
ವಿಜಯಪುರ,ನ.24- ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಮರ್ಪಕ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಎಬಿವಿಪಿ (ABVP) ಕಾರ್ಯಕರ್ತರು ಸೋಮವಾರ ಪಟ್ಟಣದ ಅಂಗಡಿ-ಮುಂಗಟ್ಟುಗಳು ಹಾಗೂ ಸಾರ್ವಜನಿಕರಿಂದ ಭಿಕ್ಷೆ ಬೇಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಬಸ್ಗಳ ದುರಸ್ತಿ, ಡೀಸೆಲ್ ಹಾಗೂ ಹೊಸ ಬಸ್ಗಳ ಖರೀದಿಗೆ ರಾಜ್ಯ ಸರ್ಕಾರದ ಬಳಿ ಹಣವಿಲ್ಲದ ಕಾರಣ ನಾವು ಭಿಕ್ಷಾಟನೆಗೆ ಇಳಿದಿದ್ದೇವೆ ಎಂದು ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಮಾತನಾಡಿದ ಜಿಲ್ಲಾ ವಿಭಾಗದ ಸಂಚಾಲಕ ವಿನಾಯಕ ಕುಪ್ಪ, “ಈಗಾಗಲೇ 20ಕ್ಕೂ ಹೆಚ್ಚು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಪರೀಕ್ಷಾ ಸಮಯ ಹತ್ತಿರವಿದ್ದರೂ, ಈ ಹಿಂದೆ ಸಂಚರಿಸುತ್ತಿದ್ದ 25 ಬಸ್ಗಳ ಬದಲಿಗೆ ಈಗ ಕೇವಲ 5-6 ಬಸ್ಗಳು ಮಾತ್ರ ಓಡಾಡುತ್ತಿದ್ದು, ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ” ಎಂದರು.
ತಕ್ಷಣವೇ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸದಿದ್ದರೆ, ಮುಂದಿನ ದಿನಗಳಲ್ಲಿ ಸಾವಿರಾರು ವಿದ್ಯಾರ್ಥಿಗಳೊಂದಿಗೆ ಸಚಿವರ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಮಯೂರಗೌಡ, ನಂದಕಿಶೋರ್, ತ್ರಿವೇಣಿ, ರಾಮಕೃಷ್ಣ, ಮನೋಜ್ ಹಾಗೂ ಚಂದ್ರು ಉಪಸ್ಥಿತರಿದ್ದರು.
























