರಿಗೆ ಈ ಮಹತ್ವದ ಶಿಕ್ಷಣ ಖಾತೆಯ ಉಸ್ತುವಾರಿಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.































