Home ಜಿಲ್ಲೆ ಬೆಂಗಳೂರು ಸರ್ಕಾರಿ ನೌಕರರ ವಿರುದ್ಧ ಅವಹೇಳನ : ಪೊಲೀಸರಿಗೆ ದೂರು

ಸರ್ಕಾರಿ ನೌಕರರ ವಿರುದ್ಧ ಅವಹೇಳನ : ಪೊಲೀಸರಿಗೆ ದೂರು

ಮಾಲೂರು ಜು೨೫: ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಸರ್ಕಾರಿ ನೌಕರರ ವಿರುದ್ಧ ಸುಳ್ಳು ಆರೋಪ, ಮಾನಹಾನಿಕರ ಹಾಗೂ ಅವಹೇಳನಕಾರಿ ಪೋಸ್ಟ್‌ಗಳನ್ನು ಪ್ರಕಟಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸರ್ಕಾರಿ ನೌಕರರು ಪೊಲೀಸರಿಗೆ ಹಾಗೂ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.


ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಅಜಯ್ ನೇತೃತ್ವದಲ್ಲಿ ತಾಲ್ಲೂಕಿನ ವಿವಿಧ ಇಲಾಖೆಗಳ ಸರ್ಕಾರಿ ನೌಕರರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘ, ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಮನವಿ ಸಲ್ಲಿಸಿದರು.


ಶಿವಾರಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿಂಡಹಳ್ಳಿ ಗ್ರಾಮದ ಖಾತೆಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯದ ನಿರ್ದೇಶನದಂತೆ ಪಿಸಿಆರ್ ಪ್ರಕರಣ ದಾಖಲಾಗಿದ್ದು,ಅದರ ತನಿಖೆ ನಡೆಸುವುದು ಪೊಲೀಸರ ಜವಾಬ್ದಾರಿಯಾಗಿದೆ.ಆದರೆ ಕೆಲ ಕಿಡಿಗೇಡಿಗಳು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವಿ.ಮುನಿಯಪ್ಪ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಪ್ರೇರಿತ, ದ್ವೇಷಪೂರಿತ ಹಾಗೂ ವೈಯಕ್ತಿಕ ನಿಂದನೆ ಮಾಡುವ ಪೋಸ್ಟ್‌ಗಳನ್ನು ಹರಿಬಿಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


ನ್ಯಾಯಾಲಯದ ಆದೇಶದಲ್ಲಿ ಯಾವುದೇ ಸರ್ಕಾರಿ ನೌಕರರ ಹೆಸರಿಲ್ಲದಿದ್ದರೂ ಉದ್ದೇಶಪೂರ್ವಕವಾಗಿ ಹೆಸರುಗಳನ್ನು ಸೇರಿಸಿ ತೇಜೋವಧೆ ಮಾಡಲಾಗುತ್ತಿದೆ. ಇದರಿಂದ ಸರ್ಕಾರಿ ನೌಕರರ ನೈತಿಕ ಸ್ಥೈರ್ಯ ಕುಗ್ಗುವುದಲ್ಲದೆ, ಅವರ ಕುಟುಂಬದ ಸದಸ್ಯರೂ ಮಾನಸಿಕವಾಗಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ,


ಸಿದ್ದಾರ್ಥ ಆನಂದ್, ನವೀನ್, ದೇವರಾಜ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ, ಸಾಮಾಜಿಕ ಜಾಲತಾಣಗಳಲ್ಲಿರುವ ಅವಹೇಳನಕಾರಿ ಪೋಸ್ಟ್‌ಗಳನ್ನು ತಕ್ಷಣವೇ ಅಳಿಸುವಂತೆ ಅವರು ಒತ್ತಾಯಿಸಿದರು.


ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ಎಂ.ರವಿ, ಖಜಾಂಚಿ ಆರ್. ನರಸಿಂಹ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ನಾರಾಯಣಸ್ವಾಮಿ, ಪಿಡಿಒಗಳ ಸಂಘದ ಅಧ್ಯಕ್ಷ ಅಂಬರೀಶ್, ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಮುನೇಶ್, ಎಂ.ಜೆ.ನಾಗರಾಜ್, ಟೇಕಲ್ ಶಶಿಧರ್, ಎಂ.ಸಿ.ಮುನಿರಾಜು, ಎಸ್.ಪಿ. ಕಾಶೀನಾಥ್, ಅರುಣ್, ಸುರೇಶ್ ಬಾಬು, ಅಂಬರೀಶ್ ಬಾಬು, ಹರೀಂದ್ರಗೋಪಾಲ್, ಸಿ.ಆರ್.ಗೌಡ, ರಮೇಶ್ ನಾಯಕ್, ರಮೇಶ್, ಜವರೇಗೌಡ, ನವೀನ್, ತಿಮ್ಮರಾಯಪ್ಪ, ನಂದೀಶ್, ರವಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಶಿಕ್ಷಕರು ಹಾಜರಿದ್ದರು.