Home ಸಿನೆಮಾ ಅರ್ಜುನ್ ಜನ್ಯ ಅವರಿಂದ ‘ಮಹಾಕವಿ’ ಚಿತ್ರದ ಹಾಡುಗಳ ಅನಾವರಣ

ಅರ್ಜುನ್ ಜನ್ಯ ಅವರಿಂದ ‘ಮಹಾಕವಿ’ ಚಿತ್ರದ ಹಾಡುಗಳ ಅನಾವರಣ

ಹಿರಿಯ ನಿರ್ದೇಶಕ ಪ್ರೊ. ಬರಗೂರು ರಾಮಚಂದ್ರಪ್ಪ ನಿರ್ದೇಶನದ 25ನೇ ಸಿನಿಮಾ ‘ಮಹಾಕವಿ’ ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಯಾದವು. ಬೆಳಗಾವಿಯ ಪ್ರಭು ಯತ್ನಟ್ಟಿ ಅವರ ಪಿ.ಆರ್. ಅಸೋಸಿಯೇಟ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಹಾಡುಗಳನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅನಾವರಣಗೊಳಿಸಿದರು.

ಹಾಡುಗಳ ಬಿಡುಗಡೆ ಬಳಿಕ ಮಾತನಾಡಿದ ಅರ್ಜುನ್ ಜನ್ಯ, “ನಾನು ಇಲ್ಲಿ ಮುಖ್ಯ ಅತಿಥಿಯಾಗಿ ಬಂದಿಲ್ಲ. ಬರಗೂರು ರಾಮಚಂದ್ರಪ್ಪ ಅವರ ಅಭಿಮಾನಿಯಾಗಿ ಬಂದಿದ್ದೇನೆ. ಅವರ ಬಾಯಲ್ಲಿ ಕನ್ನಡ ಕೇಳುವುದೇ ಒಂದು ಸಂತೋಷ. ಶಮಿತಾ ಮಲ್ನಾಡ್ ಸಂಗೀತ ಸಂಯೋಜಿಸಿರುವ ಚಿತ್ರದ ಎಲ್ಲ ಹಾಡುಗಳೂ ಮನಸೆಳೆಯುತ್ತವೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಬರಗೂರು ರಾಮಚಂದ್ರಪ್ಪ, ‘ಮಹಾಕವಿ’ ತಮ್ಮ ನಿರ್ದೇಶನದ 25ನೇ ಚಿತ್ರ ಎಂಬುದು ವಿಶೇಷ ಎಂದರು. ಕನ್ನಡದ ಆದಿಕವಿ ಪಂಪ ಅವರ ಕಾವ್ಯಗಳನ್ನು ಆಧರಿಸಿ ಈ ಚಿತ್ರ ನಿರ್ಮಾಣವಾಗಿದ್ದು, ಇದು ಪಂಪನ ಜೀವನಚರಿತ್ರೆಯಲ್ಲ; ಅವರ ಕಾವ್ಯಗಳಲ್ಲಿ ಪ್ರತಿಪಾದಿಸಿರುವ ಪರಿಕಲ್ಪನೆಗಳಿಗೆ ದೃಶ್ಯರೂಪ ನೀಡುವ ಪ್ರಯತ್ನವಾಗಿದೆ ಎಂದು ವಿವರಿಸಿದರು. ಹತ್ತನೇ ಶತಮಾನದ ಐತಿಹಾಸಿಕ ಹಿನ್ನೆಲೆಗೆ ಧಕ್ಕೆ ಬಾರದಂತೆ ಚಿತ್ರ ರೂಪಿಸುವುದು ಸವಾಲಿನ ಕೆಲಸವಾಗಿತ್ತು ಎಂದರು.

ಸಂಗೀತ ನಿರ್ದೇಶಕಿ ಶಮಿತಾ ಮಲ್ನಾಡ್ ಮಾತನಾಡಿ, 2015ರಲ್ಲಿ ‘ಬೆಕ್ಕು’ ಚಿತ್ರದ ಮೂಲಕ ಬರಗೂರು ರಾಮಚಂದ್ರಪ್ಪ ಅವರು ತಮ್ಮನ್ನು ಸಂಗೀತ ನಿರ್ದೇಶಕಿಯಾಗಿ ಪರಿಚಯಿಸಿದರು. ಆ ಬಳಿಕ ಅವರ ನಿರ್ದೇಶನದ ಎಲ್ಲ ಚಿತ್ರಗಳಿಗೆ ಸಂಗೀತ ನೀಡುವ ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ ಅರ್ಜುನ್ ಜನ್ಯ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ನಟ ಕಿಶೋರ್, “ಆದಿಕವಿ ಪಂಪ ಕುರಿತಾದ ಚಿತ್ರದಲ್ಲಿ ಅಭಿನಯಿಸಿರುವುದು ನನ್ನ ಪಾಲಿಗೆ ಹೆಮ್ಮೆ. ವಿಲನ್ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ ನನಗೆ ಈ ಚಿತ್ರದಲ್ಲಿ ವಿಭಿನ್ನ ಪಾತ್ರದ ಜೊತೆಗೆ ಹಾಡುಗಳಲ್ಲೂ ಕಾಣಿಸಿಕೊಳ್ಳುವ ಅವಕಾಶ ದೊರೆತಿದೆ,” ಎಂದರು.

ಕಾರ್ಯಕ್ರಮದಲ್ಲಿ ನಾಯಕಿ ಅನುಷಾ ರೈ, ಹಿರಿಯ ಕಲಾವಿದರಾದ ಸುಂದರರಾಜ್, ಪ್ರಮೀಳಾ ಜೋಷಾಯಿ, ರಾಜಪ್ಪ ದಳವಾಯಿ ಸೇರಿದಂತೆ ಚಿತ್ರತಂಡದ ಸದಸ್ಯರು ಚಿತ್ರದ ಅನುಭವಗಳನ್ನು ಹಂಚಿಕೊಂಡರು. ನಿರ್ಮಾಪಕ ಪ್ರಭು ಯತ್ನಟ್ಟಿ ಉಪಸ್ಥಿತರಿದ್ದರು.

ಶಮಿತಾ ಮಲ್ನಾಡ್ ಸಂಗೀತ ಸಂಯೋಜಿಸಿರುವ ‘ಮಹಾಕವಿ’ ಚಿತ್ರದಲ್ಲಿ ಕಿಶೋರ್ ಮತ್ತು ಅನುಷಾ ರೈ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಾಲಿವುಡ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿರುವ ಈ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.