Home ಜಿಲ್ಲೆ ಕಲಬುರಗಿ ಫೈಜಾನ್ ಆಲ್ರೌಂಡ್ ಮಿಂಚು: ಜಯನಗರ ಕ್ರಿಕೆಟರ್ಸ್ ವಿರುದ್ಧ ಕ್ರಿಕೆಟ್ ಅನಂತಪುರಕ್ಕೆ 10 ರನ್‍ಗಳ ರೋಚಕ ಜಯ

ಫೈಜಾನ್ ಆಲ್ರೌಂಡ್ ಮಿಂಚು: ಜಯನಗರ ಕ್ರಿಕೆಟರ್ಸ್ ವಿರುದ್ಧ ಕ್ರಿಕೆಟ್ ಅನಂತಪುರಕ್ಕೆ 10 ರನ್‍ಗಳ ರೋಚಕ ಜಯ

ಕಲಬುರಗಿ: ಸ್ಥಳೀಯ ಕೆಬಿಎನ್ ಕ್ರಿಕೆಟ ಗೋಲ್ಡ್ ಕಪ್ 2026 ರಲ್ಲಿ ರವಿವಾರ ಸಿ. ಮೊಹಮ್ಮದ್ ಫೈಜಾನ್ ಅವರ ಅದ್ಭುತ ಆಲ್ರೌಂಡ್ ಪ್ರದರ್ಶನದ ಬಲದಿಂದ ಕ್ರಿಕೆಟ್ ಅನಂತಪುರ ತಂಡವು 50 ಓವರ್ಗಳ ರೋಚಕ ಪಂದ್ಯದಲ್ಲಿ ಜಯನಗರ ಕ್ರಿಕೆಟರ್ಸ್ ವಿರುದ್ಧ 10 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಮುಖ್ಯ ಅತಿಥಿ ಎಚ್ ಶೇಷಗಿರಿ ಟಾಸ್ ಮಾಡಿದರು.
ಟಾಸ್ ಗೆದ್ದು
ಮೊದಲು ಬ್ಯಾಟಿಂಗ್ ಮಾಡಿದ ಕ್ರಿಕೆಟ್ ಅನಂತಪುರ ತಂಡವು ಆರಂಭಿಕ ಆಘಾತದಿಂದ ಚೇತರಿಸಿಕೊಂಡು ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 242 ರನ್ಗಳ ಸವಾಲಿನ ಮೊತ್ತ ಕಲೆಹಾಕಿತು. ಆರಂಭಿಕ ಆಟಗಾರ ಯು. ಜೈವೀರ್ ರೆಡ್ಡಿ ಬೇಗನೆ ವಿಕೆಟ್ ಒಪ್ಪಿಸಿದ ನಂತರ, ಸೈಯದ್ ಇಬ್ರಾಹಿಂ ಘೌಸ್ 45 ಎಸೆತಗಳಲ್ಲಿ ಬಿರುಸಿನ 43 ರನ್ ಗಳಿಸಿ ಇನ್ನಿಂಗ್ಸ್ಗೆ ವೇಗ ನೀಡಿದರು. ಆದರೆ, ಮಧ್ಯಮ ಓವರ್ಗಳಲ್ಲಿ ವಿಜಿತ್ (47ಕ್ಕೆ 2) ಮತ್ತು ರಫಾ ಪೂಣಚ್ಚ (27ಕ್ಕೆ 1) ಅವರ ದಾಳಿಗೆ ನಲುಗಿದ ಅನಂತಪುರ 24 ಓವರ್ಗಳೊಳಗೆ 115 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಈ ನಿರ್ಣಾಯಕ ಹಂತದಲ್ಲಿ ತಂಡಕ್ಕೆ ಆಸರೆಯಾದ ಸಿ. ಮೊಹಮ್ಮದ್ ಫೈಜಾನ್, ತಾಳ್ಮೆ ಮತ್ತು ಆಕ್ರಮಣಕಾರಿ ಆಟದ ಸಮ್ಮಿಶ್ರಣದೊಂದಿಗೆ 115 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ ಭರ್ಜರಿ 94 ರನ್ ಸಿಡಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಜೈವಾಂಶ್ ‘ರಿಟೈರ್ಡ್ ಔಟ್’ ಆಗುವ ಮುನ್ನ 42 ರನ್ಗಳ ಉಪಯುಕ್ತ ಕಾಣಿಕೆ ನೀಡಿದರು. ಈ ಜೋಡಿ ಶತಕಕ್ಕೂ ಅಧಿಕ ರನ್ಗಳ ಮಹತ್ವದ ಜೊತೆಯಾಟವಾಡಿತು. ಜಯನಗರ ಪರ ಕೃಷ್ ಆರ್ 29 ರನ್ಗಳಿಗೆ 3 ವಿಕೆಟ್ ಪಡೆದು ಮಿಂಚಿದರೆ, 29 ಇತರೆ ರನ್ಗಳು ಅನಂತಪುರದ ಮೊತ್ತವನ್ನು ಹಿಗ್ಗಿಸಿದವು.
243 ರನ್ಗಳ ಗುರಿ ಬೆನ್ನಟ್ಟಿದ ಜಯನಗರ ಕ್ರಿಕೆಟರ್ಸ್ ಮೊದಲ 16 ಓವರ್ಗಳಲ್ಲಿ ವರ್ಷಿತ್ ಕುಮಾರ್ ಮತ್ತು ಜೈವಾಂಶ್ ಅವರ ದಾಳಿಗೆ ಸಿಲುಕಿ ಹಸ್ನೈನ್ ಹಾಗೂ ಗಜಾನನ್ ಜಿ.ಕೆ ಅವರ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ನಂತರ ಜೊತೆಯಾದ ಶ್ರೀ ಗಣೇಶ್ (44) ಮತ್ತು ರಫಾ ಪೂಣಚ್ಚ ಪ್ರತಿಹೋರಾಟದ ಜೊತೆಯಾಟವಾಡಿದರು. 5 ಬೌಂಡರಿ ಹಾಗೂ 2 ಸಿಕ್ಸರ್ಗಳೊಂದಿಗೆ 63 ಎಸೆತಗಳಲ್ಲಿ 62 ರನ್ ಚಚ್ಚಿದ ಪೂಣಚ್ಚ ಅಪಾಯಕಾರಿಯಾಗಿ ಗೋಚರಿಸಿದರು. ಒಂದು ಹಂತದಲ್ಲಿ ಜಯನಗರ 4 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು.

ಆದರೆ, ಪಂದ್ಯದ 38ನೇ ಓವರ್ನಲ್ಲಿ ಅನಿರೀಕ್ಷಿತ ತಿರುವು ಎದುರಾಯಿತು. ವೈ. ಲಿಖಿತ್ (31ಕ್ಕೆ 1) ಬೌಲಿಂಗ್ನಲ್ಲಿ ಪೂಣಚ್ಚ ಸ್ಟಂಪ್ ಔಟ್ ಆಗುವುದರೊಂದಿಗೆ, ಜಯನಗರ ಕೇವಲ 3 ರನ್ಗಳ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡು ಕುಸಿತ ಕಂಡಿತು. ಸಂತೋಷ್ ಮತ್ತು ವಿಜಿತ್ ಸತತವಾಗಿ ಶೂನ್ಯಕ್ಕೆ ಔಟಾದರು. ಕೊನೆಯಲ್ಲಿ ಶ್ರವಂತ್ ಗೌಡ ಎ. (34) ಮತ್ತು ವೆಂಕಟ್ ರಾಘವ್ ಆರ್. ಮಡಿವಾಳ (ಅಜೇಯ 30) ತಂಡವನ್ನು ಗೆಲುವಿನ ದಡ ಸೇರಿಸಲು ಶತಪ್ರಯತ್ನ ನಡೆಸಿದರಾದರೂ, ಬೌಲಿಂಗ್ನಲ್ಲೂ ಮಿಂಚಿದ ಫೈಜಾನ್ 46 ರನ್ಗಳಿಗೆ 2 ವಿಕೆಟ್ ಕಬಳಿಸಿ ಜಯನಗರ ತಂಡವನ್ನು 232/7ಕ್ಕೆ ಕಟ್ಟಿಹಾಕುವ ಮೂಲಕ ಅನಂತಪುರಕ್ಕೆ ರೋಚಕ ಗೆಲುವು ತಂದುಕೊಟ್ಟರು. ಮ್ಯಾನ್ ಆಫ್ ದಿ ಮ್ಯಾಚ್ ಫೈಜಾನ್.