
ಕೋಲಾರ, ಜು,೨೫- ಕರ್ನಾಟಕ ರಾಜ್ಯದ ನಗರಸಭೆ, ಗ್ರಾಮ ಪಂಚಾಯಿತಿ, ಗ್ರಾಮೀಣ ಹಾಗೂ ನಗರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮಂಜೂರು ಮಾಡಲಾದ ಕಟ್ಟಡ ನಕ್ಷೆ ಸೆಟ್ ಬ್ಯಾಕ್ ಮತ್ತು ಕಟ್ಟಡದ ಅಳತೆಗಳ ಅನುಗುಣವಾಗಿ ನಗರದಲ್ಲಿ ಕಟ್ಟಡ ನಿರ್ಮಾಣಗಳನ್ನು ನಿರ್ಮಿಸುವುದನ್ನು ಅನುಷನಕ್ಕೆ ಆದ್ಯತೆ ನೀಡದೆ ಇರುವುದರಿಂದ ಬಡಾವಣೆಗಳಲ್ಲಿನ ಅಕ್ಕಪಕ್ಕದವರುಗಳು ಕಿತ್ತಾಡಿಕೊಂಡು ಪೊಲೀಸ್ ಠಾಣೆ ಎಡೆತಾಕುವಂತಾಗಿದ್ದು ಇದನ್ನು ತಡೆಗಟ್ಟು ನಿಯಮಾನು ಸಾರ ಕಟ್ಟಡಗಳ ನಿರ್ಮಾಣಕ್ಕೆ ಮುಂದಾಗುವಂತೆ ಸೂಚಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ರವರ ಮೂಲಕ ಸರ್ಕಾರಕ್ಕೆ ಹಿರಿಯ ನಾಗರೀಕರ ನಿಯೋಗವು ಮನವಿ ಸಲ್ಲಿಸಿದರು.
ನಗರ ಹಾಗೂ ಗ್ರಾಮೀಣ ಪ್ರದೇಶಗಳಿಂದ ಸಾರ್ವಜನಿಕರುಗಳು ವಾಸದ ಮನೆ ಇತರೆ ಕಟ್ಟಡಗಳನ್ನು ನಿರ್ಮಿಸಬೇಕಾದಲ್ಲಿ ಅವರುಗಳು ಹೊಂದಿರುವಂತಹ ಖಾಲಿ ನಿವೇಶನಗಳ ಒಟ್ಟು ಅಳತೆಗೆ ಅನುಗುಣವಾಗಿ ನಿರ್ಮಿಸುವ ಕಟ್ಟಡ ಸುತ್ತ ಮುತ್ತಲಿನ ನಾಲ್ಕು ದಿಕ್ಕುಗಳಲ್ಲಿ ಖಾಲಿ ಬಿಡಬೇಕಾದಂತಹ ಸೆಟ್ ಬ್ಯಾಕ್ ಪ್ರಮಾಣದ ಕುರಿತು ಸರ್ಕಾರದ ಇಲಾಖೆಯು ಹೊರಡಿಸಿರುವ ಜೋನಲ್ ರೆಗ್ಯುಲೇಷನ್ ಬುಕ್ ಪುಸ್ತಕದಲ್ಲಿ ವಿವರವಾಗಿ ತಿಳಿಸಲಾಗಿರುತ್ತದೆ ಅದರೆ ಬಹುತೇಕ ಮಂದಿ ಪಾಲಿಸುತ್ತಿಲ್ಲ ದೂರಿದ್ದಾರೆ.
ಖಾಲಿ ನಿವೇಶನದ ವ್ಯಾಪ್ತಿಯಲ್ಲಿ ಬರುವಂತಹ ರಾಜ್ಯದ ಎಲ್ಲಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ನಿರ್ಮಿಸಲು ಉದ್ದೇಶಿಸುವಂತಹ ಕಟ್ಟಡದ ನಕ್ಷೆಯಲ್ಲಿ ಸೂಚಿತ ಮಾರ್ಗಸೂಚಿ ಸೆಟ್ ಬ್ಯಾಕ್ ಅಳತೆಗಳನ್ನು ಬಿಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಂಡ ನಂತರ ಕಟ್ಟಡದ ಮೂಲ ನಕ್ಷೆಯನ್ನು ಅನುಮೋದಿಸಿ ಮಂಜೂರಾತಿಯನ್ನು ನೀಡಬೇಕಾಗಿರುತ್ತದೆ ಎಂದು ಕೋರಿದ್ದಾರೆ.
ಈ ರೀತಿ ಮಂಜೂರಾತಿ ಪಡೆದಂತಹ ಮೂಲ ನಕ್ಷೆಯನ್ನು ಸಂಬಂಧಪಟ್ಟಂತಹ ನಗರಾಭಿವೃದ್ಧಿ ಅಥವಾ ಗ್ರಾಮೀಣ ಅಭಿವೃದ್ಧಿ ಪ್ರಾಧಿಕಾರಗಳಿಗೆ ಸಲ್ಲಿಸಿ ಅನುಮೋದನೆಯನ್ನು ಪಡೆಯ ಬೇಕಾಗಿರುತ್ತೆ ನಂತರವೇ ಕಟ್ಟಡದ ನಿರ್ಮಾಣಕ್ಕೆ ಅನುಮತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ನಗರಸಭೆ ಹಾಗೂ ನಗರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕಟ್ಟಡ ನಿರ್ಮಾಣಪೂರ್ಣ ಗೊಳ್ಳುವವರೆಗೂ ಮೇಲು ಉಸ್ತುವಾರಿ ಎಂದು ವಹಿಸಿ ಯಾವುದೇ ನ್ಯೂನ್ಯತೆಗಳು ಕಂಡು ಬಂದಲ್ಲಿ ಅವುಗಳನ್ನು ತಡೆಯುವ ಅಥವಾ ನಿಯಮ ಉಲ್ಲಂಘನೆ ಮಾಡಿ ನಿರ್ಮಿಸಲಾಗಿರುವ ಅಂತ ಕಟ್ಟಡದ ಭಾಗವನ್ನು ತೆರೆವು ಗೊಳಿಸುವ ಅಧಿಕಾರವನ್ನು ಹೊಂದಿರುತ್ತಾರೆ. ಕರ್ನಾಟಕ ಮುನ್ಸಿಪಲ್ ಆಕ್ಟ್ ೧೯೬೪ದ ಸೆಕ್ಷನ್ ೧೮೮ರ ಪ್ರಕಾರ ಅಧಿಕಾರವಿರುತ್ತದೆ.
ಆದರೆ ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಸೆಟ್ ಬ್ಯಾಕ್ ಬಿಡದೆ ಕಟ್ಟಡಗಳನ್ನು ಪ್ರಭಾವಿಗಳು, ಬಲಾಡ್ಯರು, ರಾಜಕೀಯ ಬೆಂಬಲವನ್ನು ಹೊಂದಿರುವಂತಹವರು ಉಲ್ಲಂಘನೆ ಮಾಡುತ್ತಿದ್ದಾರೆ. ಇದರಿಂದಾಗಿ ಪ್ರಾಮಾಣಿಕ ಮಾಲೀಕರು ತಾವು ಮಾಡದ ತಪ್ಪಿಗೆ ತೊಂದರೆಗೆ ಸಿಲುಕಿ ಬಲಿಪಶುಗಳಾಗಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಗರಸಭೆ ಹಾಗೂ ಕೆಯುಡಿಎ ಅಧಿಕಾರಿಗಳಿಗೆ ಅನೇಕ ಕಾನೂನು ಪಾಲನ ನಿವೇಶನದಾರರು ಇಂತಹ ಅಕ್ರಮ ಒತ್ತುವರಿ ಹಾಗೂ ಸೆಟ್ ಬ್ಯಾಕ್ ಬಿಡದೆ ನಿರ್ಮಿಸಲಾಗುತ್ತಿರುವ ಅಂತಹ ಒತ್ತುವರಿ ತೆರವುಗಳ ಕುರಿತು ಅಧಿಕಾರಿಗಳು ಕಾನೂನಿನ ರೀತಿ ಕ್ರಮ ತೆಗೆದುಕೊಳ್ಳಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ, ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಸೂಚಿಸಬೇಕೆಂದು ನಗರದ ಗೌರಿಪೇಟೆ ಕೆ.ಎನ್.ರವೀಂದ್ರನಾಥ್, ಎಂ.ನಾರಾಯಣ್, ಪಿ.ನಾರಾಯಣಪ್ಪ, ಬೆಗ್ಲಿ ಮುನಿಕೃಷ್ಣಯ್ಯ, ಎಂ.ಮುನೆಯ್ಯ ರವರು ಮನವಿ ಮಾಡಿಕೊಂಡಿದ್ದಾರೆ


































