
ವಿಜಯಪುರ, ಸೆ. 16: ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಕ್ರೀಡೆಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ನಿರಂತರ ಕ್ರೀಡಾ ಚಟುವಟಿಕೆಗಳಿಂದ ದೇಹಕ್ಕೆ ಚೈತನ್ಯ, ಶಕ್ತಿ, ಚುರುಕುತನ ಮತ್ತು ಸಹನೆ ಬೆಳೆದು ಮನಸ್ಸಿನ ಒತ್ತಡ ದೂರವಾಗುತ್ತದೆ ಎಂದು ರೂಬಿ ಆಂಗ್ಲ ಪ್ರೌಢಶಾಲೆಯ ಆಡಳಿತಾಧಿಕಾರಿ ಸೈಯದ್ ರಫೀಕ್ ಹೇಳಿದರು.
ಪಟ್ಟಣದ ರೂಬಿ ಆಂಗ್ಲ ಪ್ರೌಢಶಾಲಾ ಆವರಣದಲ್ಲಿ ಕೇಂದ್ರ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೇರಾ ಯುವ ಭಾರತ್, ದೇವನಹಳ್ಳಿಯ ಆಕಾಶ್ ಗ್ಲೋಬಲ್ ಕಾಲೇಜ್‌ನ ಎನ್.ಎಸ್.ಎಸ್ ಘಟಕ ಹಾಗೂ ನೈಸ್ ಯುವಜನ ಸೇವಾಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಬ್ಲಾಕ್ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇದೇ ವೇಳೆ ಮಾತನಾಡಿದ ಆಕಾಶ್ ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ ಎಸ್.ಎ. ಖಲೀಲುಲ್ಲಾ, ಕ್ರೀಡೆಗಳು ಕೇವಲ ಮನೋರಂಜನೆಯಲ್ಲ, ಅವು ಯಶಸ್ವಿ ಬದುಕಿನ ಅಡಿಪಾಯ ಎಂದರು.
ಕ್ರೀಡಾಕೂಟದಲ್ಲಿ ಯುವಕರಿಗಾಗಿ ವಾಲಿಬಾಲ್, ಕಬಡ್ಡಿ, ಓಟ, ಉದ್ದ ಜಿಗಿತ, ಶಾಟ್ ಪುಟ್, ಡಿಸ್ಕಸ್ ಥ್ರೋ, ಚೆಸ್ ಹಾಗೂ ಯುವತಿಯರಿಗಾಗಿ ಖೋ-ಖೋ, ತ್ರೋಬಾಲ್, ಓಟ, ಉದ್ದ ಜಿಗಿತ, ನಿಂಬೆಹಣ್ಣಿನ ಓಟ, ಹಗ್ಗ ಜಗ್ಗಾಟ ಮತ್ತು ಡಿಸ್ಕಸ್ ಥ್ರೋ ಸ್ಪರ್ಧೆಗಳನ್ನು ನಡೆಸಿ, ವಿಜೇತರಿಗೆ ಪದಕ, ಪ್ರಶಸ್ತಿ ಪತ್ರ ಹಾಗೂ ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಪುರಸಭಾ ಸದಸ್ಯ ಎ.ಆರ್. ಅನೀಫ್ ಉಲ್ಲಾ, ಮುಖ್ಯೋಪಾಧ್ಯಾಯಿನಿ ನಿಖ್ಖತ್ ಸಲ್ಮಾ, ದೈಹಿಕ ಶಿಕ್ಷಣ ನಿರ್ದೇಶಕಿ ಫ್ಲೋರಾನ್ಸ್ ಡಯಾನ, ಪ್ರಶಾಂತ್, ಶಿಕ್ಷಕರಾದ ಜಿ.ಎಂ. ಬಿಂಬಿಕಾ, ಎ.ಎಂ. ಗಾಯಿತ್ರಿ, ಕೆ.ಎಸ್. ಶ್ವೇತಾ, ವಿ. ಸರಸ್ವತಿ, ಕ್ರೀಡಾಪಟುಗಳಾದ ಹೆಚ್.ಎಸ್. ಶಶಾಂಕ್, ಹೆಚ್.ಜಿ. ಶಶಾಂಕ್, ಎನ್. ಪ್ರಸನ್ನ ಕುಮಾರ್, ಡಿ.ಎಸ್. ಬೀರೇಶ್, ವಿಂದ್ಯಾ ಹಾಗೂ ತಾಲ್ಲೂಕಿನ ಯುವಕ-ಯುವತಿ ಸಂಘಗಳ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
























