
ಬೆಂಗಳೂರು, ನ. ೨೨- ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕಳೆದ ಐದು ದಿನಗಳಿಂದ ಆಶಾ ಕಾರ್ಯಕರ್ತೆಯರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಹೋರಾಡುತ್ತಿರುವ ಸಾವಿರಾರು ಮಹಿಳೆಯರ ಅಳಲು ಕೇಳುವವರೇ ಇಲ್ಲ. ಸರ್ಕಾರದ ಜೊತೆಗಿನ ಸಂಧಾನವೂ ವಿಫಲವಾಗಿದೆ. ಪ್ರತಿಭಟನಾನಿರತ ೧೨ ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೂ ಸರ್ಕಾರಕ್ಕೆ ಮಾತ್ರ ಜಾಣ ಕುರುಡು ಪ್ರತಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಮಹಿಳೆಯರು ನೆನಪಾಗುತ್ತಾರೆ. ಗ್ಯಾರಂಟಿಗಳ ಹೆಸರಿನಲ್ಲಿ ಮಹಿಳೆಯರ ಮತ ಕೇಳುವ ಕಾಂಗ್ರೆಸ್ಗೆ, ಇಂದು ಬೀದಿಗಿಳಿದು ನ್ಯಾಯ ಕೇಳುತ್ತಿರುವ ಅದೇ ಮಹಿಳೆಯರ ಕೂಗು ಮಾತ್ರ ಕೇಳಿಸುತ್ತಿಲ್ಲ, ಕಾಣಿಸುತ್ತಿಲ್ಲ.
ಮುಖ್ಯಮಂತ್ರಿಶಿವಕುಮಾರ್ ಅವರೇ, ಮಹಿಳೆಯರ ಮತ ಬೇಕಾದಾಗ ಮನೆಮನೆಗೆ ಹೋಗುವ ನಿಮ್ಮ ನಾಯಕರು, ಇಂದು ಅದೇ ಮಹಿಳೆಯರು ತಮ್ಮ ಹಕ್ಕಿಗಾಗಿ ಬೀದಿಯಲ್ಲಿ ಕುಳಿತಿರುವಾಗ ಎಲ್ಲಿಗೆ ಹೋಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ
ಗ್ರಾಮೀಣ ಭಾಗದಲ್ಲಿ ಮನೆಮನೆಗೆ ತೆರಳಿ ಜನರ ಆರೋಗ್ಯ ಕಾಪಾಡುವ ಆಶಾ ಕಾರ್ಯಕರ್ತೆಯರ ಸೇವೆ ಬೇಕು. ಆದರೆ ಅವರ ಸೇವೆಗೆ ತಕ್ಕ ಗೌರವಧನ ನೀಡುವ ವಿಚಾರ ಬಂದಾಗ ಮಾತ್ರ ನಿಮ್ಮ ಸರ್ಕಾರದ ಬೊಕ್ಕಸ ಖಾಲಿಯಾಗುತ್ತದೆಯೇ
ನಿಮ್ಮ ಪಕ್ಷದ ಅತೃಪ್ತರಿಗೆ ಗ್ಯಾರೆಂಟಿ ಅನುಷ್ಠಾನ ಸಮಿತಿಗಳ ಹೆಸರಿನಲ್ಲಿ ಗಂಜಿ ಕೇಂದ್ರ ತೆರೆದು ಸಂಬಳ, ಸಾರಿಗೆ, ಸವಲತ್ತು ನೀಡಲು ನಿಮ್ಮ ಬಳಿ ಕೋಟ್ಯಂತರ ರೂಪಾಯಿ ಹಣವಿದೆ. ಆದರೆ ಪ್ರಣಾಳಿಕೆಯಲ್ಲಿ ಮಾತು ಕೊಟ್ಟಂತೆ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಲು ಮಾತ್ರ ದುಡ್ಡಿಲ್ಲ.
ಒಂದೆಡೆ ಗ್ಯಾರಂಟಿಗಳ ಹೆಸರಿನಲ್ಲಿ ದೊಡ್ಡ ದೊಡ್ಡ ಜಾಹೀರಾತು, ಸಮಾವೇಶ, ಪ್ರಚಾರಕ್ಕೆ ಯಾವ ಕೊರತೆಯೂ ಇಲ್ಲ. ಮತ್ತೊಂದೆಡೆ ಜನರ ಆರೋಗ್ಯಕ್ಕಾಗಿ ಹಗಲಿರುಳು ದುಡಿಯುವ ಆಶಾ ಕಾರ್ಯಕರ್ತೆಯರಿಗೆ ನ್ಯಾಯಯುತ ಗೌರವಧನ ನೀಡಲು ಸರ್ಕಾರಕ್ಕೆ ಮನಸ್ಸಿಲ್ಲ! ಎಂದು ವಾಗ್ದಾಳಿ ನಡೆಸಿದ್ದಾರೆ
ಗ್ಯಾರಂಟಿಗಳ ಹೆಸರಿನಲ್ಲಿ ಮಹಿಳೆಯರಿಗೆ ಆಮಿಷವೊಡ್ಡುವುದು ಮಹಿಳಾ ಸಬಲೀಕರಣವಲ್ಲ, ಅವರ ನ್ಯಾಯಯುತ ಹೋರಾಟಕ್ಕೆ ಸ್ಪಂದಿಸುವುದೇ ನಿಜವಾದ ಮಹಿಳಾ ಗೌರವ.
ಡಿ.ಕೆ. ಶಿವಕುಮಾರ್ ಅವರೇ, ಮಹಿಳೆಯರ ಮತಗಳಿಂದ ಅಧಿಕಾರಕ್ಕೆ ಬಂದು, ಇಂದು ಮಹಿಳೆಯರ ಪ್ರತಿಭಟನೆಯನ್ನೇ ನಿರ್ಲಕ್ಷಿಸುತ್ತಿರುವ ನಿಮ್ಮ ಕಾಂಗ್ರೆಸ್ ಸರ್ಕಾರದ ಉದ್ಧಟತನಕ್ಕೆ ಮಹಿಳೆಯರೇ ತಕ್ಕ ಪಾಠ ಕಲಿಸುವ ದಿನ ದೂರವಿಲ್ಲ ಎಂದಿದ್ದಾರೆ
ಆಶಾ ಕಾರ್ಯಕರ್ತೆಯರನ್ನು ಇನ್ನೆಷ್ಟು ದಿನ ಬೀದಿಯಲ್ಲೇ ಕೂರಿಸುತ್ತೀರಿ? ಅವರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಿ, ಗೌರವಯುತ ಪರಿಹಾರ ನೀಡಿ. ಎಂದು ಆಗ್ರಹಿಸಿದ್ದಾರೆ
ಮುಖ್ಯಮಂತ್ರಿ ಶಿವಕುಮಾರ್ ಅವರೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಎಸುರ್ಜೆವಾ ಲ ಅವರೇ,
ಸಂವಿಧಾನದ ದಿನದಂದು ಸಂವಿಧಾನದ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡುವ ಮೊದಲು, ನೀವು ಕರ್ನಾಟಕದ ಸ್ವಾಭಿಮಾನಿ ಮಹಿಳೆಯರಿಗೆ ಕೊಟ್ಟ ಮಾತುಗಳ ಬಗ್ಗೆ ಉತ್ತರಿಸುವ ನೈತಿಕತೆ ತೋರಿಸಿ.
ನಿಮಗೆ ಆತ್ಮಸಾಕ್ಷಿ ಇದ್ದರೆ, ಸಂವಿಧಾನದ ಮೇಲೆ ಕೈಯಿಟ್ಟು ಪ್ರಮಾಣ ಮಾಡಿ ಹೇಳಿ:
ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದು ನಿಜವೋ, ಸುಳ್ಳೋ?ಗೌರವಧನ ಹೆಚ್ಚಿಸುವ ಭರವಸೆ ನೀಡಿದ್ದು ನಿಜವೋ, ಸುಳ್ಳೋ ಆ ಭರವಸೆಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿದ್ದು ನಿಜವೋ, ಸುಳ್ಳೋ ಉತ್ತರಿಸಿ ಎಂದು ಆರ್ ಅಶೋಕ್ ಮತ್ತೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ























