Home Uncategorized ರಾಷ್ಟ್ರಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಮಾಲೂರು ವಿದ್ಯಾರ್ಥಿಗಳ ಅಮೋಘ ಸಾಧನೆ: ಪದಕಗಳ ಬೇಟೆ

ರಾಷ್ಟ್ರಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಮಾಲೂರು ವಿದ್ಯಾರ್ಥಿಗಳ ಅಮೋಘ ಸಾಧನೆ: ಪದಕಗಳ ಬೇಟೆ

ಮಾಲೂರು,ನ.24- ಹೈದರಾಬಾದ್‌ನಲ್ಲಿ ‘AMASS’ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ೨೪ನೇ ಅಖಿಲ ಭಾರತ ಸಾಂಸ್ಕೃತಿಕ ನೃತ್ಯ ಸ್ಪರ್ಧೆ ಮತ್ತು ಉತ್ಸವ ‘ನೃತ್ಯ ಪ್ರವಾಹ’ದಲ್ಲಿ ಮಾಲೂರಿನ ಶ್ರೀ ಲಲಿತ ಕಲಾ ಅಕಾಡೆಮಿ, ಕಲಾ ಶಾಲೆ(ರಿ)ಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.

ಜೂನಿಯರ್ ವಿಭಾಗದ ಯುಗಳ ಭರತನಾಟ್ಯ ಸ್ಪರ್ಧೆಯಲ್ಲಿ ನಿವ್ನಿತಾ ಮತ್ತು ನವ್ಯುಕ್ತ ಜೋಡಿ ಪ್ರಥಮ ಪ್ರಶಸ್ತಿ ಗೆದ್ದು ವಿಶೇಷ ಸಾಧನೆ ಮಾಡಿದ್ದಾರೆ. ಅದೇ ರೀತಿ ಏಕವ್ಯಕ್ತಿ ಭರತನಾಟ್ಯದ ಜೂನಿಯರ್ ವಿಭಾಗದಲ್ಲಿ ನಿವ್ನಿತಾ ಮತ್ತು ಚರಣ್ಯ ಪ್ರಥಮ ಸ್ಥಾನ ಪಡೆದರೆ, ಪುನರ್ವಿ, ವೇದಪ್ರಿಯಾ, ಮಾನ್ವಿತಾ ಹಾಗೂ ಗಾನವಿ ದ್ವಿತೀಯ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಇದೇ ವಿಭಾಗದಲ್ಲಿ ದೀಪ್ತಿಶ್ರೀ, ಯತಿಶ್ರೀ, ಹಿತಶ್ರೀ, ಚಂದನಾ ಮತ್ತು ಕೃತಿಕಾ ತೃತೀಯ ಸ್ಥಾನ ಗಿಟ್ಟಿಸಿ ಗಮನ ಸೆಳೆದಿದ್ದು, ಕಿರಿಯರ ವಿಭಾಗದ ಏಕವ್ಯಕ್ತಿ ಭರತನಾಟ್ಯದಲ್ಲಿ ನವ್ಯುಕ್ತ ಮತ್ತು ಶ್ರಾಂಜಲಿ ತೃತೀಯ ಪ್ರಶಸ್ತಿ ಗಳಿಸಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.

ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳೆಲ್ಲರೂ ಶ್ರೀ ಲಲಿತ ಕಲಾ ಅಕಾಡೆಮಿಯ ನೃತ್ಯಗುರು ಡಾ. ಅರುಣಾ ಜಿ.ಎನ್. ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದು, ಗುರುಗಳ ಶ್ರಮಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿರುವ ಡಾ. ಅರುಣಾ ಅವರು, ಮಕ್ಕಳ ನಿರಂತರ ಪರಿಶ್ರಮ, ಶಿಸ್ತು, ಕಲೆಯ ಮೇಲಿನ ಅಪಾರ ಆಸಕ್ತಿ ಹಾಗೂ ಪೋಷಕರ ಪ್ರೋತ್ಸಾಹವೇ ಈ ಯಶಸ್ಸಿಗೆ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರತಿಭೆಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲೂ ಉನ್ನತ ಸಾಧನೆ ಮಾಡುವ ಮೂಲಕ ನೃತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಲಿ ಎಂದು ಅವರು ಶುಭ ಹಾರೈಸಿದ್ದಾರೆ.

ರಾಷ್ಟ್ರಮಟ್ಟದ ವೇದಿಕೆಯಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ತಾಲ್ಲೂಕಿನ ಕೀರ್ತಿ ಪತಾಕೆ ಹಾರಿಸಿದ ಬಾಲ ಕಲಾವಿದರಿಗೆ ಸ್ಥಳೀಯ ಕಲಾಭಿಮಾನಿಗಳು ಮತ್ತು ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.