Home ಜಿಲ್ಲೆ ಕಲಬುರಗಿ ಶಿಕ್ಷಣವು ಸಾರ್ಥಕ ಬದುಕಿಗೆ ದೀಕ್ಷೆಯಾಗಬೇಕು

ಶಿಕ್ಷಣವು ಸಾರ್ಥಕ ಬದುಕಿಗೆ ದೀಕ್ಷೆಯಾಗಬೇಕು

ಕಲಬುರಗಿ,ಜು 25: ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ್ ಪ್ರತಿಷ್ಠಾನ ರಾಯಚೂರು, ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ್ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಹಾಗೂ ಸರ್ವಜ್ಞ ಆಂಗ್ಲ ಮಾಧ್ಯಮ ಶಾಲೆ ಸಂಯುಕ್ತಾಶ್ರಯದಲ್ಲಿ ನಾಡೋಜ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ್ ಅವರು ರಚಿಸಿದ “ಮುಂಜಾವಿಗೊಂದು ನುಡಿ ಕಿರಣಗಳ ದರ್ಶನ” “ಯುವ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ 9 ದಿನಗಳ ವಿಶೇಷ ಪ್ರವಚನ ಮಾಲಿಕೆ”ಯ ಪ್ರಥಮ ದಿವಸದಲ್ಲಿ ಮುದ್ಗಲ್ ತಿಮ್ಮಾಪುರಕಲ್ಯಾಣ ಆಶ್ರಮ ಶ್ರೀ ಮಹಾಂತೇಶ್ವರ ಮಠದ ಪೂಜ್ಯ ಮಹಾಂತ ಸ್ವಾಮಿಗಳು ಪ್ರವಚನ ನೀಡುತ್ತಾ, ನಾಡೋಜ ಗೌರವಾನ್ವಿತ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ಅವರ “ಶಿಕ್ಷಣವು ಸಾರ್ಥಕ ಬದುಕಿಗೆ ದೀಕ್ಷೆ ಯಾಗಬೇಕು, ಅರ್ಥಪೂರ್ಣ ಬದುಕಿನ ಶಿಲ್ಪಿಯಾಗಬೇಕು” ಎಂಬ ನುಡಿಮುತ್ತನ್ನು ದರ್ಶನ ಮಾಡಿಸುತ್ತ, ಬದುಕಿನಲ್ಲಿ ಸತ್ಯ, ನ್ಯಾಯ, ಪ್ರೀತಿ, ನೀತಿ, ಧರ್ಮ, ಸ್ನೇಹ, ಸಂಬಂಧಗಳ ಜೀವನ ಮೌಲ್ಯಗಳನ್ನು ನ್ಯಾಯಮೂರ್ತಿ ಗಳು ಅನುಭವದ ನುಡಿ ರತ್ನಗಳ ಬೆಳಕನ್ನು ಸಮಾಜಕ್ಕೆ ನೀಡಿದ್ದಾರೆ. ಆ ಅದ್ಭುತವಾದ ಅರ್ಥಗರ್ಭಿತವಾದ ನುಡಿಗಳನ್ನು ಆಚರಣೆಯಲ್ಲಿ ತಂದ ಸಾವಿರಾರು ಜನರು, ವಿದ್ಯಾರ್ಥಿಗಳು ತಮ್ಮ ಬದುಕನ್ನು ಕಟ್ಟಿಕೊಂಡು ಸಾಧಕರಾಗಿದ್ದಾರೆ ಎಂದರು.
ನೀವು ವಿದ್ಯಾರ್ಥಿಗಳಾದವರು ಶಿಕ್ಷಕರ-ಪಾಲಕರ ಮಾರ್ಗದರ್ಶನ ಪಡೆದು ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿ, ನಿರಂತರವಾಗಿ ಇಂತಹ ಮೌಲ್ಯಾಧಾರಿತ ಉತ್ತಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತಂದು ಸಾಧಕರಾಗಬೇಕೆಂದು ಅನೇಕ ದೃಷ್ಟಾಂತಗಳ ಮೂಲಕ ಮನಮುಟ್ಟುವಂತೆ ಹೇಳಿದರು. ಯಾವ ರೀತಿಯಲ್ಲಿ ಗುರುಗಳು ಶಿಷ್ಯರಿಗೆ ಸಂಸ್ಕಾರದ ದೀಕ್ಷೆ ಕೊಡುತ್ತಿದ್ದರೋ ಅದೇ ರೀತಿಯಲ್ಲಿ ಇಂದಿನ ಶಿಕ್ಷಕರು ಮಕ್ಕಳಿಗೆ ಮಾಕ್ರ್ಸ್ ಜೊತೆಗೆ ಇಂತಹ ಮೌಲ್ಯಗಳ ಸುಂದರ ಬುನಾದಿ ಹಾಕಬೇಕು ಎಂದು ಶಿಕ್ಷಕರಿಗೆ ಹೇಳಿದರು. ಶಿಲ್ಪಿ ದೊಡ್ಡದಾದ ಕಲ್ಲು ಬಂಡೆಯ ಒಳಗಿರುವ ಬೇಡವಾದ ಭಾಗವನ್ನು ತೆಗೆದರೆ ಅದು ಸುಂದರ ಮೂರ್ತಿಯಾಗಿ ಪೂಜೆಗೊಳ್ಳುತ್ತದೆಯೋ, ಹಾಗೆಯೇ ವಿದ್ಯಾರ್ಥಿಗಳು ತಮ್ಮಲ್ಲಿರುವ ಅವಗುಣಗಳನ್ನು ತೆಗೆದುಹಾಕಿ ಸಹನೆ, ತಾಳ್ಮೆ, ಪರಿಶ್ರಮದಿಂದ ಸುಂದರ ಅರ್ಥಪೂರ್ಣ ಬದುಕು ಕಟ್ಟಿಕೊಳ್ಳಲು ನ್ಯಾಯಮೂರ್ತಿಗಳು ತಿಳಿಸಿದ್ದಾರೆ ಎಂದರು. ವಿದ್ಯಾರ್ಥಿಗಳು ಉದಯ ಕಾಲದೊಳೆದ್ದು ಪಾಲಕರಿಗೆ ಗೌರವ ತೋರಿ ಪರಿಶುದ್ಧ ಮನಸ್ಸು, ಬುದ್ಧಿ, ಭಾವದಲ್ಲಿ ಈ ನುಡಿಕಿರಣಗಳ ಬೆಳಗನ್ನು ನೆತ್ತಿಯಲ್ಲಿ ಬಿತ್ತಿಕೊಂಡಾಗ, ಮನದಲ್ಲಿ ತುಂಬಿಕೊಂಡಾಗ ಅಭ್ಯಾಸದ ಕಡೆಗೆ ಒಲವು ಹೆಚ್ಚಾಗಿ ಆಸಕ್ತ ಕ್ಷೇತ್ರದಲ್ಲಿ ಸಾಧನೆಗೈಯಲು ಸುಲಭವಾಗುತ್ತದೆ ಹಾಗು ದಿನದ ಸರಿ-ತಪ್ಪುಗಳನ್ನು ತಿಳಿದುಕೊಂಡು, ತಿದ್ದಿಕೊಂಡು, ಪ್ರಾಮಾಣಿಕವಾಗಿ ಬದುಕಲು ಪ್ರೇರಣೆ ದೊರೆಯುತ್ತದೆ ಎಂದರು
ಸಂಸ್ಥೆಯ ಸಂಸ್ಥಾಪಕರಾದ ಪೆÇ್ರ. ಚನ್ನಾರಡಿ ಪಾಟೀಲ ಮಾತನ್ನಾಡುತ್ತಾ, ವಿದ್ಯಾರ್ಥಿಗಳು ಉನ್ನತ ಕನಸುಗಳನ್ನು ನನಸಾಗಿಸಿಕೊಳ್ಳಲು ನಾಡೋಜ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ಅವರ ಆದರ್ಶದ ಬದುಕು ಅವರ ಅನುಭವದ ನುಡಿಗಳ ದರ್ಶನ ಮಾಡಿಕೊಂಡು, ತಂದೆ-ತಾಯಿಗಳಿಗೆ, ಸಮಾಜಕ್ಕೆ ಏನನ್ನಾದರು ಕೊಡುಗೆ ಕೊಟ್ಟರೆ ನಮ್ಮ ಶ್ರಮ ಹಾಗು ಪೂಜ್ಯರ ಪ್ರವಚನ ಸಾರ್ಥಕ ವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಶೈಕ್ಷಣಿಕ ನಿರ್ದೇಶಕ ಅಭಿಷೇಕ ಚನ್ನಾರಡ್ಡಿ ಪಾಟೀಲ, ಪ್ರಾಚಾರ್ಯ ಪ್ರಶಾಂತ ಕುಲಕರ್ಣಿ, ವಿನೂತಾ ಆರ್.ಬಿ., ಪ್ರಭುಗೌಡ ಸಿದ್ಧಾರೆಡ್ಡಿ, ಕರುಣೇಶ್ ಹಿರೇಮಠ, ಗುರುರಾಜ ಕುಲಕರ್ಣಿ, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.