
ಕಲಬುರಗಿ,ಜು.25-ಪರಿಸರ ಎಂಬುದು ನಮ್ಮ ಜೀವನದ ಮೂಲಧಾತು. ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಅನ್ನ-ಎಲ್ಲವೂ ಈ ಪರಿಸರ ನಮಗೆ ನೀಡಿದ ಕೊಡುಗೆ. ಆದರೆ, ಇಂದು ಆಧನಿಕತೆ, ನಗರೀಕರಣ ಮತ್ತು ತಂತ್ರಜ್ಞಾನದ ಓಟದಲ್ಲಿ ನಾವು ಪರಿಸರವನ್ನು ಮರೆಯುತ್ತಿದ್ದೇವೆ. ಪರಿಸರ ಮಾಲಿನ್ಯ, ಜಾಗತಿಕ ತಾಪಮಾನ ಏರಿಕೆ ಹಾಗೂ ಹವಮಾನ ವೈಪರಿತ್ಯಗಳಂತಹ ಸಮಸ್ಯೆಗಳು ಇಂದು ಭೂಮಿಯನ್ನು ಕಷ್ಟಕ್ಕೆ ದೂಡಿವೆ. ಪರಿಸರವನ್ನು ಕಾಪಾಡುವುದು ಕೇವಲ ಸರ್ಕಾರ ಅಥವಾ ಯಾವುದೇ ಸಂಸ್ಥೆಯ ಜವಾಬ್ದಾರಿಯಲ್ಲ. ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಪ್ರತಾಪ್ ಸಿಂಗ್ ತಿವಾರಿ ಹೇಳಿದರು.
ನಗರದ ಸಾರ್ವಜನಿಕ ಉದ್ಯಾನ ಸಮೀಪದ ವಿಠ್ಠಲರಾವ ತುಕಾರಾಮ ಸುತ್ರಾವೆ ಮೆಮೋರಿಯಲ್ ಸ್ಕೂಲ್‍ನ ಪೌಲ್ ಹ್ಯಾರಿಸ್ ಆಡಿಟೋರಿಯಮ್‍ನಲ್ಲಿ ರೋಟರಿ ಕ್ಲಬ್ ಆಫ್ ಗುಲಬರ್ಗಾ ವತಿಯಿಂದ ಆಯೋಜಿಸಿದ್ದ ನ್ಯೂ ಲೀಡರ್‍ಶಿಪ್ ಮಂತ್ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವುದರ ಮೂಲಕ, ಜಲ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ, ಇಂಧನ ಮತ್ತು ವಿದ್ಯುತ್ ಉಳಿತಾಯ ಮಾಡುವುದರ ಮೂಲಕ ಮತ್ತು ಗಿಡ-ಮರಗಳ ಪೋಷಣೆ ಮಾಡುವುದರ ಮೂಲಕ ಪರಿಸರ ರಕ್ಷಣೆ ಮಾಡಬಹುದಾಗಿದೆ ಎಂದರು.
ಶೇಷಾದ್ರಿ ಕುಲಕರ್ಣಿ, ವಿಜಯರೆಡ್ಡಿ ವಂದಾಲಿ, ರೋಟರಿ ಕ್ಲಬ್ ಆಫ್ ಗುಲಬರ್ಗಾದ ಅಧ್ಯಕ್ಷ ರಮೇಶ ಜಿ.ತಿಪ್ಪನೂರ, ಕಾರ್ಯದರ್ಶಿ ಡಾ.ಬಿ.ಎಸ್.ದೇಸಾಯಿ ಉಪಸ್ಥಿತರಿದ್ದರು.
ಇದೇ ವೇಳೆ ಸುಶೀಲ ಪ್ರೇಮಸಾಗರ, ರಮೇಶ ಪಾಟೀಲ, ಉಮೇಶ ತಳವಾರ, ಶಾಮಕುಮಾರ ಪಾಟೀಲ, ನಾಗೇಂದ್ರಪ್ಪ ಕಲ್ಲಾ, ಡಾ.ಅಶೋಕ ಬಿ.ಗುತ್ತೇದಾರ, ಅರುಣಕುಮಾರ ಪಾಟೀಲ, ಶರಣಬಸಪ್ಪ ನಾಗಶೆಟ್ಟಿ, ಡಾ.ವಿನಯ್ ವಾರದ್, ವಿಜಯರೆಡ್ಡಿ ವಂದಾಲಿ ಅವರ ಜನ್ಮದಿನ ಆಚರಿಸಲಾಯಿತು.































